ವಿದ್ಯಾರ್ಥಿಗಳನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ಪ್ರಕರಣ: ಇಬ್ಬರು ಪೊಲೀಸ್ ವಶಕ್ಕೆ
ಮಂಗಳೂರು: ನಗರದ ನೆಹರೂ ಮೈದಾನದಲ್ಲಿ ನಡೆದ ಫುಟ್ಬಾಲ್ ಪಂದ್ಯಾಟಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳನ್ನು ತಂಡವೊಂದು ಕಾರಿನಲ್ಲಿ ಅಪಹರಿಸಿ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಸೋಮವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ದುಷ್ಕರ್ಮಿಗಳು ಹಲ್ಲೆ ನಡೆಸಿದ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಕೃತ್ಯ ಬೆಳಕಿಗೆ ಬರುತ್ತಲೇ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿದ್ದು, ಇಬ್ಬರನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
*ಘಟನೆಯ ವಿವರ: ಆಗಸ್ಟ್ 14ರಂದು ನೆಹರೂ ಮೈದಾನದಲ್ಲಿ ಫುಟ್ಬಾಲ್ ಪಂದ್ಯ ನಡೆದಿತ್ತು. ಈ ಸಂದರ್ಭ ವಿದ್ಯಾರ್ಥಿಗಳ ಮಧ್ಯೆ ಮಾತಿನ ಚಕಮಕಿ, ಹೊಡೆದಾಟ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಸೋಮವಾರ ರಾತ್ರಿ ಮೂವರು ವಿದ್ಯಾರ್ಥಿಗಳನ್ನು ನಗರದ ಪಾಂಡೇಶ್ವರದಿಂದ ಅಪಹರಿಸಿದ ಮೂವರು ವಿದ್ಯಾರ್ಥಿಗಳಲ್ಲದೆ ಇತರ ಇಬ್ಬರು ನಗರದ ಜೆಪ್ಪು ಮಹಾಕಾಳಿ ಪಡ್ಪುಗೆ ಕರೆದೊಯ್ದು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಕೈ-ಕಾಲಿನಿಂದ ಒದ್ದಿದ್ದಾರೆ. ಅರೆಬೆತ್ತಲೆಗೊಳಿಸಿ, ಬಸ್ಕಿ ತೆಗೆಸಿ, ಕೈಮುಗಿದು ಕ್ಷಮೆ ಕೇಳುವಂತೆ ಒತ್ತಾಯಿಸಿ ದ್ದಾರೆ. ಕ್ಷಮೆ ಕೇಳಿದ ಬಳಿಕವೂ ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿ ಕಂಡು ಬರುತ್ತಿದೆ. ವಿದ್ಯಾರ್ಥಿಗಳನ್ನು ನಗರ ಹೊರವಲಯದ ಅಡ್ಯಾರ್ ಕಣ್ಣೂರಿಗೂ ಕರೆದೊಯ್ದು ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.
ಹಲ್ಲೆಗೊಳಗಾದ ಮೂವರು ವಿದ್ಯಾರ್ಥಿಗಳು ಅಪ್ರಾಪ್ತರಾಗಿದ್ದು, ಕುದ್ರೋಳಿ ಮತ್ತು ಬೆಂಗರೆ ಹಾಗೂ ಪಾಂಡೇಶ್ವರದ ನಿವಾಸಿಗಳು ಎಂದು ತಿಳಿದು ಬಂದಿದೆ.
ಹಲ್ಲೆ ನಡೆಸಿದವರ ಪೈಕಿ 18-19 ವರ್ಷ ಪ್ರಾಯದ ವಿದ್ಯಾರ್ಥಿಗಳಾದ ದಿಯಾನ್, ತಸ್ಲೀಂ, ಸಲ್ಮಾನ್ ಮತ್ತು 17 ವರ್ಷ ವಯಸ್ಸಿನ ಇತರ 2 ಅಪ್ರಾಪ್ತ ವ್ಯಕ್ತಿಗಳು ಭಾಗಿಯಾಗಿದ್ದರು ಎನ್ನಲಾಗಿದೆ.
ಆರೋಪಿಗಳ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಸೆ.162/2024 ಖಿ/, 109, 115(2), 118(1), 127(2), 137(2), 189(2), 190, 191(1), 191(3), 351(2), 352 ಟ್ಛ ಆಘೆಖ, 2023 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪೈಕಿ ದಿಯಾನ್ ಮತ್ತು ಸಲ್ಮಾನ್‌ನ್ನು ವಶಕ್ಕೆ ಪಡೆಯಲಾಗಿದೆ. ಉಳಿದವರಿಗೂ ಶೋಧ ನಡೆಸಲಾಗುತ್ತಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
*ಕ್ರೀಡೆಯನ್ನು ನೆಪವಾಗಿಸಿಕೊಂಡು ವಿದ್ಯಾರ್ಥಿಗಳಿಗೆ ಹೀನಾಯವಾಗಿ ಹಲ್ಲೆ ನಡೆಸಿದ್ದಲ್ಲದೆ ಅದರ ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವುದು ಖಂಡನೀಯ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಪೊಲೀಸರ ಕಠಿಣ ಕ್ರಮವು ಇತರ ವಿದ್ಯಾರ್ಥಿಗಳಿಗೆ ಪಾಠವಾಗಬೇಕು ಎಂದು ದ.ಕ.ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ. ಅಸ್ಲಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.
*ಮಂಗಳೂರಿನಲ್ಲಿ ಮೂವರು ವಿದ್ಯಾರ್ಥಿಗಳಿಗೆ ಇತರ ವಿದ್ಯಾರ್ಥಿ ತಂಡದಿಂದ ಹಲ್ಲೆ ಪ್ರಕರಣವು ಸಮಾಜಕ್ಕೆ ಕಪ್ಪುಚುಕ್ಕೆಯಾಗಿದೆ. ವಿದ್ಯಾರ್ಥಿಗಳ ಈ ಕೃತ್ಯಗಳು ಅಮಾನವೀಯವಾಗಿದೆ. ಪೊಲೀಸ್ ಇಲಾಖೆ, ಶಾಲಾ - ಕಾಲೇಜು ಆಡಳಿತ, ಹೆತ್ತವರು ಎಚ್ಚೆತ್ತುಕೊಳ್ಳಬೇಕು. ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಎಂದು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ. ಅಬ್ದುನ್ನಾಸಿರ್ ಲಕ್ಕಿಸ್ಟಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.