ಮಂಗಳೂರು| ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗುವಿಗೆ ಅನ್ಯಾಯ ಆರೋಪ: ಜಿಲ್ಲಾಧಿಕಾರಿಗೆ ದೂರು
► ಉನ್ನತ ಮಟ್ಟದ ತನಿಖೆಗೆ ಆಗ್ರಹ ► ಯಾವುದೇ ನಿರ್ಲಕ್ಷ್ಯವಾಗಿಲ್ಲ, ಎಲ್ಲಾ ಸಾಕ್ಷ್ಯಾಧಾರಗಳು ಲಭ್ಯ: ಆಸ್ಪತ್ರೆಯ ಅಧೀಕ್ಷಕರು
ಮಂಗಳೂರು, ಆ. 21: ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಆ.18ರಂದು ಹೆರಿಗೆಯಾಗಿದ್ದರೂ ಎರಡು ದಿನಗಳ ಕಾಲ ಸೂಕ್ತ ಮಾಹಿತಿ ನೀಡದೆ ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಈ ಮೂಲಕ ತಮ್ಮ ಮಗುವಿಗೆ ಅನ್ಯಾಯವಾಗಿರುವ ಬಗ್ಗೆ ಸಂಶಯವಿದ್ದು, ಈ ಬಗ್ಗೆ ಉನ್ನತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಮಗುವಿನ ಪೋಷಕರು ಪೊಲೀಸರಿಗೆ ಹಾಗೂ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಪಾಣೆಮಂಗಳೂರಿನ ನಿವಾಸಿ ಹಾಗೂ ಸಂತ್ರಸ್ತೆ ತಮಗೆ ಅನ್ಯಾಯ ಆಗಿರುವುದಾಗಿ ಪೊಲೀಸರಿಗೆ ದೂರು ನೀಡಿರುವುದಲ್ಲದೆ, ಸಹೋದರ ಸಂತೋಷ್ ಕುಮಾರ್ ಎಂಬವರು ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಸಂತ್ರಸ್ತೆ ತಮ್ಮ ಎರಡನೆ ಹೆರಿಗೆಗಾಗಿ ಬಂಟ್ವಾಳದ ಸರಕಾರಿ ಆಸ್ಪತ್ರೆಗೆ ಆ. 17ರಂದು ತೆರಳಿದ್ದರು. ಈ ಸಂದರ್ಭ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರು ಇಲ್ಲದ ಕಾರಣ ಅವರನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಆ.18ರ ಬೆಳಗ್ಗೆ 2 ಗಂಟೆಯ ವೇಳೆಗೆ ದಾಖಲಿಸಲಾಗಿತ್ತು. ಬೆಳಗ್ಗೆ 9.50ರ ಸುಮಾರಿಗೆ ಭವ್ಯ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ವೇಳೆ ಆಸ್ಪತ್ರೆಯ ವೈದ್ಯರು ಮಗು ನಾರ್ಮಲ್ ಆಗಿದೆ ಎಂದು ತಿಳಿಸಿದ್ದರು. ಮಗುವಿಗೆ ಉಸಿರಾಟದ ತೊಂದರೆ ಇರುವುದಾಗಿ ಹೇಳಿ ಮಗುವನ್ನು ಎನ್‌ಐಸಿಯುಗೆ ದಾಖಲಿಸಲಾಗಿತ್ತು. ಆ ಬಳಿಕ ಮಂಗಳವಾರ ಸಂಜೆ ಬಂದು ಮಗುವಿಗೆ ಒಂದು ಕಣ್ಣಿನ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಇದರಿಂದ ಆಘಾತವಾಗಿದೆ. ಈ ಬಗ್ಗೆ ವೈದ್ಯರು ಹಾಗೂ ಮೇಲಾಧಿಕಾರಿಗಳು ಕಾರಣ ನೀಡದೆ ನುಣುಚಿಕೊಳ್ಳುತ್ತಿದ್ದಾರೆ. ವೈದ್ಯಕೀಯ ವರದಿಗಳನ್ನು ನೀಡದಿರುವುದು ಕೂಡಾ ಸಂಶಯಗಳಿಗೆ ಕಾರಣವಾಗಿದ್ದು, ಮಗವಿಗೆ ಅನ್ಯಾಯವಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸಂತೋಷ್‌ರವರು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
‘ಆ. 18ರಂದು ಬೆಳಗ್ಗೆ ನನಗೆ ನಾರ್ಮಲ್ ಹೆರಿಗೆ ಆಗಿತ್ತು. ಮಗು ಅತ್ತಿತ್ತು ಕೂಡಾ. ಹೆರಿಗೆಯಾದಾಗ ವೈದ್ಯರು ಮಗು ನಾರ್ಮಲ್ ಇದೆ ಎಂದಿದ್ದರು. ಬಳಿಕ ಉಸಿರಾಟದ ತೊಂದರೆ ಇರುವ ಕಾರಣ ಎನ್‌ಐಸಿಯು ನಲ್ಲಿ ಇರಿಸಲಾಗುತ್ತದೆ ಎಂದು ಹೇಳಿದ್ದರು. ಆದರೆ ಎರಡು ದಿನಗಳ ಬಳಿಕ ಅಂದರೆ ಮಂಗಳವಾರ ಸಂಜೆ ಮಗುವಿನ ಬಲಕಣ್ಣು ಇಲ್ಲ ಎಂದು ಹೇಳುವ ಮೂಲಕ ಆಘಾತ ನೀಡಿದ್ದಾರೆ. ಹೆರಿಗೆಯಾದ ದಿನ ನೋಡಿದ ಮಗುವಿಗೂ, ಎರಡು ದಿನಗಳ ನಂತರ ಮಗುವನ್ನು ನೋಡಿದಾಗ ನನಗೆ ಬದಲಾವಣೆ ಕಂಡು ಬಂದಿದೆ. ಸಹಜ ಹೆರಿಗೆ ಆಗಿ ಮೂರು ದಿನವಾದರೂ ಮಗುವಿಗೆ ಹಾಲುಣಿಸಲೂ ಅವಕಾಶ ನೀಡಲಾಗಿಲ್ಲ’ ಎಂದು ದೂರುದಾರರಾದ ಸಂತ್ರಸ್ತೆ ನೋವು ಹಂಚಿಕೊಂಡಿದ್ದಾರೆ.
‘ಮಗುವಿನ ತಾಯಿಯ ಸಹೋದರ ತನ್ನ ತಂಗಿಯ ಮಗುವಿಗೆ ಅನ್ಯಾಯವಾಗಿದೆ ಎಂದು ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಆ ಕುಟುಂಬದ ಜತೆ ನಿಂತು ಬಂದರು ಠಾಣೆಗೆ ದೂರು ಸಲ್ಲಿಸಲಾಗಿದೆ. ಇದೀಗ ಜಿಲ್ಲಾಧಿಕಾರಿಗೂ ಮನವಿ ನೀಡಿದ್ದು, ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಒತ್ತಾಯಿಸುತ್ತಿದ್ದೇವೆ’. -ಯೋಗೀಶ್ ಶೆಟ್ಟಿ ಜೆಪ್ಪು, ಅಧ್ಯಕ್ಷರು, ತುಳುನಾಡ ರಕ್ಷಣಾ ವೇದಿಕೆ.
‘ಆ.18ರಂದು ಬೆಳಗ್ಗೆ 2 ಗಂಟೆಯ ವೇಳೆಗೆ ಹೆರಿಗೆಗಾಗಿ ಬಂದಿದ್ದರು. ಅವರನ್ನು ದಾಖಲಿಸಿಕೊಂಡು ಬೆಳಗ್ಗೆ 9.58ಕ್ಕೆ ಸಹಜ ಹೆರಿಗೆ ಆಗಿತ್ತು. ಮಗುವಿನ ಲಿಂಗವನ್ನೂ ತಾಯಿಗೆ ತಿಳಿಸಲಾಗಿತ್ತು. ಆದರೆ ಮಗುವಿನ ಅಳು ಇದ್ದರೂ ಉಸಿರಾಟದಲ್ಲಿ ತೊಂದರೆ ಕಂಡು ಬಂದಿದೆ ಎಂದು ಮಕ್ಕಳ ತಜ್ಞ ವೈದ್ಯರು ಸ್ಪಂದನೆ ನೀಡಿ ನವಜಾತ ಶಿಶು ತೀವ್ರ ನಿಗಾ ಘಟಕ (ಎನ್‌ಐಸಿಯು)ಕ್ಕೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ತಜ್ಞ ವೈದ್ಯರು ಮಗುವಿಗೆ ಕೃತಕ ಉಸಿರಾಟ ಒದಗಿಸಲು ಸಿಪ್ಯಾಪ್ ಎಂಬ ವ್ಯವಸ್ಥೆಯನ್ನು ಅಳವಡಿಸಿ ಉಸಿರಾಟದ ವ್ಯವಸ್ಥೆಯನ್ನು ಸರಿಪಡಿಸಲು ಆದ್ಯತೆ ನೀಡಿದ್ದರು. ಮಗುವಿನಲ್ಲಿ ಇಂತಹ ಸಮಸ್ಯೆಗಳು ಕಾಣಿಸಿಕೊಂಡಾಗ ಅದು ಪರಿಹಾರದ ಬಳಿಕವಷ್ಟೇ ಮಗುವಿನ ಸಂಪೂರ್ಣ ತಪಾಸಣೆ ನಡೆಸಲಾಗುತ್ತದೆ. ಹೀಗಾಗಿ ಆ. 19ರಂದು ಮಗುವಿನ ಉಸಿರಾಟದಲ್ಲಿ ಸುಧಾರಣೆ ಕಂಡು ಬಂದಿದ್ದು, ಆ ದಿನ ರಾತ್ರಿ ಮಕ್ಕಳ ತಜ್ಞ ವೈದ್ಯರು ಉಳಿದ ನ್ಯೂನ್ಯತೆ ಕಂಡು ಹಿಡಿಯುವ ವೇಳೆ ಕಣ್ಣು ಗೆಡ್ಡೆ ಒಳಗೆ ಹೋಗಿರುವ ರೀತಿ ಕಂಡು ಬಂದಿತ್ತು. ಆದರೆ ಆ ಅದನ್ನು ಅವರು ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮಕ್ಕಳ ಕಣ್ಣಿನ ತಜ್ಞರ ಅಭಿಪ್ರಾಯ ಪಡೆಯಲು ನಿರ್ಧರಿಸಿ ಆ. 20ರಂದು ಬೆಳಗ್ಗೆ ಈ ಬಗ್ಗೆ ಮಗುವಿನ ಪೋಷಕರಿಗೆ ಈ ವಿಷಯ ತಿಳಿಸಲಾಗುತ್ತದೆ. ಬಳಿಕ ಮಕ್ಕಳ ಕಣ್ಣಿನ ತಜ್ಞರು ಅಲ್ಟ್ರಾಸೌಂಡ್ ತಪಾಸಣೆ ನಡೆಸಿದಾಗ ಮಗುವಿನ ಕಣ್ಣು ಗುಡ್ಡೆ ಜನನದ ವೇಳೆಯೇ ಇಲ್ಲದಿರುವುದು ಕಂಡು ಬರುತ್ತದೆ. ಅದನ್ನು ಸಂಜೆ ಪೋಷಕರಿಗೆ ತಿಳಿಸಿದಾಗ ಅವರು ಆತಂಕಕ್ಕೊಳಗಾಗುತ್ತಾರೆ. ಈ ವಿಷಯ ತಿಳಿಸಲು ವಿಳಂಬ ಮಾಡಲಾಗಿದೆ ಎಂದು ಆಸ್ಪತ್ರೆ ವಿರುದ್ಧ ಆರೋಪ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ಜನಿಸಿದ ಮಗುವಿಗೆ ತೊಂದರೆ ಇಲ್ಲದಾಗ ತಾಯಿ ಜತೆ ಮಗುವಿನ ಫೋಟೋ ತೆಗೆಯುವ ವ್ಯವಸ್ಥೆಯೂ ಇದೆ. ತೊಂದರೆ ಇದ್ದು ಎನ್‌ಐಸಿಯುಗೆ ಶಿಫ್ಟ್ ಮಾಡುವಾಗ ಅಲ್ಲಿಯೂ ಮಗುವಿಗೆ ಹೆರಿಗೆ ವೇಳೆ ಹಾಕಲಾಗುವ ಟ್ಯಾಗ್, ಕೇಸ್ ಶೀಟ್ ಇಟ್ಟು ಫೋಟೋ ನಮ್ಮ ಸಿಸ್ಟಮ್‌ಗಳಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಈ ಪ್ರಕರಣದಲ್ಲಿ ಈ ಎಲ್ಲಾ ದಾಖಲೆಗಳು ಇವೆ. ಅದಲ್ಲದೆ, ಹೆರಿಗೆ ರೂಂನಿಂದ ಉನ್ನತ ಚಿಕಿತ್ಸೆಗಾಗಿ ಎನ್‌ಐಸಿಯು ಗೆ ಶಿಫ್ಟ್ ಮಾಡುವ ವೇಳೆಯೂ ಸಿಸಿಟಿವಿ ಫೂಟೇಜ್ ದಾಖಲೆಯೂ ಆಸ್ಪತ್ರೆಯಲ್ಲಿ ಇದೆ. ಈ ಪ್ರಕರಣದಲ್ಲಿ ನಮ್ಮ ವೃತ್ತಿ ಧರ್ಮಕ್ಕೆ ಅಪಚಾರ ಆಗದ ರೀತಿಯಲ್ಲಿ ನಾವು ಕೆಲಸ ಮಾಡಿದ್ದೇವೆ.’
-ಡಾ. ದುಗಾ ಪ್ರಸಾದ್ ಎಂ.ಆರ್. ಅಧೀಕ್ಷಕರು, ಲೇಡಿಗೋಶನ್ ಆಸ್ಪತ್ರೆ, ಮಂಗಳೂರು.