ʼಹಿಂದೂಗಳನ್ನು ಸೈನಿಕೀಕರಣಗೊಳಿಸುವʼ ಸಭೆ ಆಯೋಜಿಸಿದ ಅಖಿಲ ಭಾರತ ಹಿಂದೂ ಮಹಾಸಭಾ
►ಸಾಮಾಜಿಕ ಜಾಲತಾಣದಲ್ಲಿ ಆಹ್ವಾನ ಪತ್ರಿಕೆ ವೈರಲ್ ►ಸಂವಿಧಾನ ವಿರೋಧಿ ಸಭೆಗೆ ಅವಕಾಶ ನೀಡಿರುವ ಸರಕಾರದ ವಿರುದ್ಧ ಆಕ್ರೋಶ
ಬೆಂಗಳೂರು: "ಹಿಂದೂ ರಾಷ್ಟ್ರ ನಿರ್ಮಿಸುವ ಹಾಗೂ ಹಿಂದೂಗಳನ್ನು ಸೈನಿಕೀಕರಣಗೊಳಿಸುವ" ಪ್ರತಿಜ್ಞೆ ಕೈಗೊಳ್ಳಲೆಂದು ಅಖಿಲ ಭಾರತ ಹಿಂದೂ ಮಹಾಸಭಾವು ಜೂನ್ 16ರಂದು ಮಂಗಳೂರಿನ ಕದ್ರಿ ಯೋಗೇಶ್ವರ ಮಠದಲ್ಲಿ ಸಭೆಯೊಂದನ್ನು ಆಯೋಜಿಸಿದೆ ಎನ್ನಲಾಗಿದ್ದು, ಇದರ ಆಹ್ವಾನ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಖಂಡ ಹಿಂದೂ ರಾಷ್ಟ್ರದ ಪ್ರತಿಜ್ಞೆ ಮತ್ತು ಕರ್ನಾಟಕ ರಾಜ್ಯದ ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟದ ರಾಜ್ಯಮಟ್ಟದ ಬೃಹತ್ ಸಭೆ ಇದಾಗಿದ್ದು, ಮುಖ್ಯ ಅತಿಥಿಯಾಗಿ ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ಆಹ್ವಾನಿಸಿದೆ. ಸಮಸ್ತ ಹಿಂದೂಗಳನ್ನು ಒಗ್ಗೂಡಿಸಲು ಈ ಸಭೆಯಲ್ಲಿ ಮುತಾಲಿಕ್ ಉಪಸ್ಥಿತಿ ಅಮೂಲ್ಯವಾದುದು ಎಂದು ವೈರಲ್ ಆಗಿರುವ ಆಹ್ವಾನ ಪತ್ರಿಕೆಯಲ್ಲಿ ಅಖಿಲ ಭಾರತ ಮಹಾಸಭಾ ಮನವಿ ಮಾಡಿದೆ.
ಅಖಂಡ ಹಿಂದೂ ರಾಷ್ಟ್ರ ನಿರ್ಮಾಣದ ಪ್ರತಿಜ್ಞೆಗಾಗಿ ನಡೆಯುವ ಈ ಸಭೆಯು ಸಂವಿಧಾನ ವಿರೋಧಿ ಧೋರಣೆಯನ್ನು ಹೊಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಜನರು, ಈ ಸಭೆಯ ಕುರಿತು ಸರಕಾರ, ಪೊಲೀಸ್ ಇಲಾಖೆ ಹಾಗೂ ಗುಪ್ತಚರ ಇಲಾಖೆಗಳು ತಳೆದಿರುವ ನಿಷ್ಕ್ರಿಯ ಧೋರಣೆಯನ್ನು ಖಂಡಿಸಿದ್ದಾರೆ.
“ಹಿಂದೂ ರಾಷ್ಟ್ರ ಮಾಡುವ ಪ್ರತಿಜ್ಞೆ ಮಾಡುತ್ತಾರಂತೆ, ಜೊತೆಗೆ ಹಿಂದೂಗಳನ್ನು ಸೈನಿಕೀಕರಣ ಮಾಡುತ್ತಾರಂತೆ. ಈ ರಾಜ್ಯದಲ್ಲಿ ಪೊಲೀಸ್, ಗುಪ್ತಚರ ಇಲಾಖೆ ಎಲ್ಲ ಇವೆಯೇ? ಇಂತಹ ದೇಶದ್ರೋಹಿ ಸಭೆ ನಡೆಸುತ್ತಿರುವ ಎಲ್ಲರನ್ನೂ ಬಂಧಿಸಿ, ಅವರ ವಿರುದ್ಧ ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕಿದೆ. ನೋಡೋಣ, ಕಾಂಗ್ರೆಸ್ ಸರ್ಕಾರಕ್ಕೆ ಅಷ್ಟೊಂದು ಬೆನ್ನು ಮೂಳೆ ಇದೆಯಾ ಅಂತ?” ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಆಕ್ರೋಶ ಹೊರ ಹಾಕಿದ್ದಾರೆ.
ಈ ಸಭೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹಲವರು, ಈ ಸಭೆ ಸಂವಿಧಾನ ವಿರೋಧಿಯಾಗಿದ್ದು, ಈ ಸಭೆಗೆ ನೀಡಲಾಗಿರುವ ಅನುಮತಿಯನ್ನು ಪೊಲೀಸರು ಹಿಂಪಡೆಯಬೇಕು. ಧಾರ್ಮಿಕ ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿರುವ ಸಭೆಯ ಸಂಘಟಕರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.