ಕೋಡಿಂಬಾಡಿ ಗ್ರಾ.ಪಂ | ಬಿಜೆಪಿ ಬೆಂಬಲಿತ ಸದಸ್ಯೆಯ ಬಲದಿಂದ ಕಾಂಗ್ರೆಸ್ ಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ
ಮಲ್ಲಿಕಾ ಅಶೋಕ್ ಪೂಜಾರಿ ಅಧ್ಯಕ್ಷೆ, ಜಯಪ್ರಕಾಶ್ ಬದಿನಾರು ಉಪಾಧ್ಯಕ್ಷ
ಉಪ್ಪಿನಂಗಡಿ: ಬಿಜೆಪಿಯ ಭದ್ರಕೋಟೆಯೆಂದೇ ಬಿಂಬಿತವಾಗಿದ್ದ ಶಾಸಕ ಅಶೋಕ್ ಕುಮಾರ್ ರೈಯವರ ತವರು ಗ್ರಾಮವಾದ ಕೋಡಿಂಬಾಡಿ ಗ್ರಾ.ಪಂ. ನಲ್ಲಿ ಬಿಜೆಪಿ ಬಳಿಯಿದ್ದ ಅಧಿಕಾರವನ್ನು ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಗ್ರಾ.ಪಂ.ನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಮಲ್ಲಿಕಾ ಅಶೋಕ್ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಜಯಪ್ರಕಾಶ್ ಬದಿನಾರು ಆಯ್ಕೆಯಾಗಿದ್ದಾರೆ.
ಕೋಡಿಂಬಾಡಿ ಗ್ರಾ.ಪಂ.ನಲ್ಲಿ 11 ಸದಸ್ಯ ಬಲವಿದ್ದು, ಅದರಲ್ಲಿ 6 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ 5 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದರು. ಇಲ್ಲಿ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ (ಎ) ಮೀಸಲಾತಿ ನಿಗದಿಯಾಗಿತ್ತು. ಕಳೆದ ಬಾರಿ ಗ್ರಾ.ಪಂ.ನ ಉಪಾಧ್ಯಕ್ಷೆಯಾಗಿದ್ದ ಉಷಾ ಲಕ್ಷ್ಮಣ ಅವರು ಎರಡನೇ ಅವಧಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಲ್ಲಿಕಾ ಅಶೋಕ್ ಪೂಜಾರಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಗ್ರಾ.ಪಂ.ನ ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಬಿಜೆಪಿ ಬೆಂಬಲಿತ ಸದಸ್ಯ ರಾಮಚಂದ್ರ ಪೂಜಾರಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಜಯಪ್ರಕಾಶ್ ಬದಿನಾರು ನಾಮಪತ್ರ ಸಲ್ಲಿಸಿದ್ದರು.
ಬಿಜೆಪಿ ಬೆಂಬಲಿತೆಯನ್ನು ಸೆಳೆದ ಕಾಂಗ್ರೆಸ್: ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗ್ರಾ.ಪಂ.ಗೆ ಆಯ್ಕೆಯಾಗಿದ್ದ ಪುಷ್ಪಾ ಲೋಕಯ್ಯ ನಾಯ್ಕ ಅವರನ್ನು ಕಾಂಗ್ರೆಸ್ ತನ್ನತ್ತ ಸೆಳೆದುಕೊಂಡಿದ್ದು, ಚುನಾವಣೆಯ ಸಂದರ್ಭ ಮತದಾನವಾದಾಗ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿದ್ದ ಮಲ್ಲಿಕಾ ಅಶೋಕ್ ಪೂಜಾರಿ ಹಾಗೂ ಜಯಪ್ರಕಾಶ್ ಬದಿನಾರು ಅವರು ತಲಾ ಆರು ಮತಗಳನ್ನು ಪಡೆದು ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಉಷಾ ಲಕ್ಷ್ಮಣ ಹಾಗೂ ರಾಮಚಂದ್ರ ಪೂಜಾರಿ ಪರಾಭವಗೊಂಡರು.