ಚೂರಿಯಿಂದ ಇರಿದ ಪ್ರಕರಣ: ಓರ್ವ ಆರೋಪಿ ಬಂಧನ
ಉಳ್ಳಾಲ; ಗುತ್ತಿಗೆದಾರ ಮೊಹಮ್ಮದ್ ಶಮೀರ್ ಎಂಬವರನ್ನು ತಂಡವೊಂದು ಅಡ್ಡಗಟ್ಟಿ ಚೂರಿಯಿಂದ ಇರಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಬಸ್ತಿಪಡ್ಪು ಎಂಬಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಕಾಪು ಮೂಲದ ಮೊಹಮ್ಮದ್ ಶಮೀರ್ ಎಂಬವರನ್ನು ಬಸ್ತಿಪಡ್ಪು ಬಳಿ ಪರಿಚಯಸ್ಥ ಹಸೈನಾರ್ ಎಂಬಾತ ನಿಲ್ಲಿಸಿ ಸಮೀಪದಲ್ಲೇ ಗುತ್ತಿಗೆ ಒಂದು ಇದೆ ಎಂದು ನಂಬಿಸಿ ಸಮುದಾಯ ಆರೋಗ್ಯ ಕೇಂದ್ರದ ಕಡೆ ಕರೆದುಕೊಂಡು ಬಂದಿದ್ದ. ಇದೇ ವೇಳೆ ಅಲ್ಲಿಗೆ ದ್ವಿಚಕ್ರ ವಾಹನದಲ್ಲಿ ಬಂದ ಉಮರ್ ನವಾಫ್ ಎಂಬಾತ ಹೊಸ ಸೈಟ್ ತೋರಿಸುವುದಾಗಿ ಮೊಹಮ್ಮದ್ ಶಮೀರ್ ರನ್ನು ನಂಬಿಸಿ ಬಸ್ತಿಪಡ್ಪು ಬಳಿ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.
ಬಸ್ತಿಪಡ್ಪು ಬಳಿ ಮೊಹಮ್ಮದ್ ಶಮೀರ್ ರನ್ನು ಕಾರಿನಿಂದ ಇಳಿಸಿದ ಇಬ್ಬರು ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ, ಕಾರಿನ ಕೀ ಕೊಡುವಂತೆ ಕೇಳಿದ್ದರು ಎನ್ನಲಾಗಿದೆ. ಇದಕ್ಕೆ ಮೊಹಮ್ಮದ್ ಶಮೀರ್ ನಿರಾಕರಿಸಿದಾಗ ಇಬ್ಬರು ಆರೋಪಿಗಳು ಜೀವಬೆದರಿಕೆ ಹಾಕಿದಲ್ಲದೇ ಕಾಲಿಗೆ ಚೂರಿಯಿಂದ ಇರಿದು ಕಾರನ್ನು ಅಪಹರಿಸಿ ಹೋಗಿದ್ದಾರೆ ಎಂದು ದೂರಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಉಳ್ಳಾಲ ಇನ್ಸ್ಪೆಕ್ಟರ್ ಬಾಲಕೃಷ್ಣ ನೇತೃತ್ವದ ಪೊಲೀಸರ ತಂಡ ಆರೋಪಿ ಹಸೈನಾರ್ ನನ್ನು ಬಂಧಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.