ಮುಡಿಪು : ಆಗಸ್ಟ್ 11ರಂದು ಮಜ್ಲಿಸ್ ವತಿಯಿಂದ ಕೃತಕ ಕಾಲು ಜೋಡಣೆ ಶಿಬಿರ
ಮಂಗಳೂರು, ಆ.8: ಮಜ್ಲಿಸ್ ಎಜುಕೇಶನ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕಾಲುಗಳನ್ನು ಕಳೆದುಕೊಂಡಿರುವ 100 ಮಂದಿಗೆ ಕೃತಕ ಕಾಲು ಜೋಡಣಾ ಶಿಬಿರ ಆ. 11ರಂದು ಮುಡಿಪುವಿನಲ್ಲಿ ಆಯೋಜಿಸಲಾಗಿದೆ.
ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ ಕಾರ್ಯಕ್ರಮದ ಸ್ವಾಗತ ಸಮಿತಿಯ ಉಪ ಸಂಚಾಲಕ ಸಯ್ಯಿದ್ ಮಿಅ್’ರಾಜ್ ತಂಙಳ್, ಅಂದು ಮಧ್ಯಾಹ್ನ 2.30ಕ್ಕೆ ಮುಡಿಪು ಮಜ್ಲಿಸ್ ಎಜು ಪಾರ್ಕ್ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪಡೆದಿರುವ ಡಾ. ವೈ. ಅಬ್ದುಲ್ಲ ಕುಂಞಿ, ಡಾ.ಕಣಚೂರು ಮೋನು ಹಾಜಿ, ಡಾ. ನಿಝಾರ್ ಅಹ್ಮದ್ ಬೆಂಗಳೂರು ಅವರಿಗೆ ಸನ್ಮಾನ, ಸಸಿ ವಿತರಣೆ ಹಾಗೂ ಆಧ್ಯಾತ್ಮಿಕ ಸಂಗಮ ನಡೆಯಲಿದೆ.
ಸಂಸ್ಥೆಯ ಅಧ್ಯಕ್ಷ ಶರಫುಸ್ಸಾದಾತ್ ಸಯ್ಯಿದ್ ಆದೂರು ತಂಙಳ್ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್, ಉದ್ಯಮಿ ತುಂಬೆ ಮೊಯ್ದಿನ್, ಡಾ.ಯು.ಟಿ. ಇಫ್ತಿಕಾರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಾಸಿರ್ ಅಹ್ಮದ್ ಭಾಗವಹಿಸಲಿದ್ದಾರೆ. ಸಂಜೆ 7 ಗಂಟೆಗೆ ಸಖಾಫಿಯ್ಯ ರಾತೀಬ್ ಆಧ್ಯಾತ್ಮಿಕ ಸಂಗಮದಲ್ಲಿ ವಾಗ್ಮಿ ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ, ಅಡ್ವಕೇಟ್ ಶಾಫಿ ನಿಝಾಮಿ ಉಪನ್ಯಾಸ ನೀಡಲಿದ್ದಾರೆ ಎಂದು ಅವರು ಹೇಳಿದರು.
ಮಜ್ಲಿಸ್ ಈಗಾಗಲೇ ಕರ್ನಾಟಕ, ಕೇರಳ, ಮಹಾರಾಷ್ಟ್ರಗಳಲ್ಲಿ 23 ಸಂಸ್ಥೆಗಳನ್ನು ಹೊಂದಿದ್ದು, 1600ಕ್ಕೂ ಅಧಿಕ ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ತಂದೆಯನ್ನು ಕಳೆದುಕೊಂಡ ಅನಾಥ ಮಕ್ಕಳನ್ನು ಅವರವರ ಮನೆಯಲ್ಲಿಯೇ ಆಹಾರ, ವಿದ್ಯಾಭ್ಯಾಸ ಖರ್ಚು ನೀಡಿ ಪೋಷಿಸುವ ಆರ್ಫನ್ ಕೇರ್ ಯೋಜನೆಯಡಿ ಸಾವಿರಾರು ಮಕ್ಕಳು ಕೆಜಿಯಿಂದ ಪಿಜಿ ವರೆಗೆ ಶಿಕ್ಷಣ ಪಡೆದಿದ್ದಾರೆ. ಇವರಲ್ಲಿ ನಾಲ್ಕು ಮಕ್ಕಳು ವೈದ್ಯರಾಗಿದ್ದು, ಹಲವರು ಇಂಜಿನಿಯರ್ಗಳಾಗಿ ಹೊರರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಜನಕಲ್ಯಾಣ ಚಟುವಟಿಕೆಯಡಿ ಮಜ್ಲಿಸ್ನಿಂದ ಐದು ಮನೆಗಳನ್ನು ಪೂರ್ಣವಾಗಿ ಹಾಗೂ 25 ಮನೆಗಳನ್ನು ಭಾಗಶ ನಿರ್ಮಾಣ ಮಾಡಿ ನೀಡಲಾಗಿದೆ. ದೀರ್ಘಕಾಲೀನ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಧನಸಹಾಯ, ನಿರ್ಗತಿಕರಿಗೆ ಆಹಾರ ಸಾಮಗ್ರಿಗಳ ಕಿಟ್, ನೀರು ಇಲ್ಲದ ಕುಟುಂಬಗಳಿಗೆ ನೀರಿನ ವ್ಯವಸ್ಥೆಯನ್ನು ಒದಗಿಸಲಾಗುತ್ತಿದೆ ಎಂದು ಮಿಅ್’ರಾಜ್ ತಂಙಳ್ ವಿವರ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಎಸ್ವೈಎಸ್ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್, ಸ್ವಾಗತ ಸಮಿತಿಯ ಚೇರ್ಮ್ಯಾನ್ ಎಸ್.ಕೆ. ಅಬ್ದುಲ್ ಖಾದಿರ್ ಹಾಜಿ, ಸ್ವಾಗತ ಸಮಿತಿಯ ಸಂಚಾಲಕ ಬಶೀರ್ ಮುಡಿಪು ಉಪಸ್ಥಿತರಿದ್ದರು.
ಧರ್ಮ ಬೇಧವಿಲ್ಲದೆ ಕೃತಕ ಕಾಲು ಜೋಡಣೆಗೆ ನೆರವು
ಮಜ್ಲಿಸ್ ವತಿಯಿಂದ ಈ ಬಾರಿ 100 ಮಂದಿಗೆ ಕೃತಕ ಕಾಲು ಜೋಡಣೆಗೆ ನಿರ್ಧರಿಸಲಾಗಿದ್ದು, ಜಾತಿ ಧರ್ಮದ ಬೇಧವಿಲ್ಲದೆ ಈ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಕೃತ ಕಾಲು ಜೋಡಣೆಗೆ ಬೇಡಿಕೆ ಸಲ್ಲಿಸಿರುವವರಲ್ಲಿ ಶೇ. 60ರಷ್ಟು ಮುಸ್ಲಿಂಮೇತರರು ಸೇರಿದ್ದಾರೆ ಎಂದು ಮುಡಿಪು ಎಜು ಪಾರ್ಕ್ ನ ನಿರ್ದೇಶಕರಾದ ಜಲಾಲುದ್ದೀನ್ ತಂಙಳ್ ತಿಳಿಸಿದರು.