ಮಂಗಳೂರು: ಬ್ಯಾರಿ ಎಂದು ಪತ್ರಕರ್ತನಿಗೆ ಅವಾಚ್ಯ ಶಬ್ಧಗಳ ನಿಂದನೆ, ಬೆದರಿಕೆ ಪ್ರಕರಣ; ಇಬ್ಬರ ಬಂಧನ
ದ.ಕ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅನೈತಿಕ ಪೊಲೀಸ್ಗಿರಿ
ಬಂಧಿತ ಆರೋಪಿಗಳು
ಮಂಗಳೂರು,ಜು.31: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಚಿಸಲಾದ ‘ಆ್ಯಂಟಿ ಕಮ್ಯುನಲ್ ವಿಂಗ್’ನ ಹೊರತಾಗಿಯೂ ದ.ಕ. ಜಿಲ್ಲೆಯಲ್ಲಿ ಅನೈತಿಕ ಪೊಲೀಸ್ಗಿರಿ ಹೆಚ್ಚುತ್ತಿದ್ದು, ನಗರದ ಯುವ ಪತ್ರಕರ್ತರೊಬ್ಬರನ್ನು ತಡೆದು ಧರ್ಮದ ಹೆಸರೆತ್ತಿ ಅವಾಚ್ಯವಾಗಿ ನಿಂದಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಕೋಟೆಕಾರ್ನ ಚೇತನ್ ಕುಮಾರ್ (38) ಮತ್ತು ಎಯ್ಯಾಡಿಯ ನವೀನ್ (39) ಎಂಬವರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಚೇತನ್ ಕುಮಾರ್ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಸೆ. 506, 507ನಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೆಲವು ದಿನದ ಹಿಂದೆ ವಿಟ್ಲದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಅಡ್ಡಗಟ್ಟಿ ನಿಂದಿಸಿ ಅನೈತಿಕ ಪೊಲೀಸ್ಗಿರಿ ಎಸಗಿದ ಪ್ರಕರಣವು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೊಳಗಾಗಿತ್ತು.
ಘಟನೆಯ ವಿವರ
ನಗರದ ವೆಬ್ಸೈಟ್ವೊಂದರ ಯುವ ವರದಿಗಾರ ಅಭಿಜಿತ್ ಜು.26ರಂದು ಅಪರಾಹ್ನ 3ಕ್ಕೆ ಕಾವೂರು ಜಂಕ್ಷನ್ ಬಳಿಯ ಹೊಟೇಲೊಂದರಲ್ಲಿ ತನ್ನ ಕಾಲೇಜಿನ ಸಹಪಾಠಿಯಾಗಿದ್ದ ಯುವತಿಯ ಜೊತೆ ಊಟ ಮುಗಿಸಿ ಹೊರ ಬರುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಬಂದು ‘ನೀನು ಬ್ಯಾರಿಯೊಂದಿಗೆ ಏನು ಮಾತನಾಡುತ್ತಿ. ನೀನು ಬ್ಯಾರಿಯಾ? ಇಲ್ಲಿಂದ ಹೊರಡು’ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಈ ಸಂದರ್ಭ ಅಭಿಜಿತ್ ತಾನು ವೆಬ್ಸೈಟ್ವೊಂದರ ವರದಿಗಾರನೆಂದು ತನ್ನ ಐಡಿ ಕಾರ್ಡ್ ತೋರಿಸಿದರೂ ಅಪರಿಚಿತ ವ್ಯಕ್ತಿ ಮತ್ತೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಪರಿಚಿತ ವ್ಯಕ್ತಿಯ ಜೊತೆ ಇನ್ನೂ ಒಬ್ಬ ಇದ್ದ ಎಂದು ಹೇಳಲಾಗಿತ್ತು.
ಈ ಬಗ್ಗೆ ಅಭಿಜಿತ್ ಅದೇ ದಿನ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆ ಸಂದರ್ಭ ಅಪರಿಚಿತ ವ್ಯಕ್ತಿಯ ಕಾರಿನ ನಂಬರ್ ನೋಟ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸ್ ಆಯುಕ್ತ ಕುಲದೀಪ್ ಆರ್. ಜೈನ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅವರ ನಿರ್ದೇಶನದ ಮೇರೆಗೆ ಆರೋಪಿಗಳಾದ ಚೇತನ್ ಕುಮಾರ್ ಹಾಗೂ ನವೀನ್ರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಅಭಿಜಿತ್, ‘ಸ್ನೇಹಿತೆಯ ಜತೆ ಮಧ್ಯಾಹ್ನ ಊಟ ಮುಗಿಸಿ ಹೊಟೇಲ್ನಿಂದ ಹೊರ ಬರುತ್ತಿದ್ದ ಸಂದರ್ಭ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರು ನಮ್ಮ ಬಳಿ ಬಂದಿದ್ದಾರೆ. ಅವರಲ್ಲಿ ಒಬ್ಬಾತ ಅವಾಚ್ಯ ಶಬ್ಧಗಳನ್ನು ಉಪಯೋಗಿಸಿ ನಿಂದಿಸಿದ್ದಾನೆ. ನಾನು ವರದಿಗಾರ ಎಂದು ಹೇಳಿ ಐಡಿ ತೋರಿಸಿದರೂ ಸಮಾಧಾನಗೊಳ್ಳದೆ ನಿಂದನೆ ಮುಂದುವರಿಸಿದ್ದಾನೆ. ಅವರ ಕಾರಿನ ನಂಬರ್ ನೋಟ್ ಮಾಡಿದ್ದು, ಪ್ರಕರಣ ದಾಖಲಿಸಿದ್ದೇನೆ. ಠಾಣಾ ಪೊಲೀಸರು, ಎಸಿಪಿ ಸೇರಿದಂತೆ ಪೊಲೀಸ್ ಕಮಿಷನರ್ ಕೂಡಾ ಪ್ರಕರಣದಲ್ಲಿ ಸಹಕಾರ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.