ಮೂಡುಬಿದಿರೆ: ಪೊಲೀಸ್ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರು ವಶಕ್ಕೆ
ಮೂಡುಬಿದಿರೆ: ಪೊಲೀಸ್ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಜಾತಿ ನಿಂದನೆ ಗೈದು ಅವಾಚ್ಯವಾಗಿ ನಿಂದಿಸಿದ ಆರೋಪದಲ್ಲಿ ಮೂವರನ್ನು ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಮೂಡುಬಿದಿರೆ ಒಂಟಿಕಟ್ಟೆ ನಿವಾಸಿಗಳಾದ ಮೂಡುಬಿದಿರೆ ಮುಡಾ ಸದಸ್ಯ ಪ್ರಕಾಶ್, ಅಬ್ದುಲ್ ಸತ್ತಾರ್ ಮತ್ತು ವಿಜೇತ್ ಎಂದು ತಿಳಿದು ಬಂದಿದೆ.
ಮೂಡಬಿದಿರೆ ಪೊಲೀಸ್ ಠಾಣೆಯ ಪಿಎಸ್ ಐ ಕೃಷ್ಣಪ್ಪ ಎಂಬವರು ಬಸ್ ನಿಲ್ದಾಣದ ಬಳಿಯ ರಸ್ತೆಯಲ್ಲಿ ವಾಹನಗಳ ಹೈಮಾಸ್ಟ್ ದೀಪಗಳ ಪರಿಶೀಲನೆ ನಡೆಸುತ್ತಿದ್ದ ವೇಳೆ ಹೆಲ್ಮೆಟ್ ಧರಿಸದೇ ತ್ರಿಪಲ್ ರೈಡ್‌ನಲ್ಲಿ ದ್ವಿಚಕ್ರ ಚಲಾಯಿಸುತ್ತಿದ್ದ ಸವಾರರಿಗೆ ಪಿಎಸ್‌ಐ ಬೈದಿದ್ದಾರೆ ಎಂದು ಆರೋಪಿಸಿ ಮೂಡುಬಿದಿರೆ ಮುಡಾ ಸದಸ್ಯ ಪ್ರಕಾಶ್, ಅಬ್ದುಲ್ ಸತ್ತಾರ್ ಮತ್ತು ವಿಜೇತ್ ಎಂಬವರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಈ ವೇಳೆ ಮೂವರೂ ಪಿಎಸ್‌ಐ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೆ, ಅವರ ಜಾತಿ ನಿಂದನೆ ನಡೆಸಿ ಅವಾಚ್ಯವಾಗಿ ಬೈದು ನಿಂದಿಸಿದ್ದಾರೆ ಎಂದು ಪಿಎಸ್‌ಐ ಕೃಷ್ಣಪ್ಪ ಅವರು ಮೂದಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಮಧ್ಯೆ ಪೊಲೀಸ್ ಅಧಿಕಾರಿಯನ್ನು ಬೈದಾಡಿಕೊಳ್ಳುತ್ತಿದ್ದ ವೀಡಿಯೋ ಮಾಡಿಕೊಂಡಿದ್ದ ಆರೋಪಿಗಳು, ತಮ್ಮ ತಪ್ಪನ್ನು ಮುಚ್ಚಿಡುವ ಸಲುವಾಗಿ ವೀಡಿಯೊವನ್ನು ನಾಗರೀಕರು ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, "ಮೂಡುಬಿದಿರೆಯ ಪೋಲಿಸ್ ಅಧಿಕಾರಿಯ ಲಂಚ ಸ್ವೀಕಾರಕ್ಕೆ ಬೇಸತ್ತ ಸಾರ್ವಜನಿಕರು" ಎಂಬ ತಲೆ ಬರಹ ನೀಡಿ ಪೊಲೀಸ್ ಅಧಿಕಾರಿಯ ಗೌರವಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದೂ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಆರೋಪಿಗಳಿಗೆ ತಲಾ 1 ಲಕ್ಷ ರೂ. ಮೊತ್ತದ ಬಾಂಡ್ ಪಡೆದುಕೊಂಡು ಬಿಡುಗಡೆ ಮಾಡಲಾಗಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.