ಮ್ಯಾರಥಾನ್ ಯೋಗ ಬೋಧನೆ: 2 ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಪ್ರಮಾಣ ಪತ್ರ
ಮಂಗಳೂರು: ಯೇನಪೊಯ ವೈದ್ಯಕೀಯ ಕಾಲೇಜಿನ ಬೆಳ್ಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ 25 ಗಂಟೆಗಳ ನಿರಂತರ ಮ್ಯಾರಥಾನ್ ಯೋಗ ಬೋಧನೆ ಕಾರ್ಯಕ್ರಮಕ್ಕೆ 2 ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನ ಅಧಿಕೃತ ಪ್ರಮಾಣ ಪತ್ರ ಪಡೆದಿದೆ ಎಂದು ಕಾಲೇಜಿನ ಉಪ ಪ್ರಾಂಶುಪಾಲ ಡಾ. ಪ್ರಕಾಶ್ ಸಲ್ಡಾನಾ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲನೇ ವಿಶ್ವ ದಾಖಲೆಯಲ್ಲಿ ಯೋಗ ಗುರು ಕುಲಾಶಲಪ್ಪ ಗೌಡ ಅವರು ನಿರಂತರ 25 ಗಂಟೆಗಳ (ಹಗಲು -ರಾತ್ರಿ) ಯೋಗ ಬೋಧನೆ ಮಾಡಿ ‘ಸುದೀರ್ಘ ಯೋಗ ಬೋಧನೆ’ ಶೀರ್ಷಿಕೆಯಲ್ಲಿ ದಾಖಲೆ ಮಾಡಿದ ಪ್ರಮಾಣ ಪತ್ರ ಪಡೆದಿದ್ದಾರೆ. 25 ಗಂಟೆಗಳ ಅವಧಿ ಯಲ್ಲಿ ತಲಾ ಒಂದೂವರೆ ಗಂಟೆಯಂತೆ 17 ಬ್ಯಾಚುಗಳಲ್ಲಿ ನಡೆದ ತರಬೇತಿಯಲ್ಲಿ ವೈದ್ಯರು ಹಾಗೂ ಆರೋಗ್ಯ ಕ್ಷೇತ್ರದ ವೃತ್ತಿ ಪರರು ಸೇರಿ 2693 ಮಂದಿ ತರಬೇತಿಗೆ ಒಳಪಟ್ಟಿದ್ದು, ‘ಅತೀ ಹೆಚ್ಚು ಆರೋಗ್ಯ ವೃತ್ತಿಪರರು ಯೋಗ ತರಬೇತಿ ಯಲ್ಲಿ ಭಾಗಿ‘ ಎಂಬ ಶೀರ್ಷಿಕೆಯಲ್ಲಿ ಯೇನಪೊಯ ವೈದ್ಯಕೀಯ ಕಾಲೇಜು ಪ್ರಮಾಣಪತ್ರ ಪಡೆದಿದೆ.
ಯೋಗ ಗುರು ಕುಶಾಲಪ್ಪಗೌಡ ಅವರು ಮಾತನಾಡಿ. ಮ್ಯಾರಥಾನ್ ಯೋಗ ತರಬೇತಿ ಸಂದರ್ಭದಲ್ಲಿ ಶಿಬಿರಾರ್ಥಿ ಗಳಿಂದ, ದಾನಿಗಳಿಂದ ಹಾಗೂ ಯೇನಪೊಯ ವಿಶ್ವವಿದ್ಯಾನಿಲಯದಿಂದ ಸಂಗ್ರಹವಾದ ಒಟ್ಟು 2,25, 525 ರೂ. ಮೊತ್ತವನ್ನು ಬೆಳ್ತಂಗಡಿ ತಾಲೂಕಿನ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಮೂಲಕ ಮೊಗ್ರು ಕಿ.ಪ್ರಾ.ಶಾಲೆಯ ಅಭಿವೃದ್ಧಿಗೆ ಹಸ್ತಾಂತರಿಸಲಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಸ್.ಮೂಸಬ್ಬ, ಹಿರಿಯ ಮಾರುಕಟ್ಟೆ ಪ್ರತಿನಿಧಿ ವಿಜಯಾನಂದ ಉಪಸ್ಥಿತರಿದ್ದರು.