ಮಂಗಳೂರು: ಅಬುಧಾಬಿಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ 12 ಗಂಟೆ ವಿಳಂಬ: ಪರದಾಡಿದ ಪ್ರಯಾಣಿಕರು
ಸಾಂದರ್ಭಿಕ ಚಿತ್ರ (PTI)
ಬಜ್ಪೆ: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಸೋಮವಾರ ರಾತ್ರಿ ಪ್ರಯಾಣಿಸಬೇಕಿದ್ದ IX815/AUH ಏರ್ ಇಂಡಿಯಾ ವಿಮಾನ 12 ಗಂಟೆ ತಡವಾಗಿ ತೆರಳಿದ ಘಟನೆ ವರದಿಯಾಗಿದೆ. ವಿಮಾನ ಯಾನ ವಿಳಂಬದಿಂದ ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾದರು.
ಅಬುಧಾಬಿಯಿಂದ ಸೋಮವಾರ(ಡಿ.16) ರಾತ್ರಿ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ IX815/AUH ಏರ್ ಇಂಡಿಯಾ ವಿಮಾನವು ಅದೇ ದಿನ ರಾತ್ರಿ 8:55ಕ್ಕೆ ಅಬುಧಾಬಿಗೆ ಮರು ಪ್ರಯಾಣ ಆರಂಭಿಸಬೇಕಿತ್ತು. ಆದರೆ, ಈ ವಿಮಾನವು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವಾಗಲೇ ತಡವಾಗಿತ್ತೆನ್ನಲಾಗಿದೆ. ರಾತ್ರಿ 8:55ಕ್ಕೆ ಮಂಗಳೂರಿನಿಂದ ಮರು ಹಾರಾಟ ಆರಂಭಿಸಬೇಕಿದ್ದ ವಿಮಾನ ಮಂಗಳವಾರ(ಡಿ.17) ಬೆಳಗ್ಗೆ 8:45ಕ್ಕೆ ಪ್ರಯಾಣ ಬೆಳೆಸಿದೆ. 12 ಗಂಟೆಗಳಷ್ಟು ತಡವಾಗಿ ಪಯಣ ಬೆಳೆಸಿದೆ ಎಂದು ತಿಳಿದು ಬಂದಿದೆ.
ಸೋಮವಾರ ರಾತ್ರಿ ಅಬುಧಾಬಿಗೆ ತೆರಳಲು ಕಾಯುತ್ತಿದ್ದ ಪ್ರಯಾಣಿಕರಿಗೆ ತಾಂತ್ರಿಕ ಅಡಚಣೆ ಕಾರಣ ವಿಮಾನವು ತಡರಾತ್ರಿ 1 ಗಂಟೆಗೆ ಹೊರಡಲಿದೆ ಏರ್ ಇಂಡಿಯಾ ಸಂಸ್ಥೆ ಮಾಹಿತಿ ನೀಡಿತ್ತು. ಬಳಿಕ ಬೆಳಗ್ಗಿನ ಜಾವ 3 ಗಂಟೆಗೆ ಹೊರಡಲಿದೆ ಎಂದು ತಿಳಿಸಿದರು. ಆದರೆ ವಿಮಾನ ಯಾನ ಆರಂಭಿಸಿದಾಗ ಮಂಗಳವಾರ ಬೆಳಗ್ಗೆ 8:45 ಆಗಿತ್ತು ಎಂದು ತಿಳಿದು ಬಂದಿದೆ.
ಈ ನಡುವೆ ವಿಮಾನ ಯಾನ ವಿಳಂಬದಿಂದ ನಿಲ್ದಾಣದಲ್ಲಿ ಬಾಕಿಯಾಗಿದ್ದ ಪ್ರಯಾಣಿಕರಿಗೆ ಉಳಿದುಕೊಳ್ಳಲು ಏರ್ ಇಂಡಿಯಾ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಪ್ರಯಾಣಿಕರಿಗೆ ಬೆಳಗ್ಗಿನ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾತ್ರಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿಲ್ಲ ಎಂದು ವಿಮಾನ ನಿಲ್ದಾಣದ ಮೂಲಗಳು ಮಾಹಿತಿ ನೀಡಿವೆ.