ಸ್ಪೀಕರ್, ಶಿಕ್ಷಣ ಸಚಿವರನ್ನು ಭೇಟಿ ಮಾಡಿದ ಮೀಫ್ ನಿಯೋಗ
ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳಿಗೆ ಶೀಘ್ರ ಪರಿಹಾರ :ಮಧು ಬಂಗಾರಪ್ಪ
ಮಂಗಳೂರು: ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು, ಗೌರಾವಾಧ್ಯಕ್ಷ ಉಮರ್ ಟಿ. ಕೆ. ಯವರ ಮುಂದಾಳುತ್ವ ದಲ್ಲಿ ಬೆಂಗಳೂರಿಗೆ ತೆರಳಿ ವಿಧಾನಸಭೆಯ ಸ್ಪೀಕರ್ ಯು. ಟಿ. ಖಾದರ್ ರವರ ಸಮ್ಮುಖದಲ್ಲಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಸಭೆಯಲ್ಲಿ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳು ಮತ್ತು ಬೇಡಿಕೆಗಳ ಮನವಿ ಸಲ್ಲಿಸಿದರು.
ಕೆಲವು ಪ್ರಮುಖ ಸಮಸ್ಯೆಗಳಾದ ಮಾನ್ಯತೆ ನವೀಕರಣ 10 ವರ್ಷಗಳಿಗೆ ವಿಸ್ತರಣೆ ಮಾಡುವುದು, ಅಗ್ನಿಶಾಮಕ ನಿರಾಕ್ಷೇಪಣ ಪತ್ರ , ಕಟ್ಟಡ ಸುರಕ್ಷತೆ ಪ್ರಮಾಣ ಪತ್ರಗಳಿಗೆ 5 ವರ್ಷಗಳ ಅವಧಿ, 2017-18 ಕ್ಕೆ ಮುಂಚಿತವಾಗಿ ನಿರ್ಮಾಣ ಗೊಂಡ ಕಟ್ಟಡಗಳಿಗೆ ಅಗ್ನಿಶಾಮಕ ನಿರಾಕ್ಷೇಪಣಾ ಪತ್ರ, ಲೋಕೋಪಯೋಗಿ ಇಲಾಖೆಯ ಕಟ್ಟಡ ಸುರಕ್ಷತಾ ಪ್ರಮಾಣ ಕಡ್ಡಾಯ ಗೊಳಿಸಿರುವುದನ್ನು ರದ್ದುಪಡಿಸಿ ಕರ್ನಾಟಕ ಉಚ್ಚ ನ್ಯಾಯಲಯ ತೀರ್ಪು ನೀಡಿದ್ದು, ಸದ್ರಿ ತೀರ್ಫನ್ನು ಅನುಷ್ಠಾನ ಗೊಳಿಸುವರೇ ಈವರೆಗೆ ಸರಕಾರ ಸುತ್ತೋಲೆ ಹೊರಡಿಸಲು ಕ್ರಮ ವಹಿಸಬೇಕೆಂದು ಮನವಿ ಯಲ್ಲಿ ವಿನಂತಿಸಲಾಗಿದೆ
ಶಿಕ್ಷಕರಿಗೆ ಕನಿಷ್ಠ ವೇತನ ನೀಡಬೇಕೆಂಬ ಸರಕಾರದ ಆದೇಶ ಅನುದಾನ ರಹಿತ ಶಾಲೆಗಳಿಗೆ ಅನ್ವಯಿಸಬಾರದು ಎಂಬ ಮೆಲ್ಮನವಿಯನ್ನು ಕರ್ನಾಟಕ ಉಚ್ಚನ್ಯಾಯಾಲಯ ಪುರಸ್ಕರಿಸಿ ಆಡಳಿತ ವರ್ಗದ ಪರ ತೀರ್ಫು ನೀಡಿರುತ್ತದೆ. ಹಿಂದಿನ ಸರಕಾರ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ ತಡಯಾಜ್ಞೆ ತಂದಿದೆ. ಸದ್ರಿ ಮೇಲ್ಮನವಿಯನ್ನು ಹಿಂಪಡೆದು ಆರ್ಥಿಕವಾಗಿ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಸಹಾಯ ಮಾಡಬೇಕಾಗಿ ವಿನಂತಿ ಮಾಡಲಾಗಿದೆ.
ಪ್ರೌಢಶಾಲೆಗೆ ಮಾನ್ಯತೆ ನೀಡಲು ಕನಿಷ್ಠ 25 ವಿದ್ಯಾರ್ಥಿಗಳು ಇರಬೇಕೆಂಬ ನಿಯಮವನ್ನು 10 ವಿದ್ಯಾರ್ಥಿಗಳ ಸಂಖ್ಯೆಗೆ ಇಳಿಸಬೇಕು. ಪಿಯುಸಿ ಯಲ್ಲಿ ಹೊಸ ನಿಯಮಾವಳಿಯಂತೆ ಎಲ್ಲಾ ವಿಭಾಗಗಳಲ್ಲಿ ಕನಿಷ್ಠ ವಿದ್ಯಾರ್ಥಿ ಗಳು ಇರಬೇಕು ಎಂಬ ಅಂಶವನ್ನು ಕೈ ಬಿಡುವುದು, ಸರಕಾರ ನೀಡುವ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಖಾಸಗಿ ಶಾಲೆಗಳ ಶಿಕ್ಷಕರನ್ನು ಪ್ರತ್ಯೇಕವಾಗಿ ಪರಿಗಣಿಸಿ ಪ್ರಶಸ್ತಿ ನೀಡಬೇಕು. ಅಲ್ಪಸಂಖ್ಯಾತರಿಗೆ ಉನ್ನತ ಶಿಕ್ಷಣ ಪ್ರವೇಶಾತಿಯಲ್ಲಿ ಬ್ಯಾರಿ ಭಾಷೆಯನ್ನು ಪರಿಗಣಿಸಿ ಪ್ರತ್ಯೇಕ ಕೋಟಾ ನಿಗದಿ ಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ ನೀಟ್, ಸಿಇಟಿ ವಿದ್ಯಾರ್ಥಿಗಳ ದಾಖಲೆಗಳ ಪರಿಶೀಲನೆಗೆ ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ತೆರೆದ ಕೇಂದ್ರವನ್ನು ಮುಚ್ಚಿ ಬೆಂಗಳೂರಿಗೆ ವರ್ಗಾಯಿಸಿದ್ದು ದ. ಕ. ಮತ್ತು ಆಸುಪಾಸಿನ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಯಾಗಿದೆ. ಮುಂದಿನ ವರ್ಷದಿಂದ ಮರುಸ್ಥಾಪಿಸಬೇಕು,ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿಗೆ ಯುಪಿಎ 2 ಸರಕಾರದ ಅವಧಿಯಲ್ಲಿ ರೂಪುಗೊಂಡ ಐಡಿಎಂಐ ಯೋಜನೆ ಮಾದರಿಯಲ್ಲಿ ಕರ್ನಾಟಕದಲ್ಲಿ ಯೋಜನೆ ರೂಪಿಸಿ ಪ್ರತೀವರ್ಷ 200 ಕೋಟಿ ಅನುದಾನ ಮೀಸಲಿರಿಸಬೇಕು,ಹಳೆಯ ಕಟ್ಟಡಗಳ ವಾಣಿಜ್ಯ, ವಾಸ್ತವ್ಯೆತರ ಕನ್ವರ್ಷನ್ ಆದೇಶವನ್ನು ಶೈಕ್ಷಣಿಕ ಉದ್ದೇಶಕ್ಕೆ ಬದಲಾವಣೆ ಮಾಡಲು ತಾಂತ್ರಿಕ ತೊಂದರೆಗಳಿದ್ದು ಈಗಾಗಲೇ ಅಸ್ತಿತ್ವದಲ್ಲಿರುವ ಶಾಲೆಗಳಿಗೆ ಈ ನಿಯಮ ಸಡಿಲಿಸಬೇಕು. ನಗರ ವ್ಯಾ ಪ್ತಿಯಲ್ಲಿ ಶಿಕ್ಷಣ ಸಂಸ್ಥೆ ಕಟ್ಟಡ ಗಳಿಗೆ ತೆರಿಗೆ ವಿನಾಯಿತಿ ಇದ್ದು ಗ್ರಾಮಾoತರ ಪ್ರದೇಶಗಳಲ್ಲಿ ಇದು ಇರುವುದಿಲ್ಲ ಈ ಬಗ್ಗೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಶಿಫಾರಸು ಮಾಡಬೇಕು ಮುಂತಾದ ಬೇಡಿಕೆಗಳನ್ನು ಶಿಕ್ಷಣ ಸಚಿವರ ಮುಂದಿಡಲಾಯಿತು.
ಈ ಸಂದರ್ಭದಲ್ಲಿ ಸಮಸ್ಯೆಗಳನ್ನು ಆಲಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಸಿಂಗ್, ಆಪ್ತಕಾರ್ಯದರ್ಶಿ ಕಿಶೋರ್ ಕುಮಾರ್ ಮೊದಲಾದ ಅಧಿಕಾರಿಗಳ ಸಭೆ ನಡೆಸಿ ಶೀಘ್ರ ಪರಿಹಾರ ಒದಗಿಸುವಂತೆ ಸೂಚನೆ ನೀಡಿದ್ದು ಸಮಗ್ರವಾಗಿ ಅಧ್ಯಯನ ವರದಿ ತಯಾರಿಸಿ ಯಾವುದೇ ವಿಳಂಬ ಮಾಡದೆ ಕ್ರಮಕೈಗೊಳ್ಳುವಂತೆ ಶಿಕ್ಷಣ ಸಚಿವರಾದ ತಿಳಿಸಿರುತ್ತಾರೆ ಎಂದು ಮೀಫ್ ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿಯೋಗದಲ್ಲಿ ಮೀಫ್ ಉಪಾಧ್ಯಕ್ಷ ಮುಸ್ತಫ ಸುಳ್ಯ, ಪ್ರಧಾನ ಕಾರ್ಯದರ್ಶಿ ರಿಯಾಜ್ ಟ್ಯಾಲೆಂಟ್, ಖಜಾoಚಿ ನಿಸಾರ್, ಕೋಸ್ಥಲ್ ಒಕ್ಕೂಟದ ಪದಾಧಿಕಾರಿಗಳಾದ ನಝೀರ್ ಅಹ್ಮದ್, ಶಹಾಮ್ ಮೂಡಬಿದ್ರಿ, ಮುಸ್ತಫ ಸಅದಿ ಮೂಳೂರರು, ಸಿರಾಜ್ ಅಂಜುಮಾನ್, ಹೈದರ್ ಮನ್ ಶರ್ ಬೆಳ್ತಂಗಡಿ, ಬಿ. ಎ. ಇಕ್ಬಾಲ್, ರಜಾಕ್ ಇನ್ ಫ್ಯಾಷನ್, ಪರ್ವೇಜ್ ತಲಪಾಡಿ, ಶಾರಿಕ್ ಕುಂಜತ್ತೂರು, ಹೈದರ್ ಅನುಗ್ರಹ, ಬಶೀರ್ ಕುಂಬ್ರ, ನಝರ್ ಏಸ್ ಫೌಂಡೇಶನ್ ಮಂಗಳೂರು, ಮಯ್ಯದ್ದಿ, ಅನ್ವರ್ ಮುಳೂರು, ಪುತ್ತೂರು ಕಮ್ಯುನಿಟಿ ಸೆಂಟರ್ ನ ಹನೀಫ್ ಮೊದಲಾದವರು ಉಪಸ್ಥಿತರಿದ್ದರು.