ಮಂಗಳೂರು: ಅಲೋಶಿಯಸ್ ಕಾಲೇಜಿನಲ್ಲಿ 'ಥ್ರೂ ಮೈ ವಿಂಡೋ' ಕಾರ್ಯಕ್ರಮ
ನನ್ನಜ್ಜ ಕಣ್ಣಪ್ಪ ನನ್ನ ಬರವಣಿಗೆಗೆ ಪ್ರಥಮ ಪ್ರೇರಣೆ: ಶ್ಯಾಮಲಾ ಮಾಧವ
ಮಂಗಳೂರು: ಸಾಹಿತ್ಯ ಅಕಾಡೆಮಿ, ನವದೆಹಲಿ ವತಿಯಿಂದ ಕೊಂಕಣಿ ಸಾಹಿತಿಗಳು ಮತ್ತು ಕಲಾವಿದರ ಸಂಘಟನೆಯ ಆಶ್ರಯದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಪ್ಟೆಂಬರ್ 2 ಶನಿವಾರ 'ಥ್ರೂ ಮೈ ವಿಂಡೋ' ಕಾರ್ಯಕ್ರಮ ನಡೆಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಮುಂಬಯಿಯ ಖ್ಯಾತ ಕನ್ನಡ ಲೇಖಕಿ ಶ್ರೀಮತಿ ಶ್ಯಾಮಲಾ ಮಾಧವ ಅವರು, ಕೊಂಕಣಿಯ ಪ್ರಪ್ರಥಮ ಪತ್ರಿಕೆ ದಿರ್ವೆಂ ಸ್ಥಾಪಕ - ವ್ಯವಸ್ಥಾಪಕ ಸರದಾರ ಲೂವಿಸ್ ಕಣ್ಣಪ್ಪ ಅವರ ಬದುಕು - ಬರಹದ ಕುರಿತು ಮಾತನಾಡಿದರು.
"ನಾವೆಲ್ಲರೂ ಕಾನಾಟಿ (ಅರ್ಥಾತ್ ದಪ್ಪ ಕನ್ನಡಕ ಧರಿಸುವ) ಅಜ್ಜ ಎಂದೇ ಕರೆಯುತಿದ್ದ ನನ್ನಜ್ಜ ಲೂವಿಸ್ ಕಣ್ಣಪ್ಪನವರಿಂದಲೇ ನನ್ನ ಬರವಣಿಗೆಗೆ ಮೊದಲ ಪ್ರೇರಣೆ ದೊರೆಯಿತು. ಸ್ವಾತಂತ್ಯ ಪೂರ್ವದಲ್ಲಿ ಮದ್ರಾಸ್ ವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಮ್.ಎ. ಮತ್ತು ಎಲ್. ಟಿ. ಪದವಿ ಪಡೆದಿದ್ದ ಲೂವಿಸ್ ಕಣ್ಣಪ್ಪನವರು ಮಂಗಳೂರು ಹಂಪನಕಟ್ಟೆಯ ಸರಕಾರಿ ಕಾಲೇಜಿನಲ್ಲಿ (ಇಂದಿನ ವಿಶ್ವವಿದ್ಯಾನಿಲಯ ಕಾಲೇಜು) ಪ್ರಾಂಶುಪಾಲರಾಗಿ, ನಂತರ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಗಣಿತ ಹಾಗೂ ಲ್ಯಾಟಿನ್ ಭಾಷೆಯಲ್ಲಿ ಸಂತ ಅಲೋಶಿಯಸ್ ಕಾಲೇಜಿಗೆ ಪ್ರಪ್ರಥಮ ಬಾರಿ ರ್ಯಾಂಕ್ ತಂದುಕೊಟ್ಟ ಲೂವಿಸ್ ಕಣ್ಣಪ್ಪನವರು - ನನ್ನಣ್ಣನಿಗೆ ಗಣಿತ ಮತ್ತು ನನಗೆ ಇಂಗ್ಲಿಶ್ ಸಾಹಿತ್ಯ ಕಲಿಸಿದ್ದರು. ಇಂಗ್ಲಿಷ್ ಸಾಹಿತ್ಯದಲ್ಲಿ ಅವರಿಗೆ ಅಪಾರ ಪಾಂಡಿತ್ಯವಿತ್ತು." ಎಂದು ಶ್ಯಾಮಲಾ ಮಾಧವ ನೆನಪಿಸಿಕೊಂಡರು.
ಲೂವಿಸ್ ಕಣ್ಣಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿ, ನವದೆಹಲಿ ಇದರ ಕೊಂಕಣಿ ಭಾಷಾ ಸಲಹಾ ಸಮಿತಿ ಸದಸ್ಯ ಶ್ರೀ ಎಚ್. ಎಂ. ಪೆರ್ನಾಲ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತ ಕೋರಿ, ಶ್ಯಾಮಲಾ ಮಾಧವ ಅವರನ್ನು ಸಭೆಗೆ ಪರಿಚಯಿಸಿದರು.
ಉಪನ್ಯಾಸದ ನಂತರ ಸಂವಾದ ಕಾರ್ಯಕ್ರಮ ನಡೆಯಿತು. ಸಂವಾದ ಕಾರ್ಯಕ್ರಮದಲ್ಲಿ ಶ್ಯಾಮಲಾ ಮಾಧವ ಸಹೋದರ ಶ್ರೀ ಎನ್. ಜಿ. ಮೋಹನ್ ಸಾಥ್ ನೀಡಿದರು.
ಸಾಹಿತ್ಯ ಅಕಾಡೆಮಿ, ನವ ದೆಹಲಿ ಕಾರ್ಯಕಾರಿ ಸಮಿತಿ ಸದಸ್ಯ, ಕೊಂಕಣಿ ವಿಭಾಗ ಮುಖ್ಯಸ್ಥ, ಕವಿ ಮೆಲ್ವಿನ್ ರೊಡ್ರಿಗಸ್, ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ಸಂಸ್ಥೆಯ ಮುಖ್ಯಸ್ಥ ವಂ| ಡಾ| ಮೆಲ್ವಿನ್ ಪಿಂಟೊ, ವಿಶನ್ ಕೊಂಕಣಿ ಪ್ರವರ್ತಕ, ಅನಿವಾಸಿ ಉದ್ಯಮಿ ಶ್ರೀ ಮೈಕಲ್ ಡಿ’ಸೊಜಾ, CASK, ಮಂಗಳೂರು ಇದರ ಅಧ್ಯಕ್ಷ ಕ್ಯಾಪ್ಟನ್ ವಿನ್ಸೆಂಟ್ ಫಾಯ್ಸ್, ಎಂ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಶ್ರೀ ಅನಿಲ್ ಲೋಬೊ, ಎಡುಕೇರ್ ವಿದ್ಯಾರ್ಥಿ ನಿಧಿಯ ಸಂಚಾಲಕಾರ ಶ್ರೀ ಸ್ಟೀವನ್ ಪಿಂಟೊ ಮತ್ತು ಶ್ರೀ ಓಸ್ವಲ್ಡ್ ರೊಡ್ರಿಗಸ್, ಕೊಂಕಣಿ ಸಾಹಿತಿಗಳು ಮತ್ತು ಕಲಾವಿದರ ಸಂಘಟನೆಯ ಅಧ್ಯಕ್ಷ ರೊನಾಲ್ಡ್ ಸಿಕ್ವೇರಾ, ಕಾರ್ಯದರ್ಶಿ, ಶ್ರೀಮತಿ ಪ್ಲೋರಿನ್ ರೋಚ್, ಕೋಶಾಧಿಕಾರಿ ಶ್ರೀ ರೋಶನ್ ಮಾಡ್ತಾ, ಲೂವಿಸ್ ಕಣ್ಣಪ್ಪ ಕುಟುಂಬದ ಸದಸ್ಯರು ಕಾರ್ಯಕ್ರಮಕ್ಕೆ ಹಾಜರಿದ್ದು ಲೂವಿಸ್ ಕಣ್ಣಪ್ಪರವರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಗೌರವಾರ್ಪಣೆ ಸಲ್ಲಿಸಿದರು.