ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ: 6 ತಿಂಗಳ ಹಿಂದೆ ಸಂಚು; ದರೋಡೆಗೆ ಮುನ್ನ 3 ಬಾರಿ ಭೇಟಿ!

ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್
ಮಂಗಳೂರು : ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ದರೋಡೆಗೈದ ಚಿನ್ನಾಭರಣ ಹಾಗೂ ಮೂವರು ಪ್ರಮುಖ ಆರೋಪಿಗಳ ಜತೆಗೆ ದರೋಡೆ ವಸ್ತು ಬಚ್ಚಿಡಲು ಸಹಕರಿಸಿದ ಆರೋಪದಲ್ಲಿ ಆರೋಪಿಯ ತಂದೆಯನ್ನು ವಶಕ್ಕೆ ಪಡೆದಿರುವ ಮಂಗಳೂರು ಪೊಲೀಸರು, ಆರೋಪಿಗಳ ವಿಚಾರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ವಿಚಾರಣೆಯ ವೇಳೆ ಪ್ರಮುಖ ಆರೋಪಿ ಮುರುಗಂಡಿ ತೇವರ್ ಈ ದರೋಡೆಯ ಸಂಚನ್ನು ಸುಮಾರು ಆರು ತಿಂಗಳ ಹಿಂದೆ ರೂಪಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ದರೋಡೆ ಪ್ರಕರಣದ ಕುರಿತಂತೆ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಮುಂಬೈಯಲ್ಲಿ ನೆಲೆಸಿರುವ ಮಂಗಳೂರು ಮೂಲದವ ಎನ್ನಲಾಗಿರುವ ಶಶಿ ತೇವರ ಎಂಬಾತ ಆರು ತಿಂಗಳ ಹಿಂದೆ ಕೋಟೆಕಾರ್ ವ್ಯವಸಾಯ ಸಹಕಾರಿ ಬ್ಯಾಂಕ್ನಲ್ಲಿ ಭದ್ರತಾ ಸಿಬ್ಬಂದಿ ಕೊರತೆ ಹಾಗೂ ದರೋಡೆಗೆ ಸೂಕ್ತವಾದ ಬ್ಯಾಂಕ್ ಎಂಬುದನ್ನು ತಿಳಿಸಿದ್ದ. ಅದರಂತೆ 2024ರ ಆಗಸ್ಟ್, ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ಮುರುಗಂಡಿ ಮಂಗಳೂರಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾನೆ. ಶುಕ್ರವಾರ ಮಧ್ಯಾಹ್ನ ಸೂಕ್ತ ದಿನವೆಂದು ನಿರ್ಧರಿಸಿ ಜ. 17ರಂದು ದರೋಡೆ ಕೃತ್ಯ ಎಸಗಿದ್ದಾರೆ. ಮೂರು ಮಂದಿ ಮುಂಬೈಯಿಂದ ಕಾರಿನಲ್ಲಿ ಬಂದಿದ್ದರೆ, ಇಬ್ಬರು ಆರೋಪಿಗಳು ರೈಲಿನಲ್ಲಿ ಆಗಮಿಸಿದ್ದರು. ಕೃತ್ಯ ನಡೆದ ದಿನದಂದು ಮಧ್ಯಾಹ್ನ 12.20ರ ವೇಳೆಗೆ ಸ್ಥಳಕ್ಕೆ ತಲುಪಿದ್ದ ಆರೋಪಿಗಳು, ಅಲ್ಲಿ ಕೆಲ ಹೊತ್ತು ಕಾದು 1.10ರ ವೇಳೆಗೆ ಬ್ಯಾಂಕ್ಗೆ ನುಗ್ಗಿ ಕೃತ್ಯ ಎಸಗಿ ಪರಾರಿಯಾಗಿದ್ದರು ಎಂದು ವಿವರಿಸಿದರು.
ಆರೋಪಿಗಳು ವಿಚಾರಣೆಯ ವೇಳೆ ತಮಗೆ ಸ್ಥಳೀಯನಾದ ಶಶಿ ತೇವರ ಎಂಬಾತ ದರೋಡೆಗೆ ಸಹಕಾರ ನೀಡಿದ್ದಾಗಿ ತಿಳಿಸಿದ್ದು, ಆತ ಸೇರಿದಂತೆ ಇನ್ನೂ ಸುಮಾರು ನಾಲ್ಕು ಮಂದಿ ಆರೋಪಿಗಳ ಹುಡುಕಾಟ ನಡೆದಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದರು.
ರಾಜ್ಯದ ಅತೀ ದೊಡ್ಡ ದರೋಡೆ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸರು
ದರೋಡೆಕೋರರು ಕೃತ್ಯದ ದಿನದಂದು 18.674 ಕೆಜಿ ಚಿನ್ನಾಭರಣ ಹಾಗೂ 11,67,044 ರೂ.ಗಳನ್ನು ದೋಚಿದ್ದರು. ಮಂಗಳೂರು ಪೊಲೀಸರು ತಮಿಳುನಾಡು ಹಾಗೂ ಮುಂಬೈಯ ಪೊಲೀಸರ ಸಹಕಾರದಲ್ಲಿ ನಡೆಸಿದ ಕಾರ್ಯಾಚರಣೆಯ ವೇಳೆ 18.314 ಕೆ.ಜಿ. ಚಿನ್ನ, 3,80,500 ರೂ. ನಗದು ವಪಡಿಸಿಕೊಂಡಿದ್ದಾರೆ. ಜತೆಗೆ 2 ಪಿಸ್ತೂಲ್, 3 ಸಜೀವ ಗುಂಡುಗಳು, ಫಿಯೆಟ್ ಕಾರು, ಒಂದು ನಕಲಿ ನಂಬರ್ ಪ್ಲೇಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಎಸಿಪಿಗಳಾದ ಧನ್ಯಾ ಮತ್ತು ಮನೋಜ್ ನೇತೃತ್ವದಲ್ಲಿ ಮಂಗಳೂರು ಪೊಲೀಸರ ಹಲವು ತಂಡಗಳು ತಮಿಳುನಾಡು ಮತ್ತು ಮುಂಬೈನಲ್ಲಿ ಸತತ ನಾಲ್ಕು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದು, 2700 ಕಿ.ಮೀ. ಅಧಿಕ ಪ್ರಯಾಣ ಬೆಳೆಸಿದ್ದಾರೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಬಂಧಿತ ಆರೋಪಿ ಮುರುಗಂಡಿ ತೇವರ್ ಈ ಹಿಂದೆ ಮುಂಬೈನ ಪ್ರಮುಖ ದರೋಡೆ ಪ್ರಕರಣದ ಆರೋಪಿಯಾಗಿದ್ದು, ಈತನ ಮೇಲೆ ಮುಲುಂದ್ ಸೇರಿ ಇತರ ಎರಡು ಠಾಣೆಗಳಲ್ಲಿ ಪ್ರಕರಣಗಳಿವೆ. ಆರೋಪಿ ಯೋಶುವ ರಾಜೇಂದ್ರನ್ ವಿರುದ್ಧ ಮುಂಬೈನಲ್ಲಿ ದರೋಡೆ ಪ್ರಕರಣ ಹಾಗೂ ಗುಜರಾತ್ನಲ್ಲಿ ಒಂದು ಪ್ರಕರಣವಿದೆ.
ಕಣ್ಣನ್ ಮಣಿ ವಿರುದ್ಧ ಮುಂಬೈನಲ್ಲಿ ಒಂದು ಪ್ರಕರಣ ದಾಖಲಾಗಿದ್ದರೆ, ಪ್ರಮುಖ ಆರೋಪಿ ಮುರುಗಂಡಿ ತೇವರ್ನ ತಂದೆ ಶಣ್ಮುಗ ಸುಂದರಂನನ್ನು ಈ ಪ್ರಕರಣದಲ್ಲಿ ಚಿನ್ನಾಭರಣ ಮನೆಯಲ್ಲಿ ಬಚ್ಚಿಡಲು ಸಹಕರಿಸಿದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಗೋಷ್ಟಿಯಲ್ಲಿ ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್, ರವಿಶಂಕರ್, ಎಸಿಪಿಗಳಾದ ಧನ್ಯಾ ನಾಯಕ್, ಮನೋಜ್ ಉಪಸ್ಥಿತರಿದ್ದರು.
ದರೋಡೆಯ ಬಳಿಕ ಆರೋಪಿಗಳಾದ ಮುರುಗಂಡಿ ತೇವರ್ ಮತ್ತು ಯೋಸುವಾ ರಾಜೇಂದ್ರನ್ ಫಿಯಟ್ ಕಾರಿನಲ್ಲಿ ತಲಪಾಡಿ ಗೇಟಿನಿಂದ ಕೇರಳ ಕಡೆಗೆ ಕಡೆಗೆ ಪರಾರಿಯಾಗಿದ್ದರೆ, ಉಳಿದ ನಾಲ್ಕು ಆರೋಪಿಗಳು ಮಂಗಳೂರು ರೈಲು ನಿಲ್ದಾಣದ ಮೂಲಕ ತೆರಳಿದ್ದಾರೆ. ಇವರಲ್ಲಿ ಮೂರು ಮಂದಿ ಆಟೋದಲ್ಲಿ ಮತ್ತು ಓರ್ವ ಬಸ್ಸಿನಲ್ಲಿ ತೆರಳಿದ್ದ. ಮುಂಬೈಗೆ ತೆರಳಿದ್ದ ಮುರುಗಂಡಿ ಮತ್ತು ತಂಡ ಅಲ್ಲಿಂದ ತಮಿಳುನಾಡಿಗೆ ಪರಾರಿಯಾಗಲು ಯೋಜನೆ ರೂಪಿಸಿದ್ದ. ದೋಚಿದ ಚಿನ್ನಾಭರಣವನ್ನು ಸಮಾನವಾಗಿ ಹಂಚಿಕೊಂಡು ಮುಂಬೈನ ಕಪ್ಪುಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ಲಾನ್ ಆರೋಪಿಗಳದ್ದಾಗಿತ್ತು. ಆರೋಪಿಗಳನ್ನು ಬಂಧಿಸುವುದು ಮಾತ್ರವಲ್ಲ, ಅವರಿಂದ ಬ್ಯಾಂಕ್ನಲ್ಲಿ ಅಡವಿಟ್ಟಿದ್ದ ಸುಮಾರು 1600 ಗ್ರಾಹಕರ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವುದು ಕೂಡಾ ಪೊಲೀಸರ ಪ್ರಮುಖ ಆದ್ಯತೆಯಾಗಿತ್ತು. ಈ ನಿಟ್ಟಿನಲ್ಲಿ ತಂಡಗಳ ಮೂಲಕ ಕಾರ್ಯಾಚರಣೆ ನಡೆಸಿದ ಕಾರಣ ಆರೋಪಿಗಳು ಚಿನ್ನಾಭರಣವನ್ನು ಮಾರಾಟ ಮಾಡುವ ಮೊದಲು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಹೇಳಿದರು.