ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ 4, 5ರ ಕಾಮಗಾರಿ ಪೂರ್ಣ: ಬಳಕೆಗೆ ಲಭ್ಯ

ಮಂಗಳೂರು, ನ.26: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ 4 ಮತ್ತು 5 ಪ್ಲಾಟ್ ಫಾರ್ಮ್ ನ ಕಾಮಗಾರಿ ಪೂರ್ಣಗೊಂಡಿದ್ದು, ಶನಿವಾರದಿಂದ ಪ್ಲಾಟ್ ಫಾರ್ಮ್ 5ರಲ್ಲಿ ಮಂಗಳೂರು- ಕಾಚಿಗುಡ ಎಕ್ಸ್ಪ್ರೆಸ್ ರೈಲು ನಿಲುಗಡೆ ಮಾಡುವ ಮೂಲಕ ಬಳಕೆ ಆರಂಭವಾಗಿದೆ.
ಈ ಎರಡೂ ಪ್ಲಾಟ್ ಫಾರ್ಮ್ ಗಳ ಅಧಿಕೃತ ಉದ್ಘಾಟನೆ ಇನ್ನಷ್ಟೇ ಆಗಬೇಕಾಗಿದೆ. ಕಾಚಿಗುಡದಿಂದ ಬೆಳಗ್ಗೆ 9:30ಕ್ಕೆ ಆಗಮಿಸಿದ ರೈಲನ್ನು ಈ ನೂತನ ಪ್ಲಾಟ್ ಫಾರ್ಮ್ ನಲ್ಲಿ ನಿಲುಗಡೆ ಮಾಡಲಾಗಿದ್ದು, ಸ್ವಚ್ಛತೆ, ತಾಂತ್ರಿಕ ನಿರ್ವಹಣೆಯ ಬಳಿಕ ರಾತ್ರಿ 8:05ಕ್ಕೆ ಕಾಚಿಗುಡಕ್ಕೆ ಪ್ರಯಾಣ ಬೆಳೆಸಿದೆ.
ಈ ನೂತನ ಪ್ಲಾಟ್ ಫಾರ್ಮ್ ಗಳಲ್ಲಿ ಪ್ರಯಾಣಿಕರಿಗೆ ಅಗತ್ಯವಾದ ಸೌಲಭ್ಯಗಳು ಇನ್ನಷ್ಟೇ ನಿರ್ಮಾಣವಾಗಬೇಕಾಗಿರುವ ಕಾರಣ, ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಆಗಮಿಸುವ ರೈಲುಗಳನ್ನು ಮಾತ್ರವೇ ಇಲ್ಲಿ ನಿಲುಗಡೆ ಮಾಡಲಾಗುತ್ತದೆ. 17 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಪ್ಲಾಟ್ ಫಾರ್ಮ್ ನಾಲ್ಕು ಮತ್ತು ಐದು 600 ಮೀಟರ್ ಉದ್ದವಿದ್ದು, 23 ರೈಲು ಕೋಚ್ ಗಳ ನಿಲುಗಡೆ ಸಾಮರ್ಥ್ಯವನ್ನು ಹೊಂದಿದೆ. ಜಿಲ್ಲೆಯ ರೈಲ್ವೆ ಬಳಕೆದಾರರ ಬೇಡಿಕೆಯ ಮೇರೆಗೆ ಸಂಸದ ನಳಿನ್ ಕುಮಾರ್ ಕಟೀಲು ಅವರ ಪ್ರಯತ್ನದಲ್ಲಿ ಅನುದಾನ ಮಂಜೂರುಗೊಂಡು ಈ ಪ್ಲಾಟ್ ಫಾರ್ಮ್ ಗಳು ನಿರ್ಮಾಣವಾಗಿವೆ. ಪ್ರಧಾನ ಮಂತ್ರಿಗಳೇ ಡಿಸೆಂಬರ್ ಅಂತ್ಯದೊಳಗೆ ಈ ಪ್ಲಾಟ್ ಫಾರ್ಮ್ ಅನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಯಾಣಿಕರ ಮೇಲ್ಸೇತುವೆ ಅಗತ್ಯ
ಸದ್ಯ 4 ಮತ್ತು 5ನೇ ಪ್ಲಾಟ್ ಫಾರ್ಮ್ ಸಿದ್ಧಗೊಂಡಿದ್ದು, ಬಳಕೆ ಮಾಡಬಹುದಾಗಿದ್ದರೂ, ಪ್ರಯಾಣಿಕರಿಗೆ ಮೇಲ್ಸೇತುವೆ ಇಲ್ಲದಿರುವುದರಿಂದ ಸಮಸ್ಯೆಯಾಗಲಿರುವ ಕಾರಣ ಸದ್ಯ ರೈಲುಗಳ ನಿಲುಗಡೆಗೆ ಮಾತ್ರವೇ ಈ ಪ್ಲಾಟ್ ಫಾರ್ಮ್ ಗಳನ್ನು ಬಳಸಲು ನಿರ್ಧರಿಸಲಾಗಿದೆ. ಇದಲ್ಲದೆ ಇಲ್ಲಿ ವಿದ್ಯುದ್ದೀಪ, ಕುಡಿಯುವ ನೀರಿನ ಸೌಕರ್ಯವೂ ಆಗಬೇಕಾಗಿದೆ. ಜನವರಿ ಅಂತ್ಯದೊಳಗೆ ಪಾದಾಚಾರಿ ಮೇಲ್ಸೇತುವೆ ನಿರ್ಮಾಣವಾಗುವ ನಿರೀಕ್ಷೆ ಇದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.
‘ರೈಲ್ವೇ ಬಳಕೆದಾರರ ಬಹು ಸಮಯದ ಬೇಡಿಕೆ ಈ ಪ್ಲಾಟ್ ಫಾರ್ಮ್ 4 ಮತ್ತು 5 ಕಾಮಗಾರಿ ಪೂರ್ಣಗೊಳ್ಳುವ ಮೂಲಕ ಈಡೇರಿದಂತಾಗಿದೆ. ಸದ್ಯ ಈ ಪ್ಲಾಟ್ ಫಾರ್ಮ್ ಗಳು ರೈಲು ನಿಲುಗಡೆಗೆ ಮಾತ್ರ ಬಳಕೆಯಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದು, ಶೀಘ್ರದಲ್ಲೇ ಪ್ರಯಾಣಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕೂಡಾ ಕಲ್ಪಿಸುವಂತೆ ಆಗ್ರಹಿಸಲಾಗಿದೆ.’
-ಜಿ.ಕೆ. ಭಟ್, ಸಾಮಾಜಿಕ ಕಾರ್ಯಕರ್ತ
