ನಾನು ಯಾರ ಕಡೆಯಿಂದಲೂ ರೊಕ್ಕ ತಗೊಳಲ್ಲ, ಯಾರಿಗೂ ಒಂದು ರೂಪಾಯಿ ಕೊಡೊಲ್ಲ : ಸಂಸದ ಜಿಗಜಿಣಗಿ
ರಮೇಶ ಜಿಗಜಿಣಗಿ
ಸಂದರ್ಶನ : ಇಬ್ರಾಹಿಂ ಅಡ್ಕಸ್ಥಳ
ಮಂಗಳೂರು : ನೋಡ್ರಿ, ನನ್ನ ಭಾಷಣವೇ ಹೀಂಗೆ. ಇಚ್ಛೆಯಿದ್ದವರು ಹಾಕ್ಲಿ ಅಲ್ಲದಿದ್ದರೆ ಬಿಡ್ರಪ್ಪ. ರೊಕ್ಕ ಮಾತ್ರ ಯಾರಿಗೂ ಕೊಡೊಕಾಗಲ್ಲ. ನಾನು ಯಾರ ಕಡೆಯಿಂದಲೂ ರೊಕ್ಕ ತಗೊಳಲ್ಲ. ಯಾರಿಗೂ ಒಂದು ರೂಪಾಯಿ ಕೊಡೊಲ್ಲ. ಪತ್ರಿಕೆಯವರಿಗೂ ಅಷ್ಟೇ. ಬೇಕಿದ್ದರೆ ಬಿಜಾಪುರದಲ್ಲಿ ಕೇಳಿ. ಯಾರೂ ನನ್ನ ಸನಿಹ ಬರೊಲ್ಲ. ಹೂಂ... ಯಾರಿಗಾದರೂ ರೊಕ್ಕ ಕೊಟ್ಟಿದ್ದರೆ ಹೇಳಲಿ. ನೈತಿಕತೆ ಇತ್ತಾದರೆ ಮನುಷ್ಯ ಯಾವುದಕ್ಕೂ ಹೆದರಬೇಕಾಗಿಲ್ಲ’’ ಹೀಗೆಂದವರು ಕೇಂದ್ರದ ಮಾಜಿ ಸಚಿವ ಹಾಗೂ ಬಿಜಾಪುರದ ಸಂಸದ ರಮೇಶ ಚಂದಪ್ಪ ಜಿಗಜಿಣಗಿ.
ರವಿವಾರ ನಗರಕ್ಕೆ ಆಗಮಿಸಿದ್ದ ಅವರು ಕರ್ನಾಟಕ-ಕೇರಳ ಗಡಿಯಲ್ಲಿರುವ ಬಾಯಾರಿನಲ್ಲಿ ಗಡಿನಾಡ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ತಮ್ಮೊಂದಿಗೆ ವಾಹನದಲಿದ್ದ ಈ ವರದಿಗಾರನೊಂದಿಗೆ ಲೋಕಾಭಿರಾಮವಾಗಿ ಮಾತನಾಡಿದರು.
ತಮ್ಮ ಬದುಕಿನ ಹಾದಿಯ ಬಗ್ಗೆ ಮೆಲುಕು ಹಾಕಿದ ಜಿಗಜಿಣಗಿ ಅವರು ‘‘ನನಗೆ ಹೆಗಡೆ ಮತ್ತು ಪಟೇಲ್ ನೈತಿಕತೆಯ ಪಾಠ ಕಲಿಸಿದ್ದರು. ಬೆಂಗಳೂರಿನಲ್ಲಿ ನನ್ನದೊಂದು ಸೈಟು ಇತ್ತು. ಎರಡು ಜಾಗ ಇತ್ತು. ಅದನ್ನು ಮಾರಿದೆ. 10 ಸಿಆರ್ ಬಂತು ಒಂದು ಎಕ್ರೆಯಲ್ಲಿ. ಊರಲ್ಲಿ ಒಳ್ಳೆ ಮನೆಕಟ್ಟಿಸಿದ್ದೇನೆ. ನನ್ನ ಮನೆಯ ಹೆಸರು ‘ಸನ್ಮಾನ್ಯ ರಾಮಕೃಷ್ಣ ಹೆಗಡೆ -ಜೆಎಚ್ ಪಟೇಲ್ ಅವರ ನಿವಾಸ’ ಎಂದು. ಎಂಟ್ರೆನ್ಸ್ನಲ್ಲೆ ದೊಡ್ಡದಾಗಿ ಗೋಲ್ಡನ್ ಅಕ್ಷರದಲ್ಲಿ ಹೆಸರು ಬರೆದು ಹಾಕಿಸಿದ್ದೇನೆ ಎಂದು ವಿವರಿಸಿದರು.
ದೇಶದಲ್ಲಿ , ರಾಜ್ಯದಲ್ಲಿ 70 ವರ್ಷಗಳಿಂದಲೂ ದಲಿತರು ತಮ್ಮ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ. ಆದರೆ ದಲಿತರನ್ನು ಕೇಳುವವರು ಇಲ್ಲ. ದಲಿತರಿಗೆ ದಿಕ್ಕಿಲ್ಲ. ಇಷ್ಟೆಲ್ಲಾ ಸ್ವಾಮೀಜಿಗಳು ಸಮಾಜದಲ್ಲಿದ್ದರೂ ದಲಿತರ ಪರ ಧ್ವನಿಯೆತ್ತುವ ಒಬ್ಬನೇ ಸ್ವಾಮೀಜಿ ಕೂಡಾ ಇಲ್ಲ. ನಾನು ಇದನ್ನು ಗಮನಿಸುತ್ತಾ ಇದ್ದೇನೆ. ಧರ್ಮ, ಮಠದ ಕೆಲಸ ಮಾಡಬೇಕಾದ ಸ್ವಾಮೀಜಿಗಳು ಕೇವಲ ತಮ್ಮ ಸಮುದಾಯದ ಪರ ಧ್ವನಿಯೆತ್ತುತ್ತಿದ್ದಾರೆ. ಧರ್ಮದ ಕೆಲಸ ಮಾಡಬೇಕಾದ ಸ್ವಾಮೀಜಿಗಳಿಗೆ ರಾಜಕೀಯ ಯಾಕೆ ಎಂದು ಪ್ರಶ್ನಿಸಿದರು.
‘‘ನಾನು ಮೊದಲ ಬಾರಿ 1978ರಲ್ಲಿ ಶಾಸಕನಾದಾಗ ನನ್ನ ಬಳಿ ಒಂದು ಕಾರು ಇತ್ತು. 25 ಸಾವಿರ ರೂ. ಚುನಾವಣೆಗೆ ಖರ್ಚಾಗಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣಬೇಕು. ಜಾತಿಬಲ ಹಣದ ಬಲ ಇದ್ದವ ರಾಜಕೀಯ ಮಾಡುತ್ತಾನೆ. ಈ ಎರಡೂ ಬಲ ಇದ್ದವ ಚುನಾವಣೆಯಲ್ಲಿ ಗೆಲ್ಲುತ್ತಾನೆ. ಕೆಲವರು ಮಾತ್ರ ವೈಯಕ್ತಿಕ ವರ್ಚಸ್ಸಿನಿಂದ ಗೆಲ್ಲುತ್ತಾರೆ ಎಂದು ಹೇಳಿದರು.
ತಾನು ರಾಜಕೀಯಕ್ಕೆ ಇಳಿಯುವ ಹೊತ್ತಿಗೆ ರಾಜಕೀಯದಲ್ಲಿ ಜಾತಿಯ ಪ್ರಭಾವವೇ ಇರಲಿಲ್ಲ. ಜಾತಿ ಎನ್ನುವುದೇ ಗೊತ್ತಿರಲಿಲ್ಲ. ಒಂದು ಹಳ್ಳಿಯಲ್ಲಿ ಒಬ್ಬ ಯಜಮಾನ ನಿನ್ನಪರ ನಿಲ್ಲುತ್ತೇನೆ ಎಂದರೆ ಪ್ರಾಣಹೋದರೂ ಬದಲಾಗಲಾರ. ಕೊನೆಯವರೆಗೂ ಮಾತನ್ನು ಉಳಿಸಿಕೊಳ್ಳುತ್ತಿದ್ದ. ಆದರೆ ಈಗ ಬೆಳಿಗ್ಗೆ ಒಂದು, ಮಧ್ಯಾಹ್ನ ಇನ್ನೊಂದು ಸಾಯಂಕಾಲ ಮತ್ತೊಂದು ಪಕ್ಷ. ಬ್ಯಾಗಲ್ಲಿ ಎರಡೂ ಪಕ್ಷಗಳ ಧ್ವಜ ಇಟ್ಟುಕೊಂಡೇ ತಿರುಗಾಡುತ್ತಾನೆ. ಹೊರಗೆ ಯಾವ ಧ್ವಜ ಕಾಣಿಸುತ್ತದೊ. ಅಂತಹ ಧ್ವಜವನ್ನು ಹೊರಗೆ ತೆಗೆಯುತ್ತಾನೆ. ಈ ರೀತಿ ತುಂಬಾ ಬದಲಾಗಿದೆ ಜನರೇಶನ್. ವಾತಾವರಣ ತುಂಬಾ ಬದಲಾಗಿದೆ’’ ಎಂದು ಈಗಿನ ರಾಜಕೀಯ ಪರಿಸ್ಥಿತಿಯನ್ನು ಬಣ್ಣಿಸಿದರು.
ನಾನು ದಿಲ್ಲಿಗೆ ಹೋಗಿ (ಸಂಸದರಾಗಿ) 25 ವರ್ಷ ಆಗಿದೆ. ಇಲ್ಲಿಯೇ ಉಳಿದಿದ್ದರೆ ನಾನು ಏನೇನು ಆಗುತ್ತಿದ್ದೆ. ಹೋಗುವಾಗ ನನ್ನ ಸಂಬಂಧಿ ಗೋವಿಂದ ಕಾರಜೋಳರನ್ನು ರಾಜಕೀಯಕ್ಕೆ ಕರೆತಂದೆ. ಅವರು ನನ್ನಂತೆ ಬೆಳೆಯಲಿ ಅಂದುಕೊಂಡಿದ್ದೆ. ಅವರು ಶಾಸಕರಾದರು, ಉಪಮುಖ್ಯಮಂತ್ರಿ ಆಗುವ ತನಕ ಅವರನ್ನು ಬೆಳೆಸಿದೆವು ಎಂದರು.
ನಾನು ಜಸ್ಟ್ ಬಿಎ ಮುಗಿಸಿ ಹೊರಬಂದಾಗ ಜಯಪ್ರಕಾಶ್ ನಾರಾಯಣರ ‘ತರುಣರೇ ದೇಶ ಉಳಿಸಿ’ ಎಂಬ ಸಂದೇಶ ಕೇಳಿಸಿತು. ನಾನು ಆ ಸಂದೇಶದಿಂದ ಪ್ರಭಾವಿತನಾಗಿ ತುರ್ತು ಪರಿಸ್ಥಿಯಲ್ಲಿ ಭೂಗತ ಚಟುವಟಿಕೆಯಲ್ಲಿ ನಿರತನಾದೆ. ಜೈಲಿಗೆ ಹೋಗಿಲ್ಲ. ತಪ್ಪಿಸಿಕೊಂಡು ಅಡ್ಡಾಡಿದೆ. ಅವತ್ತು ನಾವು ಮನೆಯಲ್ಲಿ ಅಷ್ಟೇನೂ ಬಡವರಲ್ಲ. ಉಣ್ಣುವುದಕ್ಕೆ ತೊಂದರೆ ಇರಲಿಲ್ಲ. ದೇವರು ಊಟಕ್ಕೆ ವ್ಯವಸ್ಥೆ ಮಾಡಿದ್ದ. ಹೀಗಾಗಿ ತುರ್ತುಪರಿಸ್ಥಿತಿಯ ವೇಳೆ ಹೋರಾಟಕ್ಕೆ ಧುಮುಕಿದೆ. ಆದರೆ ಆಗ ನಮಗೆ ಊಟ ಯಾರೂ ಹಾಕುತ್ತಿರಲಿಲ್ಲ. ಇಂದಿರಾ ಗಾಂಧಿಯನ್ನು ಬೈಯುವ ನಮ್ಮನ್ನು ಯಾರೂ ಮಾತನಾಡಿಸುತ್ತಿರಲಿಲ್ಲ. ನಾನು ಚರ್ಮುರಿ ತಿಂದು ದಿನ ಕಳೆಯುತ್ತಿದ್ದೆ ಎಂದು ನುಡಿದರು.
ತುರ್ತು ಪರಿಸ್ಥಿತಿಯ ವೇಳೆ ಇಂಡಿಯಲ್ಲಿ ಚಟವಟಿಕೆಯಲ್ಲಿ ನಿರತನಾಗಿದ್ದೆ. ಅಲ್ಲಿ ನಡೆದ ಜನತಾಪಕ್ಷದ ಕಾರ್ಯಕ್ರಮ ವೊಂದರಲ್ಲಿ ರಾಮಕೃಷ್ಣ ಹೆಗಡೆ ಅವರ ಪರಿಯವಾಯಿತು. ಆಗ ಹೆಗಡೆ ಆಲ್ಇಂಡಿಯಾ ಜನತಾ ಪಕ್ಷದ ಸೆಕ್ರೆಟರಿ ಆಗಿದ್ದರು.
ಹೆಗಡೆ ಮತ್ತು ಜೆ.ಎಚ್.ಪಟೇಲ್ ಅವರಂತಹ ಒಳ್ಳೆಯ ನಾಯಕರು ಇವತ್ತು ಸಿಗಲು ಸಾಧ್ಯವಿಲ್ಲ. ಅಂತಹ ನಾಯಕರೊಂದಿಗೆ ಕೆಲಸ ಮಾಡಿದ ನಾವು ಅದೃಷ್ಟವಂತರು ಅವರಿಗೆ ಜಾತಿಗೀತಿ ಗೊತ್ತಿರಲಿಲ್ಲ. ಒಟ್ಟಿಗೆ ಎಲ್ಲರನ್ನೂ ಮುನ್ನಡೆಸುವ ಒಂದೇ ಭಾವನೆ ಅವರಲ್ಲಿತ್ತು. ಕೇವಲ ಒಬ್ಬ ವ್ಯಕ್ತಿ, ಒಂದು ಸಮಾಜದಿಂದ ರಾಜಕೀಯ ಆಗುವುದಿಲ್ಲ. ಎಲ್ಲ ವರ್ಗದ ಜನ ಕೂಡಿದ್ದರೆ ಎಲ್ಲರನ್ನೂ ಒಟ್ಟಾಗಿ ಕೊಂಡು ಹೋಗುವ ವಿಶಾಲ ಮನೋಭಾವ ಇದ್ದರೆ ರಾಜಕಾರಣದಲ್ಲಿ ಯಶಸ್ವಿಯಾಗಲು ಸಾಧ್ಯ ಎಂಬ ಪಾಠವನ್ನು ನನಗೆ ಅವರು ಕಲಿಸಿದ್ದರು. ಆದರೆ ಅವರು ಬೇಗನೆ ನಮ್ಮನ್ನು ಅಗಲಿದ್ದರು. ಈಗಿನ ನಾಯಕರಿಗೆ ಜಾತಿ, ಕುಟುಂಬ ರಾಜಕಾರಣವೇ ಪ್ರಧಾನವಾಗಿದೆ ಎಂದು ಹೇಳಿದರು.
ನನ್ನ ಮನೆಯಲ್ಲಿ ರಾಜಕೀಯದಲ್ಲಿ ನಾನೇ ಫಸ್ಟ್ ನಾನೇ ಲಾಸ್ಟ್’. ನನಗೆ ಇಬ್ಬರು ಮಕ್ಕಳು. ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಊರಲ್ಲಿ ಜಮೀನು ನೋಡಿಕೊಂಡಿದ್ದಾರೆ. ನಾಲ್ಕು ಸಲ ಎಂಎಲ್ಎ ಆಗಿದ್ದೇನೆ, 6 ಸಲ ಎಂಪಿ ಆಗಿದ್ದೇನೆ. ಕೇಂದ್ರ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಈಗ ನನಗೆ 71 ವರ್ಷ. ಹೆಚ್ಚೆಂದರೆ ಒಂದು ಚುನಾವಣೆ ಮುಂದೆ ಅವಕಾಶ ಸಿಕ್ಕಿದರೆ ಚುನಾವಣೆಗೆ ನಿಲ್ಲುತ್ತೇನೆ. ಇಲ್ಲದಿದ್ದರೆ ಅರಾಮವಾಗಿ ಮುಂದುವರಿಯುತ್ತೇನೆ ಎಂದರು.
ನಾನು ರಾಜ್ಯದಲ್ಲಿ ಸ್ವಇಚ್ಛೆಯಿಂದಲೇ ಕಂದಾಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಈ ರೀತಿ ಯಾರು ಮಾಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮೂರು ಪಕ್ಷಗಳಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಜಯ ಗಳಿಸಿರುವುದು ಒಂದು ದಾಖಲೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ನನಗೆ ತುಂಬಾ ಜನ ಕಾಂಗ್ರೆಸ್ ಸೇರುವಂತೆ ಸಲಹೆ ನೀಡಿದ್ದಾರೆ. ನಾನು. ಜೀವನದುದ್ದಕ್ಕೂ ಕಾಂಗ್ರೆಸ್ನ್ನು ಬೈಯುತ್ತಾ ಬಂದವನು. ಕಾಂಗ್ರೆಸ್ ವಿರೋಧಿಯಾಗಿ ಗುರುತಿಸಿಕೊಂಡವನು. ಹೀಗಿರುವಾಗ ನಾನು ಕಾಂಗ್ರೆಸ್ ಸೇರುವುದು ಹೇಗೆ ? ಕೆಲವರು ಸುಮ್ಮನೆ ಜಿಗಿಜಿಣಗಿ ಕಾಂಗ್ರೆಸ್ ಸೇರುತ್ತಾರೆಂದು ವದಂತಿ ಹಬ್ಬಿಸುತ್ತಿದ್ದಾರೆ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ನ್ನು ಕಡೆಗಣಿಸಿದವರನ್ನು ನಾವು ಹೇಗೆ ನಂಬುವುದು. ಸ್ವಾಭಿಮಾನದ ಬದುಕನ್ನು ಕೊಟ್ಟ ಅವರಂತಹ ನಾಯಕರಿಗೆ ಕಾಂಗ್ರೆಸ್ ತೊಂದರೆ ಕೊಟ್ಟಿದೆ ಎಂದು ಹೇಳಿದರು.
ನಾನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಲ್ಲಿ ನಂಬಿಕೆ ಇಟ್ಟು ಬಿಜೆಪಿ ಸೇರಿದ್ದೆ. ಎಲ್ಲರೊಂದಿಗೆ ಇದ್ದೇನೆ. ಎಲ್ಲರೂ ನನಗೆ ಓಟು ಹಾಕುತ್ತಾರೆ. ಹಾಗಾಗಿ ಈ ಮಟ್ಟಕ್ಕೆ ಬೆಳೆದಿದ್ದೇನೆ. ನನ್ನ ಗ್ರಾಹಕರು ಬಡವರು. ಒಂದು ಊರಲ್ಲಿ ಇರುವ ಜನರಲ್ಲಿ ಶೇ 15 ಜನ ಶ್ರೀಮಂತರು , ಶೇ 85 ಮಂದಿ ಬಡವರು . ಬಡವರು ನನ್ನ ಕೈ ಹಿಡಿಯುತ್ತಿದ್ದಾರೆ. ನಾನು ಬಡವರ ಪರವಾಗಿ ಕೆಲಸಮಾಡುತ್ತೇನೆ. ಈ ಕಾರಣದಿಂದಾಗಿ ಬಡವರು ನನ್ನ ಕೈ ಬಿಟ್ಟಿಲ್ಲ.
ನಾನು ಬಿಜೆಪಿಯಿಂದ ಯಡಿಯೂರಪ್ಪ, ಜಗದೀಶ ಶೆಟ್ಟರ್, ಬೊಮ್ಮಾಯಿ , ಡಿವಿ ಸದಾನಂದ ಗೌಡ ಹೀಗೆ ಐದು ಮಂದಿ ಮುಖ್ಯ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರಲ್ಲಿ ಯಾರ ಮನೆ ಬಾಗಿಲಿಗೂ ಹೋಗಿ ಕೆಲಸ ಮಾಡಿಕೊಡುವಂತೆ ಕೇಳಿಲ್ಲ. ಮಾಜಿ ಮುಖ್ಯ ಮಂತ್ರಿಗಳಾದ ರಾಮಕೃಷ್ಣ ಹೆಗಡೆ ಮತ್ತು ಜೆಎಚ್ ಪಟೇಲ್ ಅವರ ಮನೆ ಬಿಟ್ಟರೆ ಬೇರೆ ಯಾವನೇ ಒಬ್ಬ ಮುಖ್ಯ ಮಂತ್ರಿ ಮನೆಗೂ ಹೋಗಿಲ್ಲ. ಸೆಕ್ರೆಟರಿ ಮೂಲಕ ನನ್ನ ಕ್ಷೇತ್ರದ ಜನರ ಕೆಲಸ ಮಾಡಿಸುತ್ತೇನೆ ಎಂದು ಹೇಳಿದರು.
ಕಳೆದ ಒಂಬತ್ತು ವರ್ಷಗಳಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಒಳ್ಳೆಯ ಕೆಲಸ ಮಾಡಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಇರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಒಂದೆರೆಡು ಸ್ಥಾನಗಳು ಕಡಿಮೆಯಾಗಬಹುದು. ಆದರೆ ಕೇಂದ್ರದಲ್ಲಿ 300ಕ್ಕೂ ಅಧಿಕ ಸ್ಥಾನ ಪಡೆದು ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ನನಗೆ ದಕ್ಷಿಣ ಕನ್ನಡದಲ್ಲಿ ತುಂಬಾ ಸ್ನೇಹಿತರಿದ್ದಾರೆ. ನಾನು ಕಂದಾಯ ಸಚಿವನಾಗಿದ್ದಾಗ ಆಗಾಗ ಇಲ್ಲಿಗೆ ಬರುತ್ತಿದ್ದೆ. ಅಮರನಾಥ ಶೆಟ್ಟಿ ಅವರನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.