ಜನರಿಂದಲೇ ರೂಪುಗೊಂಡ ಜನನಾಯಕ ವಸಂತ ಬಂಗೇರ
ಬೆಳ್ತಂಗಡಿ : ರಾಜ್ಯದ ರಾಜಕೀಯದಲ್ಲಿ ತನ್ನದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಅಪರೂಪದ ರಾಜಕಾರಣಿಗಳಲ್ಲಿ ಕೆ.ವಸಂತ ಬಂಗೇರ ಕೂಡಾ ಒಬ್ಬರಾಗಿದ್ದರು. ಅವರು ಕಳೆದ ಐದು ದಶಕಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದ, ಜನರಿಂದಲೇ ರೂಪಗೊಂಡ ಜನರಿಗಾಗಿ ಸದಾ ಮಿಡಿಯುತ್ತಿದ್ದ ರಾಜಕಾರಣಿ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಜಾತ್ಯತೀತ ಜನತಾ ದಳ, ಕಾಂಗ್ರೆಸ್ ಪಕ್ಷಗಳಿಂದ ಐದು ಬಾರಿ ಶಾಸಕರಾಗಿದ್ದ ಅವರು, ರಾಜ್ಯ ವಿಧಾನ ಸಭೆಯ ಮುಖ್ಯ ಸಚೇತಕರಾಗಿಯೂ ಕಾರ್ಯನಿರ್ವಹಿಸಿದ್ದರು.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ತನ್ನದೇ ಆದ ವ್ಯಕ್ತಿ ಪ್ರಭಾವ ಬೆಳೆಸಿಕೊಂಡಿದ್ದ ವಸಂತ ಬಂಗೇರ, ಯಾವ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುವ ವರ್ಚಸ್ಸು ಹೊಂದಿದ್ದರು. ಆರಂಭದಲ್ಲಿ ಬಿಜೆಪಿಯಿಂದ ಶಾಸಕರಾಗಿದ್ದ ಅವರು ಕೋಮುವಾದದ ವಿರುದ್ಧ ಸದಾ ಧ್ವನಿಯೆತ್ತುತ್ತಲೇ ಬಂದವರು.
ವಸಂತ ಬಂಗೇರ 1946ರ ಜನವರಿ 15ರಂದು ಕೇದೆ ಸುಬ್ಬ ಪೂಜಾರಿ ಹಾಗೂ ದೇವಕಿ ದಂಪತಿಯ ಪುತ್ರನಾಗಿ ಜನಿಸಿದರು. ಅಣ್ಣ ಚಿದಾನಂದ 1968ರಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಅವರೊಂದಿಗೆ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಚುನಾವಣೆಯಲ್ಲಿ ಚಿದಾನಂದ ಗೆಲುವನ್ನೂ ಪಡೆದರು. ಆದರೆ ವಸಂತ ಬಂಗೇರ ಕಾಂಗ್ರೆಸ್ ನೊಂದಿಗೆ ಹೆಚ್ಚು ದಿನಗಳ ಕಾಲ ಮುಂದುವರಿಯಲಿಲ್ಲ. 1978ರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಂಗೇರ ಮೊದಲ ಬಾರಿಗೆ ಕುವೆಟ್ಟು ಗ್ರಾಪಂನಿಂದ ಚುನಾವಣಾ ಕಣಕ್ಕೆ ಧುಮುಕಿದರು. ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದ ಅವರು ಅವಿರೋಧವಾಗಿ ಆಯ್ಕೆಯಾದರು. ಪಂಚಾಯತ್ ಅಧ್ಯಕ್ಷರೂ ಆಗಿದ್ದರು.
1983ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿದ ಬಂಗೇರ ಯಶಸ್ಸನ್ನು ಕಂಡರು. ಬಂಗೇರ ಅವರೇ ಹೇಳುವಂತೆ ಸಮಗ್ರ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಅವರು ಕಮಲದ ಚಿಹ್ನೆಯಲ್ಲಿ ಕಣಕ್ಕೆ ಇಳಿದಿದ್ದರು. ವಸಂತ ಬಂಗೇರರ ವ್ಯಕ್ತಿ ಪ್ರಭಾವವನ್ನು ತೋರಿದ್ದು 1985ರ ಚುನಾವಣೆ. ಈ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಚುನಾವಣೆ ಮುಗಿದಾಗ ಬಂಗೇರರೊಂದಿಗೆ 1983ರಲ್ಲಿ ಚುನಾಯಿತರಾಗಿದ್ದ ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರುಗಳೂ ಸೋತಿದ್ದರು. ಆದರೆ ವಸಂತ ಬಂಗೇರ ಮಾತ್ರ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದರು. ಆಗ ರಾಜ್ಯ ದಲ್ಲಿ ಬಿಜೆಪಿಯಿಂದ ಇಬ್ಬರು ಶಾಸಕರು ಮಾತ್ರ ಆಯ್ಕೆಯಾಗಿದ್ದರು. ಶಿಕಾರಿಪುರದಿಂದ ಬಿ.ಎಸ್. ಯಡಿಯೂರಪ್ಪ ಹಾಗೂ ಬೆಳ್ತಂಗಡಿಯಿಂದ ವಸಂತ ಬಂಗೇರ.
ಬಂಗೇರ ಬಿಜೆಪಿಯಿಂದ ಶಾಸಕರಾದರೂ ಅವರು ಹೆಚ್ಚು ದಿನಗಳ ಕಾಲ ಬಿಜೆಪಿಯಲ್ಲಿ ಉಳಿಯಲಿಲ್ಲ. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆಯವರು ಬಂಗೇರರ ನಾಯಕತ್ವ ಗುಣವನ್ನು ಗುರುತಿಸಿ ಅವರನ್ನು ಜನತಾದಳಕ್ಕೆ ಕರೆದೊಯ್ದರು. 1989ರ ವಿಧಾನಸಭಾ ಚುನಾವಣೆಯಲ್ಲಿ ಜನತಾ ದಳದಿಂದ ಕಣಕ್ಕಿಳಿದ ಬಂಗೇರ ಅಲ್ಪಮತಗಳ ಅಂತರ ದಿಂದ ಸೋಲುಂಡರು. ಆದರೆ ತಾಲೂಕಿನಲ್ಲಿ ಅಸ್ತಿತ್ವವೇ ಇರದಿದ್ದ ಪಕ್ಷಕ್ಕೆ ಸೇರಿ ಅವರು ಪ್ರಬಲ ಸ್ಪರ್ಧೆಯೊಡ್ಡುವ ಮೂಲಕ ಗಮನ ಸೆಳೆದಿದ್ದರು. ಈ ಮೊದಲು ಅವರು ಎರಡು ಬಾರಿ ಶಾಸಕರಾಗಿದ್ದ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಆ ಚುನಾವಣೆಯಲ್ಲಿ ಕೇವಲ ಐದು ಸಾವಿರ ಮತಗಳು ಮಾತ್ರ ಲಭಿಸಿದ್ದವು.
ಜಿಲ್ಲೆಯಲ್ಲಿ ಯಾವುದೇ ರೀತಿಯ ಹೆಚ್ಚಿನ ಶಕ್ತಿಯಿಲ್ಲದ ಜನತಾ ದಳದಲ್ಲೇ ಮುಂದುವರಿದ ವಸಂತ ಬಂಗೇರ, 1994ರ ಚುನಾವಣೆಯಲ್ಲಿ ಬೆಳ್ತಂಗಡಿಯಲ್ಲಿ ಮತ್ತೆ ತನ್ನ ವ್ಯಕ್ತಿ ಪ್ರಭಾವದಿಂದಲೇ ಗೆಲುವನ್ನು ಕಂಡರು. ಈ ಅವಧಿಯಲ್ಲಿ ಅವರು ವಿಧಾನಸಭೆಯ ಮುಖ್ಯ ಸಚೇತಕರಾಗಿಯೂ ಕಾರ್ಯನಿರ್ವಹಿಸಿದರು.
1996ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಜನತಾದಳದ ಅಭ್ಯರ್ಥಿಯಾಗಿ ಅವರು ಸ್ಪರ್ಧೆ ಮಾಡಿದ್ದರು. 1999 ಹಾಗೂ 2004ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ತನ್ನ ಕಿರಿಯ ಸಹೋದರ ಪ್ರಭಾಕರ ಬಂಗೇರರ ಎದುರು ಸೋಲನ್ನು ಕಾಣಬೇಕಾಯಿತು.
2008ರ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷವನ್ನು ಸೇರಿದ ವಸಂತ ಬಂಗೇರ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವನ್ನೂ ಕಂಡರು. 1989ರ ಬಳಿಕ ಬೆಳ್ತಂಗಡಿಯಲ್ಲಿ ನಿರಂತರವಾಗಿ ಸೋಲನ್ನು ಕಾಣುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಗೆಲುವನ್ನು ತಂದುಕೊಡಲು ಬಂಗೇರರ ವ್ಯಕ್ತಿ ಪ್ರಭಾವವೇ ಮುಖ್ಯ ಕಾರಣವಾಯಿತು. 2013ರ ಚುನಾವಣೆ ಯಲ್ಲೂ ಬಂಗೇರ ಜಯಭೇರಿ ಬಾರಿಸಿದರು. ಆದರೆ 2018ರ ಅವರ ಕೊನೆಯ ಚುನಾವಣೆಯಲ್ಲಿ ಹರೀಶ್ ಪೂಂಜಾ ವಿರುದ್ಧ ಸೋಲನ್ನು ಕಂಡರು. ಕಳೆದ ಚುನಾವಣೆಯ ವೇಳೆಗೆ ಆರೋಗ್ಯವಂತರಾಗಿದ್ದರೂ ಬಂಗೇರ ಚುನಾವಣಾ ಕಣದಿಂದ ಹಿಂದೆ ಸರಿದರು. ರಕ್ಷಿತ್ ಶಿವರಾಂ ಅವರಿಗೆ ಅವಕಾಶ ನೀಡಿ ಚುನಾವಣಾ ಪ್ರಚಾರದ ಚುಕ್ಕಾಣಿ ಹಿಡಿದಿದ್ದರು.
ಬೆಳ್ತಂಗಡಿಯ ಅಭಿವೃದ್ಧಿಯ ರೂವಾರಿ
ಕಳೆದ ಮೂವತ್ತು ವರ್ಷಗಳಲ್ಲಿ ಐದು ಬಾರಿ ಶಾಸಕರಾಗಿ ಆಯ್ಕೆಯಾದ ಬಂಗೇರರನ್ನು ತಾಲೂಕಿನ ಜನತೆ ಅಭಿವೃದ್ಧಿಯ ರೂವಾರಿ ಎಂದೇ ಗುರುತಿಸುತ್ತಾರೆ.
ಬೆಳ್ತಂಗಡಿ ತಾಲೂಕಿನ ಗ್ರಾಮ ಗ್ರಾಮಗಳಲ್ಲಿಯೂ ಅವರು ಅಭಿವೃದ್ಧಿ ಕಾರ್ಯಗಳನ್ನು ತಂದರು. ತಾಲೂಕಿನ ಜನತೆಯ ಪಾಲಿಗೆ ಅವರು ಆಪತ್ಬಾಂಧವರಾಗಿದ್ದರು. ಸದಾ ಜನರೊಂದಿಗೆ ಇರುವ ಅಪರೂಪದ ವ್ಯಕ್ತಿತ್ವ ಅವರದ್ದು. ಅವರು ಶಾಸಕರಾಗಿರಲಿ, ಇಲ್ಲದಿರಲಿ ಬೆಳಗ್ಗೆ ಹತ್ತು ಗಂಟೆಗೆ ಬೆಳ್ತಂಗಡಿ ಬಸ್ ನಿಲ್ದಾಣದ ತಮ್ಮ ಕಚೇರಿಗೆ ಬರುವ ಅವರು ದಿನವಿಡೀ ಅಲ್ಲೇ ಇದ್ದು, ಜನರ ಕಷ್ಟಗಳನ್ನು ಆಲಿಸಿ ಅದಕ್ಕೆ ಪರಿಹಾರ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದರು. ತನ್ನ ಬಳಿಗೆ ಸಹಾಯ ಕೇಳಿ ಬಂದವರನ್ನು ಅವರು ಎಂದಿಗೂ ಬರಿಗೈಯಲ್ಲಿ ಕಳುಹಿಸಿದವರಲ್ಲ.
ಅಧಿಕಾರಿಗಳ ಪಾಲಿಗೆ ವಸಂತ ಬಂಗೇರ ಸದಾ ಸಿಂಹಸ್ವಪ್ನವಾಗಿದ್ದರು. ಭ್ರಷ್ಟಾಚಾರದ ವಿರುದ್ಧ ಸದಾ ಸಿಡಿದೇಳುತ್ತಿದ್ದ ವಸಂತ ಬಂಗೇರರನ್ನು ನೋಡಿದರೆ ಅಧಿಕಾರಿಗಳು ಭಯಪಡುತ್ತಿದ್ದರು.
ಒಲಿಯದ ಸಚಿವ ಸ್ಥಾನ!
ಕೆ.ವಸಂತ ಬಂಗೇರ ಐದು ಬಾರಿ ಶಾಸಕರಾದರೂ ಅವರಿಗೆ ಸಚಿವರಾಗುವ ಅವಕಾಶ ಸಿಗಲೇ ಇಲ್ಲ. 1994ರಲ್ಲಿ ಎಚ್.ಡಿ.ದೇವೇಗೌಡ ಮುಖ್ಯಮಂತ್ರಿಯಾದಾಗ ಬಂಗೇರ ಸಚಿವರಾಗುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು ಆದರೆ ಅವರಿಗೆ ಅವಕಾಶ ಸಿಗಲಿಲ್ಲ. ಬದಲಿಗೆ ಜಯಪ್ರಕಾಶ ಹೆಗ್ಡೆಯವರಿಗೆ ಅವಕಾಶ ನೀಡಲಾಯಿತು.
ಬಳಿಕ 2018ರಲ್ಲಿ ಬಂಗೇರ ಐದನೇ ಬಾರಿ ಶಾಸಕರಾದಾಗ ಅವರ ಆತ್ಮೀಯರಾಗಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾದರು. ಆದರೆ ಆಗಲೂ ಬಂಗೇರರಿಗೆ ಅವಕಾಶ ಸಿಗಲೇ ಇಲ್ಲ. ಹಲವು ಕಾಣದ ಕೈಗಳು ಅವರಿಗೆ ಸಚಿವ ಸ್ಥಾನ ತಪ್ಪಿಸಿದವು ಎಂಬ ದೂರು ಅಂದಿನಿಂದಲೂ ಅವರ ಬೆಂಬಲಿಗರದ್ದಾಗಿತ್ತು. ಅವರು ಕೇವಲ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಸೀಮಿತರಾದರು.