ಮೀಲಾದ್ - ಚೌತಿಯಲ್ಲಿ ಮೆರೆದ ಕರಾವಳಿಯ ಸೌಹಾರ್ದತೆ
ಪರಸ್ಪರ ಹೊಂದಾಣಿಕೆ, ಪ್ರೀತಿ ವಿಶ್ವಾಸದಿಂದ ಎಲ್ಲರಿಗೂ ಖುಷಿ
ಬೆಂಗಳೂರು: ಶಿವಮೊಗ್ಗದಲ್ಲಿ ಮೀಲಾದ್ ಮೆರವಣಿಗೆ ಸಂದರ್ಭ ಕಲ್ಲು ತೂರಾಟ ಆಗಿರುವ ವರದಿಗಳು ಚರ್ಚೆಯಲ್ಲಿವೆ. ಆದರೆ ಆಗಾಗ ಕೋಮು ಸಂಬಂಧಿತ ಗಲಾಟೆಗಳಿಗೆ ಸುದ್ದಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಈ ಬಾರಿ ಹಲವು ಕಡೆ ಪರಸ್ಪರ ಸೌಹಾರ್ದದಿಂದ ಗಣೇಶ ಚತುರ್ಥಿ ಹಾಗು ಮೀಲಾದುನ್ನಬಿ ಆಚರಿಸಿದ್ದಾರೆ. ಈ ವರ್ಷದ ಗಣೇಶ ಚತುರ್ಥಿ ಹಾಗೂ ಮೀಲಾದುನ್ನಬಿ ಒಂದೇ ವಾರದಲ್ಲಿ ಬಂದ ಹಿನ್ನೆಲೆಯಲ್ಲಿ ಪರಸ್ಪರ ಹೊಂದಾಣಿಕೆ ಹಾಗು ಸೌಹಾರ್ದಯುತವಾಗಿ ಈ ಎರಡೂ ವಿಶೇಷ ದಿನಗಳನ್ನು ಆಚರಿಸಲಾಗಿದೆ.
ಮೀಲಾದುನ್ನಬಿ ಆಚರಣೆಯ ಅಲಂಕಾರಕ್ಕಾಗಿ ಜಿಲ್ಲೆಯ ಕಡಬ ತಾಲ್ಲೂಕಿನ ಕಳಾರದ ಮುಹಮ್ಮದೀಯ ಜುಮಾ ಮಸೀದಿ ವತಿಯಿಂದ ನೆಡಲಾಗಿದ್ದ ಕಂಬಗಳನ್ನು ಗಣೇಶ ಹಬ್ಬದ ಮೆರವಣಿಗೆಗೆ ಬಳಸಲು ನೀಡಿದ್ದು ಅಲ್ಲಿನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಪೈಗಂಬರ್ ಜನ್ಮದಿನ ಪ್ರಯುಕ್ತ ಕಳಾರದ ಮುಹಮ್ಮದೀಯ ಜುಮಾ ಮಸೀದಿಯ ಯುವಕರು ಅಲಂಕಾರಕ್ಕಾಗಿ ರಸ್ತೆಯ ಇಕ್ಕೆಲಗಳಲ್ಲಿ ಕಂಬಗಳನ್ನು ಅಳವಡಿಸಿದ್ದರು. ಅದೇ ವಾರದಲ್ಲಿ ಒಂದು ದಿನ ಮೊದಲು ಕಡಬದ ದುರ್ಗಾಂಬಿಕಾ ದೇವ ಸ್ಥಾನದ 50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಗಣೇಶ ವಿಸರ್ಜನೆ ಕಾರ್ಯಕ್ರಮವಿತ್ತು. ಗಣೇಶ್ ವಿಸರ್ಜನೆ ಮೆರವಣಿಗೆಯ ಅಲಂಕಾರಕ್ಕಾಗಿ ತಾವು ಮೀಲಾದ್ ಮೆರವಣಿಗೆಗೆ ಕಟ್ಟಿದ್ದ ಕಂಬಗಳನ್ನು ಮಸೀದಿಯ ಯುವ ಕರು ನೀಡಿ ಸಹೋದರತ್ವ ಹಾಗು ಪ್ರೀತಿಯ ಸಂದೇಶ ಸಾರಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ದುರ್ಗಾಂಬಿಕಾ ದೇವಸ್ಥಾನದ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಗಿರೀಶ್ ಎ.ಪಿ, ಸಮಾಜದಲ್ಲಿ ಸೌಹಾರ್ದತೆ ಕ್ಷೀಣಿಸುತ್ತಿರುವಾಗ, ವಾಟ್ಸಪ್ ಯುನಿವರ್ಸಿಟಿಗಳಲ್ಲಿ ಉಲ್ಬಣಗೊಳ್ಳುವ ನೂರಾರು ಸುಳ್ಳು ಮಾಹಿತಿಗ ಳನ್ನಾಧರಿಸಿ ಧರ್ಮಗಳ ನಡುವೆ ಕಂದಕಗಳನ್ನು ಎತ್ತಿಕಟ್ಟುತ್ತಿರುವ ಜನರ ಮಧ್ಯೆ, ಜಾತ್ರೆಗಳಲ್ಲಿ ಬೇರೆ ಧರ್ಮಗಳಿಗೆ ವ್ಯಾಪಾರ ನೀಡಬಾರದೆಂಬ ಬ್ಯಾನರ್ ಹಾಕಿಕೊಂಡು ದ್ವೇಷ ಹರಡುತ್ತಿರುವ ಈ ಕಾಲಘಟ್ಟದಲ್ಲಿ ಹಿಂದೂ-ಮುಸಲ್ಮಾನರ ನಡುವಿನ ಪರಸ್ಪರ ಪ್ರೀತಿ ವಿಶ್ವಾಸದ ಈ ರೀತಿಯ ಸಂಬಂಧಗಳು,ಹೊಂದಾಣಿಕೆಗಳು ನಮ್ಮ ಸಮಾಜಕ್ಕೆ ಬಹಳ ಒಳ್ಳೆ ಯದು. ಇದರಿಂದ ಎಲ್ಲರಿಗೂ ಒಳಿತಾಗಲಿದೆ. ಪ್ರಸ್ತುತ ದಿನಗಳಲ್ಲಿ ಸೌಹಾರ್ದತೆಯ ಮನೋಭಾವ ಅನಿವಾರ್ಯ ಎಂದರು.
ಸಿಹಿ ಹಂಚಿದ 68ನೆ ವಯಸ್ಸಿನ ಅನ್ನಿ ಮೂಲ್ಯ
ಬೆಳ್ತಂಗಡಿ ತಾಲ್ಲೂಕಿನ ಮದಡ್ಕದ ಲಾಡಿ ಎಂಬಲ್ಲಿ ಮೀಲಾದುನ್ನಬಿಯ ಮೆರವಣಿಗೆ ಸಂದರ್ಭ ಸ್ಥಳೀಯರಾದ 68ನೇ ವಯಸ್ಸಿನ ಅನ್ನಿ ಮೂಲ್ಯ ಅವರು ಎಲ್ಲರಿಗೂ ಸಿಹಿ ಹಂಚಿದರು. "ನಮ್ಮ ಕುಟುಂಬದಿಂದ 3 ವರ್ಷಗಳಿಂದ ಸಿಹಿ ತಿಂಡಿ ಹಂಚುತ್ತಿದ್ದೇವೆ. ನಮಗೆ ಎಲ್ಲಾ ಧರ್ಮದ ದೇವರುಗಳ ಮೇಲಿನ ನಂಬಿಕೆ ಇದೆ. ನನ್ನ ತಂದೆಯವರಿಗೂ ಮತ್ತು ನನಗೂ ಗೌರವ ಇದೆ. ನಾನು ಮಸೀದಿಗೆ ಹರಕೆಯನ್ನು ಇಟ್ಟಿದ್ದೆ ಅದನ್ನು ಈ ಮೂಲಕ ಅದನ್ನು ತೀರಿಸಿದ್ದೇನೆ. ನಾವು ಈ ಕಾರ್ಯವನ್ನು ಖುಷಿಯಿಂದಲ್ಲೇ ನಿರ್ವಹಿಸುತ್ತಿದ್ದೇವೆ" ಎಂದು ಅನ್ನಿ ಮೂಲ್ಯ ಅವರ ಪುತ್ರಿ ಪುಷ್ಪಾ ಹೇಳುತ್ತಾರೆ.
ಮೀಲಾದುನ್ನಬಿಗೆ ಸಿಹಿ ಹಂಚಿದ ಜನಾರ್ದನ, ಶಶಿಕಿರಣ್
ಬಂಟ್ವಾಳದ ಬಡಗಬೆಳ್ಳೂರು ಗ್ರಾಮದಲ್ಲಿ ಜನಾರ್ಧನ ಹಾಗೂ ಶಶಿಕಿರಣ್ ಪೂಜಾರಿಯವರು , ಹಲವು ವರ್ಷಗಳಿಂದ ಮೀಲಾದುನ್ನಬಿಯಂದು ಸಿಹಿ ತಿಂಡಿ ಹಂಚಿಕೊಂಡು ಬರುತ್ತಿರುವುದು ಸಂಪ್ರದಾಯವಾಗಿದೆ. ಈ ವರ್ಷವೂ ಅವರು ಸಿಹಿ ಹಂಚಿದ್ದಾರೆ. "ಇಲ್ಲಿ ನಾವೆಲ್ಲರೂ ಸಹೋದರತ್ವ, ಬಾಂಧವ್ಯದಿಂದ ಮನಃಸಾಕ್ಷಿಯಿಂದ ಈ ಕಾರ್ಯ ನಡೆಸಿದ್ದೇವೆ. ಶಾಂತಿ ಕದಡುವವರ ಕಡೆ ಯಾರೂ ಗಮನ ಕೊಡದೆ ಮನುಷ್ಯರೊಂದಿಗೆ ಪ್ರೀತಿಯನ್ನು ಹಂಚಬೇಕಾಗಿದೆ. ಈ ರೀತಿ ಬೇರೆ ಗ್ರಾಮಗಳಲ್ಲೂ ನಡೆಯಲಿ ಎಂಬುವುದು ನಮ್ಮ ಆಭಿಲಾಷೆ" ಎಂದರು.
ಕೋಲ್ತಮಜಲು ಮುಹಿಯುದ್ದೀನ್ ಜುಮಾ ಮಸೀದಿಯ ಗೌರವಾಧ್ಯಕ್ಷ ಮುಹಮ್ಮದ್ ರಫೀಕ್ ಮಾತನಾಡಿ, "ಹಿಂದೂ-ಮುಸ್ಲಿಮರೊಂದಿಗೆ ಆತ್ಮೀಯತೆ ಇನ್ನಷ್ಟು ಬಲಿಷ್ಠಗೊಳ್ಳಲು ಇಂತಹ ಮಾನವೀಯ ಕಾರ್ಯಗಳು ಎಲ್ಲಾ ಊರಿನಲ್ಲೂ ಮುಂದುವರೆಯಬೇಕು. ನಮ್ಮ ಆತ್ಮೀಯ ಹಿಂದೂ ಸ್ನೇಹಿತರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇವೆ ಹಾಗೂ ಇದಕ್ಕೆ ಊರಿನವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ" ಎಂದರು.
ಮಾನವೀಯತೆ ಮೆರೆದ ಯುವಕರು
ಉಡುಪಿ ಜಿಲ್ಲೆಯ ಮೂಳೂರು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸೆ.28ರಂದು ಮಧ್ಯಾಹ್ನ ವೇಳೆ ನಡೆದ ಅಪಘಾತದಲ್ಲಿ ಮಣಿಕಂಠ ಎಂಬವರು ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಅಲ್ಲೇ ಸಮೀಪ ಮೀಲಾದುನ್ನಬಿ ರ‍್ಯಾಲಿಯಲ್ಲಿ ಸಾಗುತ್ತಿದ್ದ ಉಚ್ಚಿಲದ ಯುವಕರು ಕೂಡಲೇ ಮೇಲಕ್ಕೆತ್ತಿ ಉಪಚರಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು.
ಶ್ರೀ ರಾಮ ಸೇವಾಟ್ರಸ್ಟ್ ನಿಂದ `ಮೀಲಾದ್' ಸಿಹಿ ವಿತರಣೆ
ಬಂಟ್ವಾಳದ ಸಾಲೆತ್ತೂರಿನಲ್ಲಿ ಪೈಗಂಬರ್ ಜನ್ಮದಿನದ ಅಂಗವಾಗಿ ಕಾಡುಮಠ ಶ್ರೀ ರಾಮ ಸೇವಾ ಟ್ರಸ್ಟ್ನಿಂದ ಸಾಲೆತ್ತೂರಿನ ಬದ್ರಿಯಾ ಜುಮಾ ಮಸೀದಿಯ ಮೀಲಾದ್ ರ‍್ಯಾಲಿಯಲ್ಲಿ ಬಂದವರಿಗೆ ಸಿಹಿ ತಿಂಡಿ ವಿತರಿಸಲಾಯಿತು. ಈ ಕುರಿತು ಕಾಡುಮಠ ಶ್ರೀ ರಾಮ ಸೇವಾಟ್ರಸ್ಟ್ ನ ಸಂಚಾಲಕ ಶರತ್ ಶೆಟ್ಟಿಗಾರ್ ಮಾತನಾಡಿ " ನಮ್ಮದು 30 ಮಂದಿ ಸದಸ್ಯರು ಇರುವ ಸಂಘಟನೆಯಾಗಿದ್ದು, ಹಿಂದೂ ಹಾಗೂ ಇನ್ನಿತರ ಎಲ್ಲಾ ಧರ್ಮಗಳಿಗೆ ನೆರವು ನೀಡುವ ಉದ್ದೇಶದಿಂದ ಕಾರ್ಯನಿರ್ವಹಿಸಲು ಉದ್ದೇಶಿಸಿದ್ದೇವೆ. ಹಾಗೆಯೇ ಪೈಗಂಬರ ಅವರ ಜನ್ಮದಿನದಂದು ಸಿಹಿ ತಿಂಡಿ ವಿತರಣೆ ಮಾಡಿ ದ್ದೇವೆ, ನಮ್ಮ ಸಂಘಟನೆಯಿಂದ ಇದೇ ಮೊದಲ ಬಾರಿಗೆ ನಡೆದಿದೆ, ಹೀಗೆಯೇ ಮುಂದುವರಿಸುವ ಉದ್ದೇಶ ನಮ್ಮಲ್ಲಿದೆ" ಎಂದರು.
ಕೋಮುಸೂಕ್ಷ್ಮ ಪ್ರದೇಶವಾದ ಕರಾವಳಿಯ ನಾನಾ ಕಡೆಗಳಲ್ಲಿ ಇಂತಹ ಹಲವಾರು ಮನಸ್ಸಿಗೆ ಮುದ ನೀಡುವ ಘಟನೆ ಗಳು ನಡೆದಿರುವುದು ವರದಿಯಾಗಿದೆ. ಕರಾವಳಿಗರ ಕೋಮು ಸೌರ್ಹಾದತೆಗೆ ಸಾಕ್ಷಿಯಾಗಿರುವ ಇಂತಹ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.