ಮಂಗಳೂರು ಉತ್ತರ: ಗ್ರಾ.ಪಂ ಉಪ ಚುನಾವಣೆ; ಮೂರೂ ವಾರ್ಡ್‌ಗಳು 'ಕೈ' ತೆಕ್ಕೆಗೆ
ಬಿಜೆಪಿಗೆ ಮುಖಭಂಗ
ಬಜ್ಪೆ: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಗ್ರಾಮ ಪಂಚಾಯತ್ ಗಳಿಗೆ ನಡೆದ ಉಪಚುನಾವಣೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಂದಾಳತ್ವದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಬಿಜೆಪಿ ಮುಖಭಂಗ ಅನುಭವಿಸುವಂತೆ ಮಾಡಿದೆ.
ಮಂಗಳೂರು ಉತ್ತರದ ಗಂಜಿಮಠ, ನೀರುಮಾರ್ಗ ಮತ್ತು ಅಡ್ಯಾರ್ ಪಂಚಾಯತ್ ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರು ವಾರ್ಡ್‌ಗಳನ್ನು ಕಾಂಗ್ರೆಸ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಬಿಜೆಪಿಯ ಭದ್ರಕೋಟೆ ಎನ್ನಲಾಗುತ್ತಿದ್ದ, ಮೂರು ದಶಕಗಳಿಂದ ಬಿಜೆಪಿ ವಶದಲ್ಲಿದ್ದ ಗಂಜಿಮಠ ಪಂಚಾಯತ್‌ನ ಮಳಲಿ ಮೊಗರು ವಾರ್ಡ್‌ನಲ್ಲಿ ಈ ಬಾರಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಕಣದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ 50 ಮತಗಳ ಅಂತರದಿಂದ ಗೆದ್ದು, ಮೂರು ದಶಕಗಳ ಬಿಜೆಪಿಯ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದಾರೆ. ನೀರು ಮಾರ್ಗ ಪಂಚಾಯತ್‌ನ ಬೊಂಡಂತಿಲ ವಾರ್ಡ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಶ್ರಫ್ 86 ಮತಗಳ ಅಂತರದಿಂದ ಜಯಗಳಿಸಿದರೆ, ಅಡ್ಯಾರ್ ಪಂಚಾಯತ್‌ನ ಅಡ್ಯಾರ್ ಪದವು ವಾರ್ಡ್‌ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೌರವ್ ಶೆಟ್ಟಿ 175 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಈ ಉಪ ಚುನಾವಣೆಯ ವೇಳೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವೈ. ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ವಿಶೇಷ ಮುತುವರ್ಜಿವಹಿಸಿ ಪ್ರತೀ ಮನೆಗಳಿಗೆ ತೆರಳಿ ಪ್ರಚಾರದಲ್ಲಿ ತೊಡಗಿದ್ದರೂ ಬಿಜೆಪಿ ಅಭ್ಯರ್ಥಿಗಳು ಸೋಲುಣ್ಣುವ ಮೂಲಕ ಶಾಸಕ ಭರತ್ ಶೆಟ್ಟಿಗೆ ಮುಖಭಂಗವಾಗಿದ್ದು, ಇನಾಯತ್ ಅಲಿ ಅವರ ಪ್ರಯತ್ನಕ್ಕೆ ಮತದಾರರು ಕೈಹಿಡಿದಿದ್ದಾರೆ. ಒಟ್ಟಾರೆಯಾಗಿ ಮಂಗಳೂರು ಉತ್ತರದಲ್ಲಿ ಮೂರು ದಶಕಗಳಿಂದ ತನ್ನ ವಶದಲ್ಲಿಟ್ಟುಕೊಂಡಿದ್ದ ಭದ್ರಕೋಟೆಯನ್ನು ಇನಾಯತ್ ಅಲಿ ತನ್ನ ಕೈವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.