ದೇವಸ್ಥಾನ ಜಾತ್ರೆ ಅಂಗಡಿಗಳಲ್ಲಿ ಕೇಸರಿ ಧ್ವಜ ಹಾಕಿರುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ: ಗುಂಡೂರಾವ್
ಮಂಗಳೂರು, ಅ.18: ಮಂಗಳಾದೇವಿ ದೇವಸ್ಥಾನ ಜಾತ್ರೆಯ ಅಂಗಡಿಗಳಲ್ಲಿ ಕೇಸರಿ ಧ್ವಜ ಹಾಕಿರುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗವುದು. ಇದು ಸಂವಿಧಾನ ಆಧಾರಿತ ದೇಶವೇ ಹೊರತು ಧರ್ಮಾಧಾರಿತ ದೇಶ ಅಲ್ಲ. ಯಾರನ್ನೂ ಯಾರಿಗೂ ನಿರ್ಬಂಧ ಮಾಡಲು ಸಾಧ್ಯ ಇಲ್ಲ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅವರು ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಆಧಾರ ಇಲ್ಲದೆ ಮಾತನಾಡುವುದು ಬಿಜೆಪಿ ಚಾಳಿ
ಐಟಿ ದಾಳಿ ವೇಳೆ ಗುತ್ತಿಗೆದಾರನ ಮನೆಯಲ್ಲಿ ಕೋಟ್ಯಂತರ ಹಣ ಪತ್ತೆ ವಿಚಾರವಾಗಿ ವಿಪಕ್ಷ ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕರ್ನಾಟಕ ಜನತೆ ಬಿಜೆಪಿ ಆಡಳಿತವನ್ನು ಕಂಡಿದ್ದಾರೆ. ಇದೀಗ ಬಿಜೆಪಿ ಪಂಚ ರಾಜ್ಯ ಚುನಾವಣೆಯಲ್ಲಿ ತಮಗೆ ಸೋಲಾಗುವುದನ್ನು ಅರಿತು ಕಾಂಗ್ರೆಸ್ ಗೆ ಮಸಿ ಬಳಿಯುವ ನಿಟ್ಟಿನಲ್ಲಿ ಸುಳ್ಳು ಹೇಳುತ್ತಿದೆ. ಐಟಿ, ಸಿಬಿಐ, ಇಡಿ ಸಹಿತ ತನಿಖಾ ಸಂಸ್ಥೆಗಳು ಅವರ ಕೈಯಲ್ಲಿದೆ. ಆಧಾರ ಇಲ್ಲದೆ ಮಾತನಾಡುವುದು ಬಿಜೆಪಿ ಚಾಳಿ ಎಂದು ಟೀಕಿಸಿದರು.
ಗುತ್ತಿಗೆದಾರನ ಬಳಿ ಪತ್ತೆ ಆಗಿರುವ ಹಣದ ಬಗ್ಗೆ ತನಿಖೆ ಆಗುತ್ತದೆ. ತಪ್ಪು ಮಾಡಿದ್ದರೆ ತನಿಖೆ ಬಳಿಕ ಕ್ರಮ ಆಗಲಿದೆ ಎಂದು ಹೇಳಿದರು.
ಆಪರೇಷನ್ ಹಸ್ತ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾವು 136 ಜನ ಇದ್ದೇವೆ. ಆಪರೇಷನ್ ಹಸ್ತ ಮಾಡುವ ಅಗತ್ಯ ನಮಗಿಲ್ಲ. ಯಾವುದೇ ಪಕ್ಷ ಒಡೆಯುವ , ಯಾರನ್ನೂ ಸೆಳೆಯುವ ಅಗತ್ಯ ನಮಗಿಲ್ಲ ಆದರೆ ಸ್ವಯಂಪ್ರೇರಣೆ ಯಿಂದ ಪಕ್ಷಕ್ಕೆ ಬರುವವರಿಗೆ ಸ್ವಾಗತ ಎಂದರು.
ಜೆಡಿಎಸ್ ನಲ್ಲಿ ಆಗುತ್ತಿರುವ ಬೆಳವಣಿಗೆಯಿಂದ ಅನೇಕ ಮಂದಿ ಪಕ್ಷಕ್ಕೆ ಬರಲು ಆಸಕ್ತಿ ಇದೆ. ಆದರೆ ಅದಕ್ಕಾಗಿ ಆಪರೇಶನ್ ಹಸ್ತ ಮಾಡುವ ಅಗತ್ಯ ನಮಗಿಲ್ಲ. ಆಪರೇಷನ್ ಕಮಲ ನಡೆಸಿ ದೇಶಕ್ಕೆ ಕೆಟ್ಟ ಸಂಸ್ಕೃತಿ ತೋರಿಸಿದ್ದೆ ಬಿಜೆಪಿ. ಹಣ ಕೊಟ್ಟು ಕೊಳ್ಳುವುದರಲ್ಲಿ ಬಿಜೆಪಿ ನಂಬರ್ ವನ್ ಎಂದು ಅವರು ಆರೋಪಿಸಿದರು.