ಮಂಗಳೂರಿನ ವಿವಿಧೆಡೆ ರಾಷ್ಟ್ರೀಯ ಸಾಂಸ್ಕೃತಿಕ ಜಾಥಾ, ವೈವಿಧ್ಯಮಯ ಕಾರ್ಯಕ್ರಮಗಳು
ಮಂಗಳೂರು: ಅಗರ್ಭ ಶ್ರೀಮಂತರಾಗಿದ್ದ ಕಾರ್ನಾಡು ಸದಾಶಿವ ರಾವ್ ಕೈಯಲ್ಲಿ ಅರ್ಧ ಮಂಗಳೂರೇ ಇತ್ತು. ಆದರೆ ಅವೆಲ್ಲವನ್ನು ದಾನ ಮಾಡಿ ಕೈಯಲ್ಲಿ ಚಿಕ್ಕಾಸು ಇಲ್ಲದೆ ನಿಧನರಾದ ಕೊಡುಗೈ ದಾನಿಯಾಗಿದ್ದರು ಎಂದು ಗಾಂಧಿ ವಿಚಾರ ವೇದಿಕೆ ದಕ್ಷಿಣ ಕನ್ನಡ ಇದರ ಸಂಚಾಲಕರಾದ ಅರವಿಂದ ಚೊಕ್ಕಾಡಿ ಹೇಳಿದ್ದಾರೆ.
ʼರಾಷ್ಟ್ರೀಯ ಸಾಂಸ್ಕೃತಿಕ ಜಾಥಾ - ಕರ್ನಾಟಕʼ ಇದರ ಅಂಗವಾಗಿ ಶನಿವಾರ ಟಾಗೋರ್ ಪಾರ್ಕ್‌ನಲ್ಲಿ ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ನಡೆದ ದೇಶಭಕ್ತ ಕಾರ್ನಾಡು ಸದಾಶಿವ ರಾವ್ ನೆನಪು ಮತ್ತು ಸಂವಾದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಕಾರ್ನಾಡು ಅವರ ತ್ಯಾಗದ ಧೋರಣೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಕಾರ್ನಾಡು ಮತ್ತು ಕುದ್ಮುಲ್ ಒಂದೇ ವ್ಯಕ್ತಿತ್ವದವರು. ಇಬ್ಬರೂ ಮಹಾ ದಾನಿಗಳು. ಯಾರಿಗಾದರೂ ಏನನ್ನಾದರೂ ಕೊಡುವಾಗ ಕಾರ್ನಾಡು ಯಾವುದೇ ಷರತ್ತು ಹಾಕಲಿಲ್ಲ. ಈ ಕಾರಣದಿಂದಾಗಿ ಅವರು ಕೊಟ್ಟ ದಾನಗಳು ಇವತ್ತು ನಮ್ಮ ಕಣ್ಣಿಗೆ ಕಾಣಿಸುತ್ತಿಲ್ಲ. ಕುದ್ಮುಲ್ ರಂಗರಾವ್ ಎಲ್ಲವನ್ನು ವ್ಯವಸ್ಥಿತ ಯೋಜನೆಯೊಂದಿಗೆ ನೀಡಿದ್ದರು ಎಂದು ಬಣ್ಣಿಸಿದರು.
ಕಾರ್ನಾಡು ಅಸ್ತಿತ್ವವನ್ನು ಆನೇಕ ನೆಲೆಗಳಲ್ಲಿ ಗುರುತಿಸಬೇಕಾಗಿದೆ. ಗಾಂಧೀಜಿ ದ.ಆಫ್ರಿಕಾದಿಂದ ಬಂದ ತಕ್ಷಣ ಭಾರತಕ್ಕೆ ನಿಮ್ಮ ಸೇವೆಯ ಅಗತ್ಯವಿದೆ. ನಿಮ್ಮ ಸತ್ಯಾಗ್ರಹದ ಹಿಂದೆ ಆಧ್ಯಾತ್ಮಿಕ ಶಕ್ತಿ ಇದೆ. ಈ ಕಾರಣದಿಂದಾಗಿ ನಿಮ್ಮ ಹೋರಾಟ ಅರ್ಥ ಪೂರ್ಣವಾಗುತ್ತದೆ ಎಂದು ಮೊದಲು ಪತ್ರಬರೆದವರು ಕಾರ್ನಾಡು. ಮಂಗಳೂರು ಭಾಗಕ್ಕೆ ಕಾಂಗ್ರೆಸ್‌ನ್ನು ಮೊದಲು ತಂದವರು, ದಕ್ಷಿಣ ಭಾರತದಿಂದ ಮೊದಲ ಬಾರಿ ಸತ್ಯಾಗ್ರಹದ ನಿರ್ಣಯಕ್ಕೆ ಸಹಿ ಹಾಕಿದವರು ಕಾರ್ನಾಡು ಸದಾಶಿವ ರಾಯರು ಎಂದರು.
ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಎ.ಸದಾನಂದ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಾಂಸ್ಕೃತಿಕ ಜಾಥಾಧ ರಾಷ್ಟ್ರೀಯ ಮುಂದಾಳು ಹಿರಿಯ ಚಿಂತಕ ಪ್ರಸನ್ನ ಅವರು ಕಾರ್ನಾಡು ಸದಾಶಿವ ರಾವ್ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಇವತ್ತು ಕಾಯಕ ಮತ್ತು ಸತ್ಯವನ್ನು ಬೇರೆ ಮಾಡಿದ್ದೇವೆ. ಆ ಒಡಕಿನ ನಡುವೆ ಯಂತ್ರವನ್ನು ತಂತ್ರಜ್ಞಾನವನ್ನು ಕೂರಿಸಿದ್ದೇವೆ ಎಂದರು.
ಹಿಂದೆ ಎಲ್ಲ ಉತ್ಪಾದನೆಯಲ್ಲಿ ದೈಹಿಕ ಶ್ರಮ ಬಳಕೆಯಾಗುತಿತ್ತು. ಕಾಯಕಕ್ಕೂ ಕೈಲಾಸಕ್ಕೂ ಸಂಪರ್ಕ ಇತ್ತು. ಆದರೆ ಈಗ ಅದು ಇಲ್ಲ. ಹೆಚ್ಚಿನ ಕೈಗಾರಿಕೆಗಳಲ್ಲಿ ಶೇ 95ರಷ್ಟು ಸ್ವಯಂಚಾಲಿತ ಯಂತ್ರ ಬಳಕೆಯಾಗುತ್ತಿದೆ. ಆದರೆ ಈಗ ನಾವು ಕಾಯಕವನ್ನು ಕೊಲ್ಲುತ್ತೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಕುದ್ಮುಲ್ ರಂಗರಾವ್ , ಸದಾಶಿವ ರಾವ್ ಕಮಲಾದೇವಿ ಚಟ್ಟೋಪಾಧ್ಯಾಯ ಆಚಾರದಲ್ಲಿ ಪ್ರಾತ: ಸ್ಮರಣೀಯರು. ಅವರ ಆಶಯವನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ವಿಜಯಪುರದ ಅಕ್ಕಮಾ ದೇವಿ ಮಹಿಳಾ ವಿವಿ ವಿಶ್ರಾಂತ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ, ಪ್ರತಿಷ್ಠಾನದ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಧಾನ ಪರಿಷತ್ ನ ಮಾಜಿ ಸದಸ್ಯ ಅಣ್ಣಾ ವಿನಯ್ ಚಂದ್ರ, ವೃತ್ತ ಅಪರ ಜಿಲ್ಲಾಧಿಕಾರಿ ಕೆ.ಎ.ಪ್ರಭಾಕರ ಶರ್ಮ, ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯ, ಪ್ರೊ. ಶಿವರಾಮ ಶೆಟ್ಟಿ, ಪ್ರೊ ಝೇವಿಯರ್ ಡಿ ಸೋಜ ಮತ್ತಿತರರು ಪಾಲ್ಗೊಂಡಿದ್ದರು.
ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಇಸ್ಮಾಯೀಲ್ ಸ್ವಾಗತಿಸಿ ವಂದಿಸಿದರು. ಕಲ್ಲೂರು ನಾಗೇಶ ಕಾರ್ಯಕ್ರಮ ನಿರೂಪಿಸಿದರು.
ಇಂದಿನ ಜಾಥಾದಲ್ಲಿ ಏನಿತ್ತು ?
ರಾಷ್ಟ್ರೀಯ ಸಾಂಸ್ಕೃತಿಕ ಜಾಥಾಕ್ಕೆ ಶನಿವಾರ ಬೆಳಗ್ಗೆ ಬಾಬುಗುಡ್ಡೆಯ ಕುದ್ಮುಲ್ ರಂಗರಾವ್ ಸಮಾಧಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಡಾ.ಕೇಶವ ಧರಣಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಡಾ.ವೇಣುಗೋಪಾಲ ಶೆಟ್ಟಿ ನುಡಿನಮನ ಸಲ್ಲಿಸಿದರು.
ಬಲ್ಮಠದ ಬಾಸೆಲ್ ಮಿಷನ್ ಆವರಣದಲ್ಲಿರುವ ಕನ್ನಡ ನಿಘಂಟಿನ ಕರ್ತೃ ರೆ.ಫರ್ಡಿನಾಂಡ್ ಕಿಟ್ಟೆಲ್ ಹಾಗೂ ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಚಾರದ ಸಂಪಾದಕ ರೆ.ಹರ್ಮನ್ ಮೊಗ್ಲಿಂಗ್ ಅವರಿಗೆ ಡಾ.ಎಚ್‌ಎಂ ವಾಟ್ಸನ್ ನೇತೃತ್ವದಲ್ಲಿ ಗೌರವ ಸಲ್ಲಿಸಲಾಯಿತು.
ಕಾರ್ನಾಡ್ ಸದಾಶಿವ ರಾವ್, ಪತ್ನಿ ಶಾಂತಾಬಾಯಿ ಮತ್ತು ಕಮಲಾದೇವಿಯವರ ತಾಯಿ ಗಿರಿಜಾ ಬಾಯಿ ಅವರು ಸ್ಥಾಪಿಸಿರುವ ಮಹಿಳಾ ಸಭಾದಲ್ಲಿ ಆರ್ಟ್ ಕೆನರಾ ಟ್ರಸ್ಟ್ ಸದಸ್ಯರಿಂದ ರಾಷ್ಟ್ರೀಯ ಸ್ಮಾರಕ ರಕ್ಷಣೆಗೆ ಚಿತ್ರ ರಚನೆ ನಡೆಯಿತು. ಮಹಿಳಾ ಸಭಾದ ವಿಜಯ ಲಕ್ಷ್ಮೀ ಅವರು ಕಮಲಾದೇವಿಗೆ ನುಡಿನಮನ ಸಲ್ಲಿಸಿದರು.
ರಥಬೀದಿಯ ದೇವಳ ವೃತ್ತದಲ್ಲಿ ಸ್ವಾತಂತ್ರ್ಯ ಚಳವಳಿ, ರಾಜಕಾರಣ, ಶಿಕ್ಷಣ ಬ್ಯಾಂಕಿಂಗ್, ಹೀಗೆ ಮಂಗಳೂರು ಹಾಗೂ ದೇಶದ ನಿರ್ಮಾಣಕ್ಕೆ ಮಹತ್ವರ ಕೊಡುಗೆಗಳನ್ನು ನೀಡಿದ ಸಾರಸ್ವತ ನಾಯಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಮಂಗಳೂರಿನ ಧಕ್ಕೆಯಲ್ಲಿ ಮೀನುಗಾರರೊಂದಿಗೆ ಸಂವಾದ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಖ್ಯಾತ ಗಾಯಕ ಇಮ್ತಿಯಾಝ್ ಸುಲ್ತಾನರಿಂದ ಭಕ್ತಿ ಸಂಗೀತ ಕಾರ್ಯಕ್ರಮ, ಸುಲ್ತಾನ್ ಬತ್ತೇರಿಯಲ್ಲಿ ಕರಾವಳಿ ಲೇಖಕಿಯರ ಹಾಗೂ ವಾಚಕೀಯರ ಸಂಘದಿಂದ ಉಳ್ಳಾಲದ ರಾಣಿ ಅಬ್ಬಕ್ಕನಿಗೆ ಡಾ.ಶೈಲಾಯು ಅವರಿಂದ ನುಡಿನಮನ, ಹುಸೈನ್ ಕಾಟಿಪಳ್ಳ -ಬ್ಯಾರಿ ಪಾಟ್, ಫೆಲ್ಸಿ ಲೋಬೊರಿಂದ ಕೊಂಕಣಿ ಕಮಿತೆ ಮತ್ತು ರತ್ನಾವತಿ ಬೈಕಾಡಿ ಅವರಿಂದ ತುಳುಗಾನ ಕಾರ್ಯಕ್ರಮ ನಡೆಯಿತು.
ಸಂಜೆ ತಣ್ಣೀರು ಬಾವಿ ಕಡಲತೀರದಲ್ಲಿ ಹುಸೈನ್ ಕಾಟಿಪಳ್ಳ ಮತ್ತು ಖಾಲಿದ್ ಉಜಿರೆ ನೇತೃತ್ವದ ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟ ಹಾಗೂ ಖ್ಯಾತ ಗಾಯಕ ಮುಹಮ್ಮದ್ ಇಕ್ಬಾಲ್ ಕಾಟಿಪಳ್ಳ ಸಹಯೋಗದಲ್ಲಿ ಸೌಹಾರ್ದ ಗಾನ ನಡೆಯಿತು.
ಯಾವ ಸಂಘಟನೆಗಳ ಹೆಸರನ್ನು ಬಳಸದೆ ಎಲ್ಲರೂ ಒಟ್ಟಾಗಿ ನಡೆಸಿದ ಅಭೂತಪೂರ್ವ ಕಾರ್ಯಕ್ರಮವು ಬೆಳಗ್ಗೆ 9 ರಿಂದ ರಾತ್ರಿ 8 ರ ವರೆಗೆ ಮಂಗಳೂರಿನಾದ್ಯಂತ ನಡೆಯಿತು.