ಶೈಕ್ಷಣಿಕ ಕಾರ್ಯಗಳಿಗೆ ಆದ್ಯತೆ ನೀಡಿ ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ಬಳಸುವಂತೆ ಹರೀಶ್ ಆಚಾರ್ಯ ಮನವಿ
ಮಂಗಳೂರು, ಮಾ.19: ವಿಶ್ವದ ಅತ್ಯಂತ ದೊಡ್ಡ ಪ್ರಜಾಸತ್ತಾತ್ಮಕ ದೇಶದ ಲೋಕಸಭಾ ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಆದರೆ ಚುನಾವಣಾ ಕಾರ್ಯ ನಿರ್ವಹಣೆಗೆ ಶಿಕ್ಷಕರನ್ನು ನಿಯೋಜಿಸುವ ಸಂದರ್ಭದಲ್ಲಿ ಚುನಾವಣಾ ಆಯೋಗವು ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಚಟುವಟಿಕೆಗಳು, ಪರೀಕ್ಷಾ ಕಾರ್ಯ, ಶಿಕ್ಷಕರ ವಯೋನಿವೃತ್ತಿ, ಅನಾರೋಗ್ಯ ಇನ್ನಿತರ ಅಗತ್ಯ ಅಂಶಗಳನ್ನು ಆರಿಸಿಕೊಂಡು ನಿಯೋಜಿಸಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ. ಎಸ್ ಆರ್ ಹರೀಶ್ ಆಚಾರ್ಯ ಅವರು ಚುನಾವಣಾಧಿಕಾರಿಗೆ ಮನವಿ ಮಾಡಿದ್ದಾರೆ.
ಶೈಕ್ಷಣಿಕ ವರ್ಷದ ಅಂತ್ಯದ ಈ ಸಂದ‘ರ್ದಲ್ಲಿ ಎಲ್ಲಾ ಶಿಕ್ಷಕರು ಪರೀಕ್ಷಾ ಕಾರ್ಯ ಹಾಗೂ ಅದರ ಮೌಲ್ಯಮಾಪನಾ ಕಾರ್ಯದ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಕರು ಈ ಕಾರ್ಯದಲ್ಲಿ ಸಂಪೂರ್ಣ ತೊಡಗಿಕೊಳ್ಳುವುದು ಅತ್ಯಂತ ಅವಶ್ಯಕವೂ ಆಗಿದೆ. ಆದರೆ ಶಿಕ್ಷಕರು ವಿಚಕ್ಷಣ ದಳ, ಗಡಿ ತಪಾಸಣೆ ಇನ್ನಿತರ ಚುನಾವಣಾ ಕಾರ್ಯಗಳನ್ನೂ ನಿರ್ವಹಿಸಬೇಕಾದ ಸಂದರ್ಭದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದುದರಿಂದ ಶಿಕ್ಷಕರನ್ನು ನಿಯೋಜಿಸುವ ಸಂದರ್ಭದಲ್ಲಿ ಚುನಾವಣಾ ಆಯೋಗವು ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆಯನ್ನು ನೀಡಿ ಯೋಚಿಸಿ ನಿಯೋಜಿಸಬೇಕೆಂದು ಆಗ್ರಹಿಸಿದ್ದಾರೆ.
ಯಾವುದೇ ಸಿಬ್ಬಂದಿಯನ್ನು ನಿವೃತ್ತಿಗೆ ಆರು ತಿಂಗಳು ಅಥವಾ ಅದಕ್ಕಿಂತ ಕಡಿಮೆ ಸೇವಾವಧಿ ಇರುವವರನ್ನು ನಿಯೋಜಿಸಬಾರದೆಂದು ಚುನಾವಣಾ ಆಯೋಗದ ನಿಯಮವಿದೆ. ಆದರೆ ಅನೇಕ ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಹಾಗೆಯೇ ದೈಹಿಕ ಅನಾರೋಗ್ಯದಿಂದ ಬಳಲುತ್ತಿರುವ ಶಿಕ್ಷಕರನ್ನು ಹಾಗೂ ಗರ್ಭಿಣಿಯರನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಿ ಚುನಾವಣಾ ಕರ್ತವ್ಯಗಳಿಂದ ದೂರವಿಡಬೇಕೆಂದು ಕೂಡಾ ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ಹರೀಶ್ ಆಚಾರ್ಯ ತಿಳಿಸಿದ್ದಾರೆ.