ಮಂಗಳೂರು: ಪ್ರಖ್ಯಾತ ಕಾದಂಬರಿಕಾರ ಕೆ.ಟಿ.ಗಟ್ಟಿ ಇನ್ನಿಲ್ಲ
ಮಂಗಳೂರು: ಹಿರಿಯ ಸಾಹಿತಿ,ಖ್ಯಾತ ಕಾದಂಬರಿಕಾರ ಕೆ.ಟಿ.ಗಟ್ಟಿ (ಕೂಡ್ಲು ತಿಮ್ಮಪ್ಪ ಗಟ್ಟಿ) ಅವರು ಸೋಮವಾರ ನಿಧನರಾಗಿದ್ದಾರೆ.
ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೂಲತಃ ಕಾಸರಗೋಡು ಜಿಲ್ಲೆಯ ಕೂಡ್ಲು ನಿವಾಸಿಯಾಗಿರುವ ಅವರು, ಇತ್ತೀಚೆಗೆ ಮಂಗಳೂರಿನಲ್ಲಿ ನೆಲೆಸಿದ್ದರು.
ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಕೆ.ಟಿ.ಗಟ್ಟಿ ಅವರು, ಪತ್ರಿಕಾ ಕಾದಂಬರಿಗಳ ಮೂಲಕ ಹೆಸರುವಾಸಿಯಾಗಿದ್ದರು.
ಉಡುಪಿಯ ಟಿ.ಎಂ.ಪೈ. ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಗಟ್ಟಿ ಅವರು, ಭಾರತ ಸರಕಾರದಿಂದ ಪ್ರಾಧ್ಯಾಪಕರಾಗಿ ಇಥಿಯೋಪಿಯಕ್ಕೆ ಪ್ರಯಾಣ ಬೆಳೆಸಿದ್ದರು. ಇಥಿಯೋಪಿಯದಿಂದ ಹಿಂತಿರುಗಿದ ನಂತರ ಉಜಿರೆಯಲ್ಲಿ ನೆಲೆಸಿದ್ದ ಇವರು ಕೃಷಿಯಲ್ಲಿ ತೊಡಗಿದ್ದರು.
ಕಲಿಕೆಯಲ್ಲಿ ನಿರಂತರ ಆಸಕ್ತಿ ಹೊಂದಿದ್ದ ಕೆ.ಟಿ.ಗಟ್ಟಿ ಅವರು ಇಂಗ್ಲೆಂಡಿನ ಟ್ರಿನಿಟಿ ಮತ್ತು ಆಕ್ಸಫರ್ಡ್ ಕಾಲೇಜುಗಳಿಂದ ಇಂಗ್ಲಿಷ್ ಕಲಿಕೆಯಲ್ಲಿ ಡಿಪ್ಲೋಮ ಗಳಿಸಿದ್ದರು.
ಸೋಮವಾರ ಮಧ್ಯಾಹ್ನ 1ರಿಂದ ಸಂಜೆ 3ರವರೆಗೆ ಅವರ ಪಾರ್ಥಿವ ಶರೀರವನ್ನು ಬಿಜೈನ ಕೆಎಂಸಿ ರಸ್ತೆಯ ಅನ್ನಬೆಲ್ಲೆ -2ರಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕಾಗಿ ಇರಿಸಲಾಗುತ್ತಿದೆ. ಬಳಿಕ ಅವರ ಇಚ್ಛೆಯಂತೆ ಪಾರ್ಥಿವ ಶರೀರವನ್ನು ಮಂಗಳೂರಿನ ಕೆಎಂಸಿ ಮೆಡಿಕಲ್ ಕಾಲೇಜಿಗೆ ದಾನ ಮಾಡುವುದಾಗಿ ಕುಟುಂಬ ಮೂಲಗಳು ಪ್ರಕಟನೆಯಲ್ಲಿ ತಿಳಿಸಿವೆ.
ಕೆ.ಟಿ.ಗಟ್ಟಿ ಅವರ ಕಾದಂಬರಿಗಳು
ಶಬ್ದಗಳು (1976), ಸೌಮ್ಯ (1978), ಮನೆ, ರಾಮಯಜ್ಞ, ನಿರಂತರ, ಅಬ್ರಾಹ್ಮಣ, ಅಮುಕ್ತ, ಅವಿಭಕ್ತರು, ಕರ್ಮಣ್ಯೇ ವಾಧಿಕಾರಸ್ತೇ, ಕೂಪ, ಪೂಜಾರಿ, ಬಿಸಿಲುಗುದುರೆ, ಮೃತ್ಯೋರ್ಮಾ ಅಮೃತಂ ಗಮಯ, ಯುಗಾಂತರ, ಶಿಲಾತಪಸ್ವಿ, ಸ್ವರ್ಣಮೃಗ, ಅರಗಿನ ಮನೆ.