ಮಂಗಳೂರು: ತಪ್ಪು ಹೇಳಿಕೆ ನೀಡಿರುವ ಶಾಸಕ ವೇದವ್ಯಾಸ ಕಾಮತ್ ಕ್ಷಮೆ ಯಾಚಿಸಲಿ: ಸಿಪಿಐ ಆಗ್ರಹ
ಮಂಗಳೂರು: ವಿಶ್ವವಿದ್ಯಾನಿಲಯದಲ್ಲಿ ಆಚರಿಸಲ್ಪಡುವ ವಿದ್ಯಾರ್ಥಿಗಳ ಗಣೇಶೋತ್ಸವದ ಕುರಿತಂತೆ ಉಲ್ಭಣಿಸಿರುವ ಗೊಂದಲಗಳ ಬಗ್ಗೆ ಪ್ರತಿಕ್ರಿಯಿಸುವ ಬರದಲ್ಲಿ ಮಂಗಳೂರಿನ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ರವರು ಕಮ್ಯೂನಿಸ್ಟರನ್ನು ಕುರಿತು ತಪ್ಪು ಮತ್ತು ರಾಜಕೀಯ ದುರುದ್ದೇಶದ ಹೇಳಿಕೆ ನೀಡಿರುವುದರ ವಿರುದ್ಧ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಕರ್ನಾಟಕ ರಾಜ್ಯ ಮಂಡಳಿ ಖಂಡನೆ ವ್ಯಕ್ತಪಡಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಆಚರಿಸುವ ಗಣೇಶೋತ್ಸವದ ಕಾರ್ಯಕ್ರಮದ ವಾಸ್ತವಿಕತೆಯನ್ನು ಅರಿತು ಅಲ್ಲಿ ಉಲ್ಭಣಗೊಂಡಿರುವ ಸಮಸ್ಯೆಯನ್ನು ಪರಿಹರಿಸಲು ಒಬ್ಬ ಶಾಸಕನಾಗಿ ಜವಾಬ್ದಾರಿವಹಿಸಿಕೊಳ್ಳದೆ ರಾಜಕೀಯ ಪ್ರೇರಿತವಾದ ಹೇಳಿಕೆಗಳನ್ನು ನೀಡುವ ಮೂಲಕ ಮತ್ತು ಕುಲಪತಿಗಳನ್ನು ಕೂಡಿಹಾಕಿ ದಬ್ಬಾಳಿಕೆ ನಡೆಸುವ ಗೂಂಡಾ ಪ್ರವೃತ್ತಿಯನ್ನು ಪ್ರದರ್ಶಿಸುವ ಮೂಲಕ ಕಮ್ಯೂನಿಸ್ಟರ ಹೆಸರನ್ನು ಎಳೆದು ತಂದು ಕಮ್ಯೂನಿಸ್ಟರ ಕಾರ್ಯಕ್ರಮಗಳಿಗೆ ವಿಶ್ವವಿದ್ಯಾಲಯ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿ ಜನರಲ್ಲಿ ತಪ್ಪು ಸಂದೇಶ ನೀಡಿರುವ ಬಗ್ಗೆ ಶಾಸಕರು ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ.
ಇತ್ತೀಚಿಗೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ಮಾಜಿ ಶಾಸಕರು, ರಾಜ್ಯಸಭಾ ಸದಸ್ಯರು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದಂತಹ ಬಿ.ವಿ. ಕಕ್ಕಿಲ್ಲಾಯರವರ ಸ್ಮರಣಾರ್ಥ ಆಯೋಜಿಸಲಾಗಿದ್ದ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಅಸುನೀಗಿದ ಸ್ವಾತಂತ್ರ್ಯ ಹೋರಾಟಗಾರರ ನೆನಪು ಕಾರ್ಯಕ್ರಮವು ಎಂ.ಎಸ್.ಕೆ ಟ್ರಸ್ಟ್ ಮತ್ತು ಮಂಗಳೂರಿನ ಸಮದರ್ಶಿ ವೇದಿಕೆ ನೇತೃತ್ವದಲ್ಲಿ ಜರುಗಿತ್ತು. ಸದರಿ ಕಾರ್ಯಕ್ರಮಕ್ಕೆ ಆಯೋಜಕರಾಗಿದ್ದ ಟ್ರಸ್ಟ್ ವತಿಯಿಂದಲೇ ಎಲ್ಲಾ ಖರ್ಚುವೆಚ್ಚಗಳನ್ನು ಮತ್ತು ಸಭಾಂಗಣದ ಬಾಡಿಗೆಯನ್ನು ಪಾವತಿಸಲಾಗಿದೆ. ವಿಶ್ವವಿದ್ಯಾನಿಲಯದಿಂದಾಗಲಿ ಅಥವಾ ಕಾಲೇಜಿನಿಂದಾಗಲಿ ಸದರಿ ಕಾರ್ಯಕ್ರಮಕ್ಕೆ ಒಂದೇ ಒಂದು ರೂಪಾಯಿ ಖರ್ಚು ಮಾಡಿದ್ದರೂ ಸಹ ಅದನ್ನು ಮಾನ್ಯ ಶಾಸಕರು ಅದನ್ನು ಸಾಬೀತು ಪಡಿಸಬೇಕಾಗಿದೆ ಎಂದು ಹೇಳಿದೆ.
ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರದಂತಹ ವಿಚಾರಗಳ ಕುರಿತು ಸಂವಾದ ವಿಚಾರ ಸಂಕೀರ್ಣಗಳನ್ನು ನಡೆಸುವುದು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಜವಾಬ್ದಾರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ವಿಚಾರಪೂರಿತ ಕಾರ್ಯಕ್ರಮಗಳು ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಅವಶ್ಯಕತೆ ಇದೆ. ಆದರೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಬಿಜೆಪಿ ಮತ್ತು ಎಬಿವಿಪಿಯ ಕೆಲವು ನಾಯಕರು ಕಾರ್ಯಕ್ರಮವನ್ನು ಅಡ್ಡಿ ಪಡಿಸುವ ಸಲುವಾಗಿಯೇ ಸ್ವಾತಂತ್ರ್ಯ ಹೋರಾಟಗಾರರ ನೆನಪಿನ ಕಾರ್ಯಕ್ರಮದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಗಣೇಶೋತ್ಸವದ ಕಾರ್ಯಕ್ರಮವನ್ನು ರಾಜಕೀಯ ಲೇಪಿತ ಕಾರ್ಯಕ್ರಮವನ್ನಾಗಿ ರೂಪಿಸಲು ಮುಂದಾದ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕ್ರಮಕ್ಕೆ ಅವಕಾಶ ನೀಡುವ ಕುರಿತು ಉಂಟಾದ ಗೊಂದಲಗಳನ್ನು ಮರೆಮಾಚಲು ಕಮ್ಯೂನಿಸ್ಟರ ಹೆಸರನ್ನು ಬಳಸಿಕೊಂಡು, ಗಣೇಶೋತ್ಸವ ಮಾಡದಂತೆ ಕಮ್ಯೂನಿಸ್ಟರು ಮತ್ತು ಕಾಂಗ್ರೆಸ್ಸಿಗರು ವಿಶ್ವವಿದ್ಯಾನಿಲಯದ ಮೇಲೆ ಒತ್ತಡ ಹಾಕಿದ್ದಾರೆಂದು ಸುಳ್ಳು ಹೇಳಿಕೆ ನೀಡಿರುವುದು ಅತ್ಯಂತ ಖಂಡನಾರ್ಹವಾಗಿದೆ. ಅಲ್ಲದೆ ಈ ಹಿಂದಿನಿಂದಲೂ ವಿಶ್ವವಿದ್ಯಾನಿಲಯದಲ್ಲಿ ಅಲ್ಲಿನ ವಿದ್ಯಾರ್ಥಿಗಳು ರಾಷ್ಟ್ರೀಯ ಭಾವೈಕ್ಯತೆ ಮತ್ತು ಸಾಂಸ್ಕೃತಿಕ ಅಸ್ಮಿತೆಯ ನೆಲೆಯಲ್ಲಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿತ್ತು. ಆದರೆ ಇದೀಗ ಕಾಲೇಜುಗಳಿಗೆ ರಜೆ ಇದ್ದು ವಿದ್ಯಾರ್ಥಿಗಳು ಹಾಜರಿಲ್ಲದ ಸಂದರ್ಭದಲ್ಲಿ ಸಂಘ ಪರಿವಾರದ ಹೊರಗಿನ ಶಕ್ತಿಗಳು ಉತ್ಸವವನ್ನು ವಿಶ್ವವಿದ್ಯಾನಿಲಯದ ಆವರಣದಲ್ಲಿ ಆಚರಿಸಲು ಮತ್ತು ಅನುದಾನ ಬಿಡುಗಡೆಗೊಳಿಸಲು ಒತ್ತಡ ಹಾಕಿರುವುದು ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಧಾರ್ಮಿಕ ಕ್ಷೋಭೆ ಉಂಟುಮಾಡುವ ಹುನ್ನಾರವಾಗಿದೆ. ಈ ಬಗ್ಗೆ ಶಾಸಕರು ತಮ್ಮ ತಪ್ಪನ್ನು ತಿದ್ದುಕೊಂಡು ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ ಪ್ರತಿಭಟನೆ ನಡೆಸಲು ಸಿಪಿಐ ಕರೆ ನೀಡುತ್ತದೆ ಎಂದು ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿದೆ.