ಮುಮ್ತಾಝ್ ಅಲಿ ಪ್ರಕರಣ: ಪ್ರಮುಖ ಆರೋಪಿಯ ಮನೆಯಲ್ಲಿ ಮಹಜರು
ಮುಮ್ತಾಝ್ ಅಲಿ
ಸುರತ್ಕಲ್: ಧಾರ್ಮಿಕ ಮುಂದಾಳು ಉದ್ಯಮಿ ಮುಮ್ತಾಝ್ ಅಲಿ ಮೃತ್ಯು ಪ್ರಕರಣದ ಪ್ರಮುಖ ಆರೋಪಿ ಸತ್ತಾರ್ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಗುರುವಾರ ಸತ್ತಾರ್ ನ ಮನೆಗೆ ಕರೆತಂದು ಮಹಜರು ಕಾರ್ಯ ನಡೆಸಿದರು.
ಪ್ರಮುಖ ಆರೋಪಿ ಸತ್ತಾರ್, ಶಾಫಿ ನಂದಾವರ ಮತ್ತು ರಹ್ಮತ್ ಕಾವೂರು ಪೊಲೀಸರು ಬಿಗಿಭದ್ರತೆಯಲ್ಲಿ ಕೃಷ್ಣಾಪುರ 7ನೇ ಬ್ಲಾಕ್ ನಲ್ಲಿರುವ ಸತ್ತಾರ್ ನ ಮನೆಗೆ ಕರೆತಂದು ಮಹಜರು ನಡೆಸಿದರು.
ಆರೋಪಿಗಳನ್ನು ಕೆಎಸ್ಆರ್ ಪಿ ತುಕಡಿಯ ಬಸ್ ನಲ್ಲಿ ಸ್ಥಳಕ್ಕೆ ಕರೆತಂದಿದ್ದ ಪೊಲೀಸರು ಒಬ್ಬೊಬ್ಬರನ್ನಾಗಿ ಸತ್ತಾರ್ ನ ಮನೆಯೊಳಗೆ ಕರೆದೊಯ್ದರು. ಸುಮಾರು 15 ನಿಮಿಷಗಳ ಕಾಲ ನಡೆದ ಮಹಜರು ಪ್ರಕ್ರಿಯೆ ಬಳಿಕ ಆರೋಪಿಗಳನ್ನು ಪೊಲೀಸರು ವಾಪಸ್ ಕರೆದೊಯ್ದರು. ಈ ವೇಳೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ್ದ ಸ್ಥಳೀಯರು ಆರೋಪಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು. ಸ್ಥಳದಲ್ಲಿದ್ದ ಸುರತ್ಕಲ್ ಪೊಲೀಸರು ಹಾಗೂ ಕೆಎಸ್ಆರ್ ಪಿ ಪೊಲೀಸರು ಉದ್ರಿಕ್ತ ಜನರನ್ನು ಸಂಭಾಳಿಸಿದರು.
ಮಹಜರು ಪ್ರಕ್ರಿಯೆಯಲ್ಲಿ ಕಾವೂರು, ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷರು, ಉಪ ನಿರೀಕ್ಷರು ಇದ್ದರು. ಆರೋಪಿಗಳ ಸ್ಥಳ ಮಹಜರು ಪ್ರಕ್ರಿಯೆಗಳು ನಡೆದ ಬಳಿಕ ಸೋಮವಾರ ಪ್ರಕರಣವನ್ನು ಕಾವೂರು ಠಾಣೆಯಿಂದ ಸುರತ್ಕಲ್ ಪೊಲೀಸ್ ಠಾಣೆಗೆ ವರ್ಗಾಯಿಸುವ ಸಾಧ್ಯೆತೆ ಇದೆ ಎಂದು ತಿಳಿದು ಬಂದಿದೆ.