ನಾರ್ಶ: ಈ.ಡಿ. ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯ ಮನೆ ದರೋಡೆ ಪ್ರಕರಣ: ಪೊಲೀಸ್ ಅಧಿಕಾರಿಯೊಬ್ಬನ ಬಂಧನ
ಬಂಧಿತರ ಸಂಖ್ಯೆ 4ಕ್ಕೆ ಏರಿಕೆ

ವಿಟ್ಲ: ಕೊಳ್ನಾಡು ಗ್ರಾಮದ ನಾರ್ಶದಲ್ಲಿ ಉದ್ಯಮಿ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿಯವರ ಮನೆಗೆ ನಕಲಿ ಈ.ಡಿ. ಅಧಿಕಾರಿಗಳ ಸೋಗಿನಲ್ಲಿ ಬಂದು ಲಕ್ಷಾಂತರ ರೂ. ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾಗಿ ಕೇರಳ ರಾಜ್ಯದ ಪೊಲೀಸ್ ಅಧಿಕಾರಿಯೊಬ್ಬನನ್ನು ವಿಟ್ಲ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಕೇರಳದ ಕೊಡುಂಗಲ್ಲೂರು ಎಎಸ್ಸೈ ಇರಿಂಗಾಲಕುಡ ನಿವಾಸಿ ಶಫೀರ್ ಬಾಬು(50) ಬಂಧಿತ ಆರೋಪಿ ಎನ್ನಲಾಗಿದೆ. ಈತನ ಬಂಧನದೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಜನವರಿ 3ರಂದು ರಾತ್ರಿ 8 ಗಂಟೆ ಸುಮಾರಿಗೆ ಉದ್ಯಮಿ ಎಂ.ಸುಲೈಮಾನ್ ಹಾಜಿಯವರ ಮನೆಗೆ ಈ.ಡಿ. ಹೆಸರಿನಲ್ಲಿ ತಮಿಳುನಾಡು ನೋಂದಾಯಿತ ಕಾರಿನಲ್ಲಿ ಆಗಮಿಸಿದ ಆರು ಮಂದಿಯ ತಂಡ ಮನೆಯನ್ನೆಲ್ಲ ಜಾಲಾಡಿತ್ತು. ಬಳಿಕ ಮನೆಯಲ್ಲಿದ್ದ 45 ಲಕ್ಷ ರೂ. ನಗದು, 3 ಮೊಬೈಲು ಪೋನ್ ಗಳೊಂದಿಗೆ ತಂಡ ಪರಾರಿಯಾಗಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಟ್ಲ ಠಾಣಾ ಪೊಲೀಸರು ಈಗಾಗಲೇ ಕೇರಳದ ಕೊಲ್ಲಂ ನಿವಾಸಿಗಳಾದ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಪ್ರಕರಣದಲ್ಲಿ ಆರೋಪಿ ಎನ್ನಲಾದ ಕೇರಳದ ಕೊಡುಂಗಲ್ಲೂರು ಎಎಸ್ಸೈ ಶಫೀರ್ ಬಾಬು(50)ನನ್ನು ಬಂಧಿಸಲಾಗಿದೆ.