ಮಂಗಳೂರು: ಖ್ಯಾತ ಸಾಹಿತಿ ಪ್ರೊ.ಅಮೃತ ಸೋಮೇಶ್ವರ ನಿಧನ
ಉಳ್ಳಾಲ: ಖ್ಯಾತ ಸಾಹಿತಿ ಪ್ರೊ.ಅಮೃತ ಸೋಮೇಶ್ವರ(88) ಅವರು ಶನಿವಾರ ಬೆಳಿಗ್ಗೆ ತಮ್ಮ ಸ್ವಗೃಹ ಸೋಮೇಶ್ವರದ "ಒಲುಮೆ"ಯಲ್ಲಿ ನಿಧನರಾದರು. ನಿಧನರಾದರು.
ದಕ್ಷಿಣ ಕನ್ನಡ ಜಿಲ್ಲೆಯ ಓರ್ವ ಹಿರಿಯ ಕನ್ನಡ, ತುಳು ಸಾಹಿತಿ, ಯಕ್ಷಗಾನ ಪ್ರಸಂಗಕರ್ತರಾಗಿದ್ದ ಇವರು, ಸಮಾಜಮುಖಿ ಚಂತನೆಯುಳ್ಳ ಓರ್ವ ಸಹೃದಯಿಯಾಗಿದ್ದರು.
ಮಂಗಳೂರು ತಾಲೂಕಿನ ಸೋಮೇಶ್ವರ ಗ್ರಾಮದ ಅಡ್ಕ ನಿವಾಸಿಯಾಗಿರುವ ಅಮೃತ ಸೋಮೇಶ್ವರ ಅವರು 1935 ಸೆಪ್ಟೆಂಬರ್ 27 ರಂದು ಜನಿಸಿದರು. ತಮ್ಮ ಬಾಲ್ಯವನ್ನು ಮುಂಬೈಯಲ್ಲಿ ಕಳೆದ ಅಮೃತರು, ಐದು ವರ್ಷವಾಗುವಾಗ ಊರಿಗೆ ಮರಳಿ, ಕೋಟೆಕಾರಿನಲ್ಲಿರುವ ಸ್ಟೆಲ್ಲಾ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ವರೆಗೆ ಕಲಿತರು. ನಂತರ ಆನಂದಾಶ್ರಮ ಪ್ರೌಢಶಾಲೆಯಲ್ಲಿ 6ನೇ ತರಗತಿಯ ಕಲಿಕೆ ಮುಂದುವರಿಸಿದ ಅವರು 1954ರಲ್ಲಿ ಎಸೆಸೆಲ್ಸಿ ಉತ್ತೀರ್ಣರಾದರು.
ಮನೆ ಭಾಷೆ ಮಲೆಯಾಳ ಆಗಿದ್ದರೂ ಕನ್ನಡ, ತುಳು, ಸಾಹಿತ್ಯದಲ್ಲಿ ಕೃಷಿ ಮಾಡಿದ್ದಲ್ಲದೆ, ಕನ್ನಡದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದರು.
ನೂರಾರು ಮಂದಿ ಕಲೆ, ಸಾಹಿತ್ಯ, ಸಂಶೋಧನಾಸಕ್ತರಿಗೆ ಸದಾ ಕಾಲ ಪ್ರೇರಕ, ಮಾರ್ಗದರ್ಶಕರಾಗಿ ಗುರುತಿಸಿಕೊಂಡವರು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಾಡಿನ ಕೀರ್ತಿ ಹೆಚ್ಚಿಸಿದ ಅಮೃತರನ್ನು ಮಂಗಳೂರು ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020ನೇ ನೇ ಸಾಲಿನ "ಗೌರವಶ್ರೀ" ಪ್ರಶಸ್ತಿ, ಮಣಿಪಾಲ ಅಕಾಡೆಮಿಯ ಮಾಹೆ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಯಿಂದ ಸಂಘ ಸಂಸ್ಥೆಗಳ ಸನ್ಮಾನದಿಂದ ಪುರಸ್ಕೃತರಾಗಿದ್ದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020 ನೇ ಸಾಲಿನ "ಗೌರವಶ್ರೀ" ಪ್ರಶಸ್ತಿಯನ್ನು ಅವರ 86ನೇ ಹುಟ್ಟುದಿನದಂದು ಅವರ ಮನೆಯಲ್ಲಿಯೇ ಪ್ರದಾನ ಮಾಡಲಾಗಿತ್ತು.
ತುಳು ಭಾಷೆ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ ಅಮೃತ ಸೋಮೇಶ್ವರ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ ಎಂದು ಹಲವು ಸಾಹಿತಿಗಳು, ಲೇಖಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರು ಪತ್ನಿ ನರ್ಮದಾ, ಮಕ್ಕಳಾದ ಚೇತನ್, ಜೀವನ್ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಸೋಮೇಶ್ವರ ಪುರಸಭೆ ಕಚೇರಿ ಬಳಿಯ ಅವರ ಸ್ವಗೃಹದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ರವಿವಾರ(ಜ.7) ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.