ಶರಣ್ ಪಂಪ್ ವೆಲ್ ವಿರುದ್ಧ ಕ್ರಮಕ್ಕೆ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ ಆಗ್ರಹ: ಸಚಿವರಿಗೆ ಮನವಿ
ಮಂಗಳಾದೇವಿ ದಸರಾ ಉತ್ಸವದ ವ್ಯಾಪಾರ ವಿವಾದ
ಮಂಗಳೂರು, ಅ.18: ಮಂಗಳಾದೇವಿ ದೇವಸ್ಥಾನದ ದಸರಾ ಉತ್ಸವದ ಸಂದರ್ಭ ವ್ಯಾಪಾರಕ್ಕೆ ಸಂಬಂಧಿಸಿ ಮತೀಯ ಸೌಹಾರ್ದ ಕದಡಲು ಯತ್ನಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಮತ್ತು ಸಹಚರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸೌಹಾರ್ದ ಕದಡದಂತೆ ಕ್ರಮ ಕಾರ್ಯಕ್ರಮ ರೂಪಿಸಬೇಕು ಎಂದು ಒತ್ತಾಯಿಸಿ ದ.ಕ. ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆಯು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರಿಗೆ ಒತ್ತಾಯಿಸಿದೆ.
ಮಂಗಳೂರಿನಲ್ಲಿ ಸರ್ಕ್ಯೂಟ್ ಹೌಸ್ ನಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾದ ವೇದಿಕೆಯ ಮುಖಂಡರು ಈ ಬಗ್ಗೆ ಮನವಿ ಸಲ್ಲಿಸಿದರು.
ಮಂಗಳಾದೇವಿ ದೇವಸ್ಥಾನದ ದಸರಾ ಉತ್ಸವದ ಸಂದರ್ಭ ವ್ಯಾಪಾರಕ್ಕೆ ಸಂಬಂಧಿಸಿ ಉದ್ಭವಿಸಿದ್ದ ವಿವಾದವನ್ನು ಜಿಲ್ಲಾಡಳಿತ ಪ್ರಭಾರ ಜಿಲ್ಲಾಧಿಕಾರಿ ಸಭೆ ನಡೆಸಿ ಇತ್ಯರ್ಥಪಡಿಸಿದ್ದರೂ, ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ವಿಎಚ್ ಪಿ, ಬಜರಂಗ ದಳವು ಮತೀಯ ಸೌಹಾರ್ದ ಕದಡುವ ಕೆಲಸ ಮಾಡುತ್ತಿದೆ. ಕೇಸರಿ ಧ್ವಜ ಹಾಕಿರುವ ಅಂಗಡಿಗಳಲ್ಲಿ ಮಾತ್ರ ವ್ಯಾಪಾರ ಮಾಡಿ ಎಂದು ತಾಕೀತು ಮಾಡಿದೆ. ಇದು ಬಹಿಷ್ಕಾರದ ಕ್ರಮವಾಗಿದೆ. ಸಂವಿಧಾನದ ಆಶಯದ ಉಲ್ಲಂಘನೆ ಮಾತ್ರವಲ್ಲ, ಇದು ಕ್ರಿಮಿನಲ್ ಕಾನೂನು ಗಳ ಉಲ್ಲಂಘನೆ. ಆದ್ದರಿಂದ ಶರಣ್ ಪಂಪ್ ವೆಲ್ ಮಾತು ಗ್ಯಾಂಗ್ ಅನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದ.ಕ. ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ಆಗ್ರಹಿಸಿದೆ.
ಮಂಗಳಾದೇವಿ ಜಾತ್ರೋತ್ಸವವನ್ನೇ ಗುರಿಯಾಗಿಸಿ ವಿಎಚ್ ಪಿ, ಬಜರಂಗ ದಳವನ್ನು ಚೂ ಬಿಟ್ಟು ಮತೀಯ ಸೌಹಾರ್ದ ಕದಡುವ ಕೆಲಸ ಬಹಿರಂಗವಾಗಿಯೇ ನಡೆಯತೊಡಗಿದೆ. ದೇವಸ್ಥಾನದ ಮುಂಭಾಗದ ನಗರ ಪಾಲಿಕೆ ಜಾಗದಲ್ಲಿ ಹಾಕಲಾದ ಜಾತ್ರೆ ವ್ಯಾಪಾರದ ಸ್ಟಾಲ್ ಗಳಲ್ಲಿ ವ್ಯಾಪಾರಿಗಳ ಮಳಿಗೆಗಳಿಗೆ ಬಲವಂತವಾಗಿ ಕೇಸರಿ ಧ್ವಜ ಕಟ್ಟುವ ಮೂಲಕ ಒಂದು ಸಮುದಾಯದ ವ್ಯಾಪಾರಿಗಳನ್ನು ಪ್ರತ್ಯೇಕಿಸುವ, ಕೇಸರಿ ಬಾವುಟ ಕಟ್ಟಿರುವ ಮಳಿಗೆಗಳಲ್ಲಿ ಮಾತ್ರ ಹಿಂದುಗಳು ಖರೀದಿಸಬೇಕು ಎಂದು ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ಬಜರಂಗ ದಳದ ಮುಖಂಡರು ಬಹಿರಂಗ ಕರೆ ನೀಡಿರುತ್ತಾರೆ. ಇದು ಸಂವಿಧಾನದ ನಿಯಮಗಳ, ಕ್ರಿಮಿನಲ್ ಕಾನೂನುಗಳ ಸ್ಪಷ್ಟ ಉಲ್ಲಂಘನೆ. ಸಮುದಾಯವೊಂದನ್ನು ಬಹಿಷ್ಕರಿಸುವುದು, ಬಹಿರಂಗವಾಗಿ ಬಹಿಷ್ಕಾರಕ್ಕೆ ಕರೆ ನೀಡುವುದು ಜಾಮೀನುರಹಿತ ಅಪರಾಧವಾಗಿದೆ. ಶರಣ್ ಪಂಪ್ ವೆಲ್ ನೇತೃತ್ವದ ಬಜರಂಗ ದಳದ ಕುಖ್ಯಾತ ಗ್ಯಾಂಗ್ ಪದೇ ಪದೆ ಇಂತಹ ಸೌಹಾರ್ದ ಕದಡುವ, ದ್ವೇಷ ಹರಡುವ ಕ್ರಿಮಿನಲ್ ಕೃತ್ಯಗಳನ್ನು ಎಸಗುತ್ತಲೇ ಬಂದಿದೆ. ಆದರೆ, ಕಾನೂನು ಪಾಲಕರು ಈ ಕುರಿತು ತೀರಾ ಮೃದು ಧೋರಣೆ ತಳೆಯುತ್ತಿರುವುದು ಗೂಂಡಾಗಿರಿಯನ್ನು ಎಗ್ಗಿಲ್ಲದೆ ಮುಂದುವರಿಸಲು ಅವಕಾಶ ಒದಗಿಸಿದೆ ಎಂದು ದೂರಲಾಗಿದೆ.
ಪೊಲೀಸ್ ಇಲಾಖೆ, ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಇಂತಹ ಗಂಭೀರ ಪ್ರಕರಣವನ್ನು ಲಘುವಾಗಿ ಕಾಣಬಾರದು, ಕಾನೂನಿನ ಕಠಿಣ ನಿಯಮಗಳಡಿ ತಕ್ಷಣವೇ ಪ್ರಕರಣ ದಾಖಲಿಸಿ ಶರಣ್ ಪಂಪ್ ವೆಲ್ ಮತ್ತು ಅವರ ಜೊತೆಗಾರರಾದ ಕ್ರಿಮಿನಲ್ ಗುಂಪುನ್ನು ಬಂಧಿಸಿ ಜೈಲಿಗಟ್ಟ ಬೇಕು ಎಂದು ಒತ್ತಾಯಿಸಿರುವ 'ದ.ಕ. ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ', ಇಂತಹ ಕ್ರಮಗಳಿಲ್ಲದೆ ಮುಂದಕ್ಕೆ ಶಾಂತಿ ಕದಡುವ ಘಟನೆಗಳು ಜರುಗಿದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ವೇದಿಕೆ ಎಚ್ಚರಿಸಿದೆ.
ಮುಂಬರುವ ಲೋಕಸಭೆ ಚುನಾವಣೆಯ ಸಿದ್ದತೆಯ ಭಾಗವಾಗಿಯೇ ಈ ಎಲ್ಲಾ ಘಟನೆಗಳು ನಡೆಯುತ್ತಿವೆ. ಶರಣ್ ಪಂಪ್ ವೆಲ್ ಸೇರಿದಂತೆ ಬಜರಂಗ ದಳದ ಕಾರ್ಯಕರ್ತರನ್ನು ಛೂ ಬಿಟ್ಟು ಬಿಜೆಪಿ ಮತೀಯ ಉದ್ವಿಗ್ನತೆ ಕೆರಳಿಸಲು, ಧರ್ಮದ ಆಧಾರದಲ್ಲಿ ಮತಗಳ ಧ್ರುವೀಕರಣಕ್ಕೆ ಮುಂದಾಗಿದೆ. ಸೌಹಾರ್ದಕ್ಕೆ ಮಾದರಿಯಾಗಿರುವ ಮಂಗಳಾದೇವಿ ದೇವಳದ ದಸರಾದಲ್ಲಿ ಯಶಸ್ಸು ಕಂಡರೆ ಮುಂಬರುವ ಚುನಾವಣೆಯವರಗೆ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಉತ್ಸವಗಳಲ್ಲಿ ಇದೇ ಮಾದರಿಯನ್ನು ಬಿಜೆಪಿ ಅನುಸರಿಸಲಿದೆ. ಆದ್ದರಿಂದ ಇಂತಹ ಕೆಟ್ಟ, ದುರಾಲೋಚನೆಯ, ಮತೀಯ ದ್ವೇಷದ ರಾಜಕಾರಣಕ್ಕೆ ಕಡಿವಾಣ ಹಾಕಲು ದೃಢ ಕ್ರಮಗಳನ್ನು ಜರುಗಿಸಬೇಕು, ಐಕ್ಯ, ಸೌಹಾರ್ದ ಪರಂಪರೆಯನ್ನು ಎತ್ತಿಹಿಡಿಯಲು ಮುಂದಾಗಬೇಕು ಎಂದು ಸಚಿವರನ್ನು ವೇದಿಕೆ ಒತ್ತಾಯಿಸಿದೆ.