ಮೀಫ್ ಎಸೆಸೆಲ್ಸಿ ವಿದ್ಯಾರ್ಥಿ ಕಾರ್ಯಾಗಾರದ ಜಿಲ್ಲಾ ಮಟ್ಟದ ಸರಣಿ ಕಾರ್ಯಕ್ರಮಕ್ಕೆ ಚಾಲನೆ
ಮಂಗಳೂರು, ಡಿ.2: ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ(ಮೀಫ್)ದ ಆಶ್ರಯದಲ್ಲಿ ಬಬ್ಬುಕಟ್ಟೆಯ ಹಿರಾ ಎಜುಕೇಶನಲ್ ಇನ್ ಸ್ಟಿಟ್ಯೂಶನ್ಸ್ ಸಹಯೋಗದೊಂದಿಗೆ ಪ್ರಸಕ್ತ ಸಾಲಿನ ದ.ಕ. ಮತ್ತು ಉಡುಪಿ ಜಿಲ್ಲೆಗಳ ಮೀಫ್ ವಿದ್ಯಾ ಸಂಸ್ಥೆಗಳ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿವಿಧ ಪ್ರದೇಶಗಳಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳುತ್ತಿದೆ. ಈ ಸರಣಿ ಕಾರ್ಯಕ್ರಮದ ಜಿಲ್ಲಾ ಮಟ್ಟದ ಉದ್ಘಾಟನೆಯು ಇಂದು ಬಬ್ಬುಕಟ್ಟೆಯ ಹಿರಾ ವಿದ್ಯಾಸಂಸ್ಥೆಯಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಸಬ್ಬ ಪಿ. ಬ್ಯಾರಿ ಮಾತನಾಡಿ, ಈ ಬಾರಿಯ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಕೇಂದ್ರಗಳಲ್ಲಿ 'ಪರೀಕ್ಷಾ ಪೂರ್ವ ಸಿದ್ಧತಾ ಶಿಬಿರ' ಹಾಗೂ 10 ಕೇಂದ್ರಗಳಲ್ಲಿ ವಿಷಯವಾರು
ತರಬೇತಿಗಳನ್ನು ಹಮ್ಮಿಕೊಂಡಿದ್ದೇವೆ. ಇದರಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರಾಷ್ಟ್ರೀಯ ತರಬೇತುದಾರರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ಟಿ.ದಯಾನಂದ ರಾಮಚಂದ್ರ ನಾಯಕ್ ಮಾತನಾಡಿ, ಈ ಬಾರಿ ಎಸೆಸೆಲ್ಸಿ ಫಲಿತಾಂಶವನ್ನು ಉತ್ತಮಪಡಿಸಲು ಮೀಫ್ ಹಮ್ಮಿಕೊಂಡಿರುವ ಕಾರ್ಯಾಗಾರಗಳು ಶ್ಲಾಘನಾರ್ಹ ಎಂದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್, ಹಿರಾ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಎಚ್.ಮೆಹಮೂದ್, ಸಂಚಾಲಕರಾದ ಅಬ್ದುರ್ರಹ್ಮಾನ್ ಮತ್ತು ರಹ್ಮತುಲ್ಲಾ, ಆಡಳಿತಾಧಿಕಾರಿ ಝಾಕಿರ್ ಹುಸೈನ್, ಮುಖ್ಯ ಶಿಕ್ಷಕಿ ಮಂಜುಳಾ ಭಾಗವಹಿಸಿದ್ದರು.
ಮೀಫ್ ಉಪಾಧ್ಯಕ್ಷ ಕೆ.ಎಂ.ಮುಸ್ತಫ, ಪ್ರಧಾನ ಕಾರ್ಯದರ್ಶಿ ರಿಯಾಝ್ ಕಣ್ಣೂರು, ಕಾರ್ಯದರ್ಶಿಗಳಾದ ಶಾರಿಕ್ ಕುಂಜತ್ತಬೈಲ್, ಅನ್ಸಾರ್ ಗೂಡಿನಬಳಿ, ಅಬ್ದುಲ್ ರಝಾಕ್ ಗೋಳ್ತಮಜಲು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಾ ಶಿಕ್ಷಕಿ ಶಿಮಾತ್ ಫಾತಿಮಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಆಯಿಶ ತಸ್ನೀಮ್ ವಂದಿಸಿದರು.
ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ಒಂಭತ್ತು ಶಾಲೆಗಳ 330 ವಿದ್ಯಾರ್ಥಿಗಳು, 20 ಶಿಕ್ಷಕರು ಭಾಗವಹಿಸಿದ್ದರು.
ಹಿರಾ ಶಿಕ್ಷಣ ಸಂಸ್ಥೆಯು ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿತ್ತು.