ಮಂಗಳೂರು: ಸಾಕುನಾಯಿಯನ್ನು ತ್ಯಾಜ್ಯ ವಿಲೇವಾರಿ ವಾಹನಕ್ಕೆ ನೀಡಿದ ಮನೆಮಂದಿ!
ಪಶುಪಾಲನಾ ಇಲಾಖೆಯಿಂದ ಮನಪಾಕ್ಕೆ ನೋಟಿಸ್
ಮಂಗಳೂರು: ಸಾಕುನಾಯಿಯನ್ನು ಜೀವಂತವಾಗಿಯೇ ತ್ಯಾಜ್ಯ ವಿಲೇವಾರಿ ಮಾಡುವ ವಾಹನಕ್ಕೆ ತುಂಬಿಸಿ ಡಂಪಿಂಗ್ ಯಾರ್ಡ್ ಗೆ ಸಾಗಿಸಿದ ಪ್ರಕರಣ ಮಂಗಳೂರಿನಲ್ಲಿ ನಡೆದಿದೆ.
ನಗರದ ಡೊಂಗರಕೇರಿಯಲ್ಲಿ ಈ ಕೃತ್ಯ ನಡೆದಿದ್ದು, ಮನೆಯಲ್ಲಿ ಹಲವು ವರ್ಷಗಳಿಂದ ಸಾಕಿದ್ದ ಹೆಣ್ಣು ಶ್ವಾನವನ್ನು ಮನೆಯವರು ತ್ಯಾಜ್ಯ ವಿಲೇವಾರಿ ವಾಹನಕ್ಕೆ ಬಲಾತ್ಕಾರವಾಗಿ ತುಂಬಿಸಿ ಸಾಗಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕೃತ್ಯ ಶನಿವಾರ ನಡೆದಿದ್ದು, ಸ್ಥಳೀಯರು ಇದನ್ನು ವೀಡಿಯೋ ಮಾಡಿದ್ದಾರೆ. ಜತೆಗೆ ಮನೆಯೊಂದರ ಸಿಸಿಟಿವಿ ಕ್ಯಾಮರಾದಲ್ಲೂ ಈ ದೃಶ್ಯ ಸೆರೆಯಾಗಿದೆ ಎನ್ನಲಾಗಿದೆ.
ಈ ಬಗ್ಗೆ ನಗರದ ಪ್ರಾಣಿಪ್ರಿಯರಿಂದ ತೀವ್ರ ಆಕ್ಷೇಪ, ಅಸಮಾಧಾನ ವ್ಯಕ್ತವಾಗಿರುವ ಬೆನ್ನಲ್ಲೇ ಪಶುಪಾಲನಾ ಇಲಾಖೆಯು ಮಂಗಳೂರು ಮಹಾನಗರ ಪಾಲಿಕೆಗೆ ನೋಟಿಸ್ ನೀಡಿದೆ.
ಡೊಂಗರಕೇರಿಯಿಂದ ಪಚ್ಚನಾಡಿಯ ಡಂಪಿಂಗ್ ಯಾರ್ಡ್ ನಲ್ಲಿ ಬಿಡಲಾಗಿರುವ ಶ್ವಾನ ಸದ್ಯ ನಾಪತ್ತೆಯಾಗಿದೆ ಎನ್ನಲಾಗಿದೆ.
Next Story