77ನೇ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್: ಕರ್ನಾಟಕಕ್ಕೆ ಮೊದಲ ದಿನ 6 ಚಿನ್ನ, 3 ಬೆಳ್ಳಿಯ ಪದಕ
ಮಹಿಳೆಯರ 400 ಮೀಟರ್ ಫ್ರೀಸ್ಟೈಲ್‌ಲ್ಲಿ 13 ವರ್ಷಗಳ ದಾಖಲೆ ಮುರಿದ ಹಶಿಕಾ ರಾಮಚಂದ್ರ
ಮಂಗಳೂರು: ನಗರದ ಎಮ್ಮೆಕೆರೆಯ ಅಂತರ್‌ರಾಷ್ಟ್ರೀಯ ಈಜುಕೊಳದಲ್ಲಿ ಆರಂಭಗೊಂಡ 77ನೇ ಸೀನಿಯರ್ ನ್ಯಾಷನಲ್ ಈಜು ಚಾಂಪಿಯನ್‌ಶಿಪ್‌ನ ಮೊದಲ ದಿನ 10 ಸ್ಪರ್ಧೆಗಳು ನಡೆದಿದ್ದು, ಕರ್ನಾಟಕ 6 ಚಿನ್ನ , 3 ಬೆಳ್ಳಿ ಬಾಚಿಕೊಂಡಿದೆ.
ಮಹಿಳೆಯರ 400 ಮೀಟರ್ ಫ್ರೀಸ್ಟೈಲ್‌ಲ್ಲಿ ಕರ್ನಾಟಕದ ಹಶಿಕಾ ರಾಮಚಂದ್ರ ಚಿನ್ನ ಪಡೆದರು. ಅಲ್ಲದೆ ಹದಿಮೂರು ವರ್ಷಗಳ ಹಿಂದಿನ ದಾಖಲೆ ಮುರಿಯುವ ಮೂಲಕ ರಾಷ್ಟ್ರೀಯ ಅವರು ದಾಖಲೆ ನಿರ್ಮಿಸಿದರು.
ಹಶಿಕಾ ರಾಮಚಂದ್ರ ಅವರು 4:24.70 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದರು. ಈ ಹಿಂದೆ ರಾಂಚಿಯ ರಿಚಾ ಮಿಶ್ರಾ (4:25.76) ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಹಶಿಕಾ ಮುರಿದರು. ತೆಲಂಗಾಣದ ವೃತ್ತಿ ಅಗರ್ವಾಲ್ (4:25.09) ಎರಡನೇ ಸ್ಥಾನ ಪಡೆದರು.
ಪುರುಷರ 400 ಮೀ ಫ್ರೀಸ್ಟೈಲ್‌ನಲ್ಲಿ ಕರ್ನಾಟಕದ ಅನೀಶ್ ಎಸ್ ಗೌಡ (3:56.59) ಅಗ್ರಸ್ಥಾನದೊಂದಿಗೆ ಚಿನ್ನ, ತನ್ನದೆ ರಾಜ್ಯದ ಸಹ ಆಟಗಾರ ದರ್ಶನ್ ಎಸ್ (4:01.39 ) ಬೆಳ್ಳಿ ಪಡೆದರು.
ಪುರುಷರ 200 ಮೀಟರ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ತಮಿಳುನಾಡಿನ ಧನುಷ್ ಸುರೇಶ್ (2:18.85 )ಚಿನ್ನ ಮತ್ತು ಕರ್ನಾಟಕದ ಮಣಿಕಂಠ ಎಲ್ (2:20.66)ಬೆಳ್ಳಿ ಪಡೆದರು.
ಮಹಿಳೆಯರ 200 ಮೀ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಕರ್ನಾಟಕದ ತಾನಿಯಾ ಷಡಾಕ್ಷರಿ (2:40.54 ) ಅಗ್ರ ಸಾನದೊಂದಿಗೆ ಚಿನ್ನ, ಮಹಾರಾಷ್ಟ್ರದ ಜ್ಯೋತಿ ಬಾಜಿರಾವ್ ಪಾಟಿ ( 2:42.01) ಬೆಳ್ಳಿ ಹಂಚಿಕೊಂಡರು.
ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ಕರ್ನಾಟಕದ ಮಣಿ (56.15 ) ಚಿನ್ನ , ಮತ್ತು ಮಹಾರಾಷ್ಟ್ರದ ರಿಷಬ್ ಅನುಪಮ್ ದಾಸ್ (57.28 ) ಬೆಳ್ಳಿಯೊಂದಿಗೆ ಈವೆಂಟ್ ಪೂರ್ಣಗೊಳಿಸಿದರು.
ಮಹಿಳೆಯರ 100 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ಬಂಗಾಳದ ಸೌಬ್ರಿಟಿ ಮೊಂಡಲ್ (1:05.51) ಅವರು ಒಡಿಶಾ ಪ್ರತ್ಯಾಸಾ ರಾಯ್(1:05.82 ) ಅವರನ್ನು ಹಿಂದಿಕ್ಕಿ ಚಿನ್ನ ಪಡೆದರು. ಒಡಿಶಾ ಪ್ರತ್ಯಾಸಾ ರಾಯ್ ಬೆಳ್ಳಿ ಪಡೆದರು.
ತಮಿಳುನಾಡಿನ ಬಿ ಬೆನೆಡಿಕ್ಟನ್ ರೋಹಿತ್ (24.22 )ಪುರುಷರ 50 ಮೀಟರ್ ಬಟರ್‌ಫ್ಲೈನಲ್ಲಿ ಮೊದಲ ಸ್ಥಾದೊಂದಿಗೆ ಚಿನ್ನ ಪಡೆದರು, ಆದರೆ ಮಹಾರಾಷ್ಟ್ರದ ಮಿಹಿರ್ ಅಂಬ್ರೆ 24.37 ರೊಂದಿಗೆ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪಡೆದರು.
ಮಹಿಳೆಯರ 50 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಬಿಹಾರದ ಮಹಿ ಸ್ವೇತ್‌ರಾಜ್ (28.33) ಮೊದಲ ಸ್ಥಾನದೊಂದಿಗೆ ಚಿನ್ನ ಮತ್ತು ಕರ್ನಾಟಕದ ಮಾನವಿ ವರ್ಮಾ (28.67 ) ಎರಡನೇ ಸ್ಥಾನದೊಂದಿಗೆ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.
ಕರ್ನಾಟಕದ ಶಿರಿನ್, ಶಾಲಿನಿ ಆರ್ ದೀಕ್ಷಿತ್, ನೈಶಾ ಮತ್ತು ಹಶಿಕಾ ರಾಮಚಂದ್ರ ಅವರು ಮಹಿಳೆಯರ 4 * 200 ಮೀ ಫ್ರೀಸ್ಟೈಲ್ ರಿಲೇಯಲ್ಲಿ 8:54.85 ಟೈಮಿಂಗ್‌ನೊಂದಿಗೆ ಅಗ್ರ ಸ್ಥಾನದೊಂದಿಗೆ ಚಿನ್ನ ಪಡೆದರು. ಮಹಾರಾಷ್ಟ್ರದ ದೀಪ್ತಿ ರಘುನಾಥ್ ತಿಲಕ್, ದೀಕ್ಷಾ ಸಂದೀಪ್ ಯಾದವ್, ದಕ್ಷಜಾ ಡೇ ಉಪ್ರೇತಿ ಮತ್ತು ಅದಿತಿ ಸತೀಶ್ ಹೆಗ್ಡೆ (9:01.15 ) ಎರಡನೇ ಸ್ಥಾನ ಪಡೆದರು.
ಕರ್ನಾಟಕದ ಅನೀಶ್ ಎಸ್ ಗೌಡ, ದರ್ಶನ್ ಎಸ್, ಕಾರ್ತಿಕೇಯನ್ ನಾಯರ್ ಮತ್ತು ಧಕ್ಷನ್ ಎಸ್ ಅವರು ಪುರುಷರ 4 * 200 ಮೀ ಫ್ರೀಸ್ಟೈಲ್ ರಿಲೇಯಲ್ಲಿ 7:42.90 ಸಮಯದೊಂದಿಗೆ ಚಿನ್ನ ಗೆದ್ದರು ಮತ್ತು ಆರ್‌ಎಸ್‌ಪಿಬಿಯ ಸಾನು ದೇಬನಾಥ್, ದೇವಾಂಶ್ ಮಹೇಶ್‌ಕುಮಾರ್ ಪರ್ಮಾರ್, ಎಂ ವಸುರಾಮ್ ಮತ್ತು ಸತ್ಯ ಸಾಯಿ ಕೃಷ್ಣನ್ ಎಂ (7:47.64) ದ್ವಿತೀಯ ಸ್ಥಾನ ಪಡೆದರು.
ಎಮ್ಮೆಕೆರೆಯ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿರುವ ಅಂತರ್‌ರಾಷ್ಟ್ರೀಯ ಈಜುಕೊಳದಲ್ಲಿ ಆರಮಭಗೊಂಡ ನಾಲ್ಕು ದಿನಗಳ ಈಜು ಚಾಂಪಿಯನ್‌ಶಿಪ್‌ಗೆ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಕರ್ನಾಟಕ ಈಜು ಸಂಸ್ಥೆಯ (ಕೆಎಸ್‌ಎ) ಅಧ್ಯಕ್ಷ ಗೊಪಾಲ್ ಬಿ.ಹೊಸೂರು ಮುಖ್ಯ ಅತಿಥಿಗಳಾಗಿದ್ದರು.
ಮನಪಾ ಸದಸ್ಯರಾದ ದಿವಾಕರ, ರೇವತಿ ಶ್ಯಾಮಸುಂದರ್, ಭಾರತೀಯ ಈಜು ಒಕ್ಕೂಟ (ಎಸ್‌ಎಫ್‌ಯ) ಹಿರಿಯ ಉಪಾಧ್ಯಕ್ಷ ವೀರೇಂದ್ರ ನಾನಾವತಿ, ಕೆಎಸ್‌ಎ ಗೌರವ ಕಾರ್ಯದರ್ಶಿ ಎಂ.ಸತೀಶ್ ಕುಮಾರ್, ದಕ್ಷಿಣ ಕನ್ನಡ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ. ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಪಾಲಿಕೆಯ ಉಪಯುಕ್ತ (ಕಂದಾಯ) ಗಿರೀಶ್ ನಂದನ್, ಮಂಗಳೂರು ಸ್ಮಾರ್ಟ್ ಸಿಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ರಾಜು, ಪ್ರಧಾನ ವ್ಯವಸ್ಥಾಪಕ ಅರುಣ್ ಪ್ರಭಾ, ಯುವಜನ ಸಬಲೀಕರಣ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ ಭಾಗವಹಿಸಿದ್ದರು. ಒಲಿಂಪಿಯನ್ ಶ್ರೀಹರಿ ನಟರಾಜ್ ಕ್ರೀಡಾ ಪ್ರತಿಜ್ಞೆ ಬೋಧಿಸಿದರು.