ಮಂಗಳೂರು: ವಕೀಲೆಗೆ ಮಾನಸಿಕ ಕಿರುಕುಳ ಆರೋಪ; ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ WIM ಆಗ್ರಹ
ಮಂಗಳೂರು: ನಗರದ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ವಕೀಲೆಯೊಬ್ಬರಿಗೆ ಬಸ್ಸಿನ ಡ್ರೈವರ್ ಮತ್ತು ನಿರ್ವಾಹಕ ಉಡಾಫೆಯಿಂದ ವರ್ತಿಸಿದ ಘಟನೆಯನ್ನು ವಿಮನ್ ಇಂಡಿಯಾ ಮೂಮೆಂಟ್ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದೆ.
ಬಸ್ ಹತ್ತುವಾಗ ಚಾಲಕನು ದುಡುಕಿನಿಂದ ಚಲಾಯಿಸಿದ ಕಾರಣ ಬೀಳುವಂತಾದರೂ ಬಸ್ ನಿಲ್ಲಿಸದಿರುವುದು ಖಂಡನೀಯ. ಅದೇ ವೇಳೆ ಬಸ್ ಕಂಡಕ್ಟರ್ ನ ವರ್ತನೆಯೂ ಕೂಡ ಅಕ್ಷಮ್ಯ. ಬುದ್ಧಿವಂತರ ಜಿಲ್ಲೆ ಎನಿಸಿಕೊಂಡಿರುವ ದಕ್ಷಿಣ ಕನ್ನಡದಲ್ಲಿ ಬಸ್ ಸಿಬ್ಬಂದಿಗಳ ದುಡುಕು ,ನಿಂದನೆ ,ಉಡಾಫೆ ಇತ್ಯಾದಿಗಳಿಂದ ದಿನನಿತ್ಯ ಪ್ರಯಾಣಿಕರು ತೀವ್ರ ಹಿಂಸೆ ಅನುಭವಿಸುತ್ತಿದ್ದಾರೆ.ಮಹಿಳೆಯರು ಮಕ್ಕಳು- ವಿದ್ಯಾರ್ಥಿಗಳು- ಹಿರಿಯರು ನಿರಂತರ ಇವರ ಕಿರುಕುಳಕ್ಕೆ ಒಳಗಾಗುತ್ತಲೇ ಇದ್ದಾರೆ. ಇದರಿಂದ ಸಾರ್ವಜನಿಕರು ತೀವ್ರವಾಗಿ ಬೇಸತ್ತಿದ್ದಾರೆ. ಇದೀಗ ಎಫ್ ಐ ಆರ್ ದಾಖಲಾಗಿದ್ದರೂ ಕೂಡ ಚಾಲಕ ಮತ್ತು ನಿರ್ವಾಹಕರನ್ನು ವಶಕ್ಕೆ ಪಡೆಯದಿರುವುದರಿಂದ ಅವರು ದರ್ಪವನ್ನು ಮುಂದುವರಿಸುತ್ತಿದ್ದಾರೆ.
ಚಾಲಕ ಮತ್ತು ನಿರ್ವಾಹಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿರಲು ಕಾರಣವೇನು? ಮಂಗಳೂರು ಕಮಿಷನರ್ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದಂತೆ ತೋರುತ್ತಿದೆ. ಮಹಿಳಾಪರ ಸರಕಾರವೆಂದು ಸ್ವಯಂ ಘೋಷಿಸುತ್ತಿರುವ ಕಾಂಗ್ರೆಸ್ ಸರಕಾರ, ಉಸ್ತುವಾರಿ ಸಚಿವರು, ಮಹಿಳಾ ಮಕ್ಕಳ ಇಲಾಖೆ ಸಚಿವರು ಈ ಕಡೆ ಗಮನಹರಿಸಬೇಕು. ಅನ್ಯತಾ ಮಹಿಳಾ ಭದ್ರತೆ ಬರಿಯ ಘೋಷಣೆ ಮಾತ್ರವಾಗಿ ಮಹಿಳಾ ಶೋಷಣೆ ಮುಂದುವರಿದಿದೆ.
ಆದ್ದರಿಂದ ಬಸ್ ಹಾಗೂ ಚಾಲಕನ ಪರವಾನಗಿ ವಶಪಡಿಸಿಕೊಂಡು ಇಬ್ಬರನ್ನೂ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು.ಮತ್ತು ಇಂತಹ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಮೆನ್ ಇಂಡಿಯ ಮೂವ್ಮೆಂಟ್ ಒತ್ತಾಯಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಶಾ ಮೂಡುಶೆಡ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.