ಮೂಡುಬಿದಿರೆ| ಪುತ್ತಿಗೆ ಕನ್ವೆನ್ಶನ್ ಸೆಂಟರ್ ಶುಭಾರಂಭ
ಮೂಡುಬಿದಿರೆ: ಪುತ್ತಿಗೆ ಕಡಲಕೆರೆ ನೂರಾನಿ ಮಸೀದಿಯ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಪುತ್ತಿಗೆ ಕನ್ವೆನ್ಶನ್ ಸೆಂಟರ್ ಗುರುವಾರ ಉದ್ಘಾಟನೆಗೊಂಡಿತು.
ಕನ್ವೆನ್ಶನ್ ಸೆಂಟರ್‌ನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈ ದೇಶದಲ್ಲಿ ಜನಿಸಿರುವ ನಾವೆಲ್ಲರೂ ಭಾಗ್ಯವಂತರು. ಭಾರತ ಪ್ರಪಂಚದಲ್ಲೇ ಆದರ್ಶ ಪ್ರಾಯವಾದ ದೇಶ. ಅತೀ ಹೆಚ್ಚಿನ ಜನ ಸಂಖ್ಯೆ ಹೊಂದಿದ್ದದ್ದರೂ ಇದು ಒಂದು ಮತ, ಜಾತಿ, ಧರ್ಮ, ಭಾಷೆಗೆ ಸೀಮಿತವಾಗಿಲ್ಲ. ಮೂಡುಬಿದಿರೆ ಸೌಹಾರ್ದದ ನಾಡು. ಅದನ್ನು ಇದೇ ರೀತಿ ಮುಂದುವರಿಸಬೇಕಿದೆ ಎಂದರು.
ನಮ್ಮ ಪೂರ್ವಜರು ಮಾಡಿರುವ ಜಾತಿ, ಮತ, ಭಾಷೆ ಇವುಗಳನ್ನೆಲ್ಲಾ ಆಳವಾಗಿ ಅರ್ಥೈಸಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಸಂಸ್ಕಾರ ಇದ್ದರೆ ಮಾತ್ರ ಮನುಷ್ಯನಾಗಿ ಬದುಕಲು ಸಾಧ್ಯ ಎಂದ ಅವರು, ತನ್ನ ಜಾತಿ ಧರ್ಮದ ಬಗ್ಗೆ ಪೂರ್ಣವಾಗಿ ಅರಿತು ಇನ್ನೊಂದು ಜಾತಿ, ಧರ್ಮವನ್ನು ಸಹೋದರೆ ಭಾವನೆಯೊಂದಿಗೆ ಗೌರವಪೂರ್ಣವಾಗಿ ಕಾಣುವುದೇ ಸೌಹಾರ್ದ ಎಂದು ಅವರು ನುಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅಲಂಗಾರು ಹೋಲಿ ರೋಸಿ ಚರ್ಚ್ ನ ರೆ. ಫಾ.ಮೆಲ್ವಿನ್ ನೊರೊನ್ಹಾ ಮಾತನಾಡಿ, ಮೂಡುಬಿದಿರೆ ಇಂದಿಗೂ ಸೌಹಾರ್ದ ತುಂಬಿರುವ ಸ್ಥಳ. ಇಲ್ಲಿನ ಸೌಹಾರ್ದಕ್ಕೆ ಇಲ್ಲಿನ ನೂರಾನಿ ಮಸೀದಿ ಜಾತಿ ಧರ್ಮಗಳೆಂಬ ಕಟ್ಟಲೆಗಳನ್ನು ಬದಿಗಿಟ್ಟು ಪರಸ್ಪರ ಎಲ್ಲರೂ ಒಗ್ಗೂಡಿಕೊಂಡು ಮಾಡುತ್ತಿರುವ ಕಾರ್ಯಕ್ರಮಗಳೇ ಸೌಹಾರ್ದದ ಪ್ರತೀಕ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತಿಗೆ ನೂರಾನಿ ಮಸೀದಿಯ ಅಧ್ಯಕ್ಷ ಅಬುಲ್ ಅಲಾ ಪುತ್ತಿಗೆ, ಸೌಹಾರ್ದದ ನೈಜ ಚಿತ್ರಣ ಪುತ್ತಿಗೆ ಕನ್ವೆನ್ಶನ್ ಸೆಂಟರ್ ಉದ್ಘಾಟನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಯುತ್ತದೆ. ಇದು ನಮ್ಮ ಮೂಡುಬಿದಿರೆಯ ವೈಶಿಷ್ಟ್ಯ ಎಂದರು.
ಇದೇ ಸಂದರ್ಭ ನೂರಾನಿ ಮಸೀದಿಯ ವತಿಯಿಂದ ಅನಾರೋಗ್ಯಪೀಡಿತ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಸರ್ವಧರ್ಮೀಯ 10ಕ್ಕೂ ಅಧಿಕ ಕುಟುಂಬಗಳಿಗೆ ಆರ್ಥಿಕ ಸಹಾಯ ವಿತರಿಸಲಾಯಿತು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದಿರುವ ಅಮ್ರಿನ್, ಆರೋಗ್ಯ ಕ್ಷೇತ್ರದ ಸಾಧಕಿ ವಿಮಲಾ ಕೆ., ಶೈಕ್ಷಣಿಕ ಕ್ಷೇತ್ರದ ಸಾಧಕಿಯರಾದ ರಿಝಾ ಶೇಕ್ ರಿಯಾಝ್, ಆಯಿಶಾ ಅಮ್ನಾ ಶೇಕ್, ರಿಯಾ ರಫೀಕ್, ಉದ್ಯಮ ಕ್ಷೇತದ ಮಹಿಳಾ ಸಾಧಕಿ ನಝ್ಮಾರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಅವರಿಗೆ ಪುತ್ತಿಗೆ ಕನ್ವೆನ್ಶನ್ ಸೆಂಟರ್ ಮತ್ತು ನೂರಾನಿ ವೆಲ್ಫೇರ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಪುತ್ತಿಗೆ ನೂರಾನಿ ಮಸೀದಿಯ ಉಪಾಧ್ಯಕ್ಷ ಶೇಕ್ ಬಶೀರ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಖಯ್ಯೂಮ್, ಪುತ್ತಿಗೆ ಗ್ರಾಪಂ ಸದಸ್ಯ ಮುಹಮ್ಮದ್ ಶರೀಫ್, ಮಹಿಳಾ ಉದ್ಯಮಿ ಸಾರಾ ಅಬ್ಬಾಸ್ ಮತ್ತಿತರು ಉಪಸ್ಥಿತರಿದ್ದರು.
ಬುಕ್ಕಿಂಗ್ ಆರಂಭ: ಶೇ.20 ರಿಯಾಯಿತಿ
ಪುತ್ತಿಗೆ ಕಡಲಕೆರೆ ನೂರಾನಿ ಮಸೀದಿಯ ವತಿಯಿಂದ ನೂತನವಾಗಿ ನಿರ್ಮಾಣಗೊಂಡು ಗುರುವಾರ ಲೋಕಾರ್ಪಣೆಗೊಂದ ಪುತ್ತಿಗೆ ಕನ್ವೆನ್ಶನ್ ಸೆಂಟರ್ ಸರ್ವ ಧರ್ಮೀಯರಿಗೆ ಮದುವೆ ಸಹಿತ ಶುಭ ಸಮಾರಂಭಗಳಿಗೆ ಲಭ್ಯವಿದೆ. ಡಿಸೆಂಬರ್ ಅಂತ್ಯದ ಒಳಗಾಗಿ ಬುಕ್ ಮಾಡುವ ಎಲ್ಲಾ ಕಾರ್ಯಕ್ರಮಗಳಿಗೆ ಶೇ.20ರಿಯಾಯಿತಿ ನೀಡಲಾಗುವುದು. ಈ ಸೆಂಟರ್‌ನಿಂದ ಬರುವ ಆದಾಯವನ್ನು ಬಡವರ ಅಭಿವೃದ್ಧಿ, ಅನಾರೋಗ್ಯ ಪೀಡಿತರಿಗೆ ಸಹಾಯ ಹಾಗೂ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ವ್ಯಯಿಸಲು ತೀರ್ಮಾನಿಸಲಾಗಿದೆ ಎಂದು ನೂರಾನಿ ಮಸೀದಿಯ ಅಧ್ಯಕ್ಷ ಅಬುಲ್ ಅಲಾ ಪುತ್ತಿಗೆ ಕನ್ವೆನ್ಶನ್ ಸೆಂಟರ್ ಲೋಕಾರ್ಪಣೆ ಸಂದರ್ಭ ಘೋಷಿಸಿದರು.