ಮಂಗಳೂರು: ಕಾಮಗಾರಿ ವಿಳಂಬದ ಪ್ರಶ್ನೆಗೆ ಅಧಿಕಾರಿಯ ರಾಜೀನಾಮೆ ಉತ್ತರ !
ಗೆಟ್‌ಔಟ್ ಎಂದ ಸಚಿವ ಸುರೇಶ್ ಬೈರತಿ
ಮಂಗಳೂರು: ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್‌ಸಿ)ಯಡಿ ಮಂಗಳೂರು ನಗರಕ್ಕೆ 24X7 ನೀರು ಸರಬರಾಜು ಯೋಜನೆ ಅನುಷ್ಠಾನದ ವಿಳಂಬದ ಬಗ್ಗೆ ಸಚಿವರ ಪ್ರಶ್ನೆಗೆ ಹಿರಿಯ ಅಧಿಕಾರಿ ರಾಜೀನಾಮೆ ನೀಡುತ್ತೇನೆ ಎಂದ ಪ್ರಸಂಗ ನಡೆಯಿತು.
ಇದರಿಂದ ಕುಪಿತರಾದ ಸಚಿವರು ನೀವು ಸಭೆಯಿಂದ ಹೋಗಬಹುದು, ‘ಗೆಟ್‌ಔಟ್’ ಎಂದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಮಾನವೂ ನಡೆಯಿತು.
ನೀರು ಸರಬರಾಜು ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿ ಚರ್ಚೆಯ ಸಂದರ್ಭ ಕೆಯುಐಡಿಎಫ್‌ಸಿಯಲ್ಲಿ ಮುಖ್ಯ ಇಂಜಿನಿಯರ್ ಆಗಿದ್ದು, ನಿವೃತ್ತರಾಗಿ ಮತ್ತೆ ಗುತ್ತಿಗೆಯಡಿ ಅದೇ ಹುದ್ದೆಯಲ್ಲಿರುವ ಜಯರಾಮ್ ಅವರು ಮಾಹಿತಿ ನೀಡಿ ‘ಶೇ. 63ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಅನುಷ್ಠಾನ ಪೂರ್ವದಲ್ಲಿ ಜಲಮೂಲಗಳನ್ನು ಸದೃಢಗೊಲಿಸಬೇಕಾಗಿದೆ ಇದಕ್ಕೆ ಸರಕಾರದಿಂದ ಅನುಮತಿ ಬೇಕಾಗಿದೆ ಎಂದರು.
ಶೇ. 60ರಷ್ಟು ಕಾಮಗಾರಿ ಪೂರ್ಣಗೊಳಿಸಲು ನಾಲ್ಕು ವರ್ಷವಾಗಿದೆ. ಇನ್ನುಳಿದ ಕಾಮಗಾರಿ ನಾಲ್ಕೈದು ತಿಂಗಳಲ್ಲಿ ಪೂರ್ಣಗೊಳಿಸಲು ಸಾಧ್ಯವೇ ಎಂದು ಅಧಿಕಾರಿಯನ್ನು ಸಚಿವರು ಪ್ರಶ್ನಿಸಿದರು. ಆ ಸಂದರ್ಭ ಅಧಿಕಾರಿ ಜಯರಾಮ್ ಅವರು ‘ಹಾಗಾದರೆ ನಾನು ರಾಜೀನಾಮೆ ನೀಡುತ್ತೇನೆ’ ಎಂದಾಗ ಸಚಿವರು ಕೋಪಗೊಂಡರು. ‘ನೀವು ಸಭೆಯಿಂದ ಹೋಗಬಹುದು, ಅಗತ್ಯವಿಲ್ಲ. ಗೆಟ್‌ಔಟ್’ ಎಂದರು.
ಅಧಿಕಾರಿ ಸಭೆಯಿಂದ ಹೊರ ನಡೆಯುತ್ತಿದ್ದಂತೆಯೇ, ಅವರ ಜಾಗಕ್ಕೆ ಹೊಸಬರನ್ನು ನೇಮಿಸಲು ಹಿರಿಯ ಅಧಿಕಾರಿಗಳಿಗೆ ತಿಳಿಸುವಂತೆ ತಮ್ಮ ಸಹಾಯಕರಿಗೆ ಸೂಚಿಸಿದರು. ಇವರಲ್ಲವಾದರೆ ಇನ್ನೊಬ್ಬ ಅಧಿಕಾರಿ ಸಿಗುತ್ತಾರೆ. ಆದರೆ ಜನರಿಗಾಗಿ ಮಾಡುವ ಕೆಲಸ ಪಾರದರ್ಶಕವಾಗಿ ಮಾಡಬೇಕು ಎಂದರು.
ಮಂಗಳೂರು ನಗರ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗೆ ಖರೀದಿಸಲಾದ ವಾಹನಗಳು ಎರಡು ತಿಂಗಳಾದರೂ ಉಪಯೋಗಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಸುರೇಶ ಬೈರತಿ, 3-4 ತಿಂಗಳಿನಿಂದ ವಾಹನಗಳನ್ನು ನಿಂತಲ್ಲೇ ನಿಲ್ಲಿಸಿದರೆ ವಾಹನಗಳು ಕಾರ್ಯನಿರ್ವಹಿಸುವುದಿಲ್ಲ ಎಂದಾಗ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಕೇಂದ್ರ-ರಾಜ್ಯ ಸರಕಾರದ ಸೂಚನೆ ಪ್ರಕಾರ ತ್ಯಾಜ್ಯ ನಿರ್ವಹಣೆಗೆ ವಾಹನಗಳನ್ನು ಪಾಲಿಕೆಯೇ ಖರೀದಿಸಿದೆ. ಬಳಿಕದ ನಿರ್ವಹಣೆ ಏಕ ಟೆಂಡರ್ ಕ್ರಮವನ್ನು ರದ್ದುಪಡಿಸಲಾಗಿದೆ. ಬದಲಾಗಿ ಪಾಲಿಕೆಯಿಂದಲೇ ನಿರ್ವಹಣೆ ಮಾಡಲಾಗುತ್ತದೆ. ಇದಕ್ಕಾಗಿ ವಾರದೊಳಗೆ ಜಿಲ್ಲಾಧಿಕಾರಿಯವರ ಅನುಮೋದನೆಯೊಂದಿಗೆ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು. ಸಚಿವರು ಮಾತನಾಡಿ, ಸ್ವಚ್ಚತೆಯ ಹಿನ್ನೆಲೆಯಲ್ಲಿ ಹಾಸನ, ಮೈಸೂರು ಸೇರಿದಂತೆ, ಮಂಗಳೂರು ನಗರಕ್ಕೂ ಅಗತ್ಯವಿದ್ದಲ್ಲಿ ಬೃಹತ್ ಸ್ವಚ್ಚತಾ ಯಂತ್ರವನ್ನು ನೀಡಲಾಗುವುದು ಎಂದರು.
ಸರಕಾರಿ ಜಾಗ, ರಾಜಕಾಲುವೆ ಒತ್ತುವರಿ ತೆರವಿಗೆ ‘ಸ್ಪೆಷಲ್ ಡ್ರೈವ್’ಗೆ ಸೂಚನೆ
ನಗರದಲ್ಲಿ ಹಲವು ರಾಜಕಾಲುವೆಗಳು, ಸರಕಾರಿ ಜಮೀನು ಒತ್ತುವರಿಯಾಗಿದೆ ಎಂದು ಮನಪಾ ಸದಸ್ಯ ವಿನಯರಾಜ್ ಸಚಿವರ ಗಮನ ಸೆಳೆದರು.
ಇದು ಗಂಭೀರ ವಿಚಾರ. ಸರಕಾರಿ ಜಮೀನು ಅಥವಾ ರಾಜಕಾಲುವೆ ಒತ್ತುವರಿ ಅಪರಾಧವಾಗಿದ್ದು, ಒತ್ತುವರಿ ಆಗಿದ್ದ ಪ್ರಕರಣಗಳಲ್ಲಿ ತಕ್ಷಣ ತೆರವುಗೊಳಿಸಲು ಸ್ಪೆಷಲ್ ಡ್ರೈವ್ ನಡೆಸುವಂತೆ ಪಾಲಿಕೆ ಆಯುಕ್ತರಿಗೆ ಸಚಿವ ಸುರೇಶ್ ಬೈರತಿ ನಿರ್ದೇಶನ ನೀಡಿದರು.