ದೇಶದ ಆರ್ಥಿಕ ಅಭಿವೃದ್ಧಿಗೆ ಇಂದಿರಾ ಗಾಂಧಿ ಕೊಡುಗೆ ಅನನ್ಯ: ಡಾ. ಅನಿತ ರವಿಶಂಕರ್
ಮಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ದೇಶದ ಆರ್ಥಿಕ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದರು. ದೇಶ ಕಂಡ ಓರ್ವ ಸಮರ್ಥ ನಾಯಕಿಯಾಗಿದ್ದರು. ಸಮಾನತೆ ,ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣಕ್ಕೆ ಅವರು ಒತ್ತು ನೀಡಿದ್ದರು ಎಂದು ವಿಶ್ರಾಂತ ಪ್ರಾಧ್ಯಾಪಕಿ ಮತ್ತು ಮಂಗಳೂರು ವಿವಿ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ಅನಿತ ರವಿಶಂಕರ್ ಹೇಳಿದ್ದಾರೆ.
ಇಂದಿರಾ ಗಾಂಧಿ ಜನ್ಮದಿನಾಚರಣೆ ಸಮಿತಿಯ ಆಶ್ರಯದಲ್ಲಿ ನಗರದ ಮಣ್ಣಗುಡ್ಡೆಯ ಗುರ್ಜಿಯ ಬಳಿ ಮಂಗಳವಾರ ನಡೆದ ಸೌಹಾರ್ದತಾ ನಡಿಗೆಯ ಸಭಾ ಕಾರ್ಯಕ್ರಮ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು.
ದೇಶದ ಅಭಿವೃದ್ಧಿಯ ದೃಷ್ಟಿಕೋನ ಹೊಂದಿದ್ದ ಅವರು ಬಡತನ ನಿವಾರಣೆಯ ಬಗ್ಗೆ ಚಿಂತನೆ ನಡೆಸಿದ್ದರು. ಅವರು ಆರಂಭಿಸಿರುವ ಹಸಿರು ಕ್ರಾಂತಿ ಫಲವಾಗಿ ದೇಶ ಆಹಾರದ ಉತ್ಪಾದನೆಯಲ್ಲಿ ಇಂದು ಸ್ವಾವಲಂಭನೆ ಸಾಧಿಸಿದೆ. ದೇಶದಲ್ಲಿ ಆಹಾರದ ಕೊರತೆ ನಿವಾರಣೆಯಾಗಿದೆ ಎಂದರು.
ನೀರಾವರಿ ಯೋಜನೆ ಇಂದಿರಾ ಗಾಂಧಿ ಅವರ ಕನಸಿನ ಯೋಜನೆಯಾಗಿದೆ. ಬಡವರು ಅನುಭವಿಸುತ್ತಿರುವ ತೊಂದರೆ ಯನ್ನು ಮನಗಂಡು ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿ ಜನರಿಗೆ ಬ್ಯಾಂಕುಗಳಿಂದ ಸಾಲಸೌಲಭ್ಯಗಳನ್ನು ಸುಲಭವಾಗಿ ದೊರಕುವಂತೆ ಮಾಡಿದರು. ಜನರಲ್ಲಿ ಉಳಿತಾಯ ಮನೋಭಾವ ಬೆಳೆಸಿದರು. ದೇಶದ ಸೌಹಾರ್ದೆತೆಗೆ ದುಡಿ ದ ಇಂದಿರಾಗಾಧಿ ಸಮಾಜವಾದ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದರು. ಹಿಂದುಳಿದವರ ಅಭಿವೃದ್ಧಿಗೆ ಆದ್ಯತೆ ನೀಡಿ ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದರು ಎಂದು ಹೇಳಿದರು.
ಇಂದಿರಾ ಗಾಂಧಿ ಆಡಳಿತ ಮಾದರಿಯಾಗಿದೆ. ಅವರು ಮಹಿೆಯರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ನುಡಿದರು.
ಚಿಂತಕ , ಸಾಹಿತಿ ಎಂ.ಜಿ. ಹೆಗಡೆ ಮಾತನಾಡಿ ‘ ಇಂದಿರಾ ಗಾಂಧಿ ಅವರು ಭಾರತಕ್ಕೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ಮತ್ತು ವೇದಿಕೆಯನ್ನು ನಿರ್ಮಿಸಿಕೊಟ್ಟಿದ್ದರು ಎಂದು ಹೇಳಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಮಹಾದ್ವಾರದ ಬಳಿಯಿಂದ ಮಣ್ಣಗುಡ್ಡೆ ಗುರ್ಜಿವರೆಗೆ ನಡೆದ ಸೌಹಾರ್ದ ನಡಿಗೆಯನ್ನು ಮುಡಾದ ಮಾಜಿ ಅಧ್ಯಕ್ಷ ಸುರೇಶ್ ಬಳ್ಳಾಲ್ ಉದ್ಘಾಟಿಸಿದರು.
ಇಂದಿರಾ ಗಾಂಧಿ ಬಗ್ಗೆ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ರಾಜ್ಯಸಭಾ ಮಾಜಿ ಸದಸ್ಯ ಬಿ.ಇಬ್ರಾಹೀಂ, ಮನಪಾ ಸದಸ್ಯ ಕೇಶವ ಮರೋಳಿ, ಸತೀಶ್ ಪೆಂಗಲ್, ಮಾಜಿ ಮೇಯರ್ಗಳಾದ ಶಶಿಧರ್ ಹೆಗ್ಡೆ, ಅಶ್ರಫ್ , ಮಾಜಿ ಸದಸ್ಯ ಪದ್ಮನಾಭ ಅಮಿನ್, ಇಂದಿರಾಗಾಂಧಿ ಜನ್ಮದಿನಾಚರಣೆ ಸಮಿತಿಯ ಅಧ್ಯಕ್ಷ ಹ್ಯಾರಿ ಡಿ ಸೋಜ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಕಂದಕ್, ಸಹ ಸಂಚಾಲಕರಾದ ಮಹಮ್ಮದ್ ರಹ್ಮಾನ್ ಕುಂಜತ್ಬೈಲ್,ಪ್ರಕಾಶ್ ಸಾಲಿಯಾನ್, ನೀತ್ ಶರಣ್,ಸಮರ್ಥ್ ಭಟ್,ಟಿ.ಸಿ. ಗಣೇಶ್, ರಾಜೇಶ್ ದೇವಾಡಿಗ, ಬಿಕೆ ಚಂದ್ರಪ್ಪ,ಅಬೂಬಕರ್ ಅಶ್ರಫ್ ಬೆಂಗ್ರೆ, ವಹಾಬ್ ಕುದ್ರೋಳಿ ಸದಸ್ಯರಾದ ಮಮತಾ ಶೆಟ್ಟಿ, ಚಂಚಲಾಕ್ಷಿ, ಶಶಿಕಲಾ ಪದ್ಮನಾಭ, ಶಾಂತರಾವ್, ಮೀನಾ ಟೆಲ್ಲಿಸ್, ಸಂಜನಾ ಚಲವಾದಿ, ಯೋಗೀಶ್ ನಾಯಕ್, ಶಕುಂತಲಾ ಕಾಮತ್, ಜಯರಾಜ್ ಕೋಟ್ಯಾನ್, ಖಾಲಿದ್ ಉಜಿರೆ, ಹುಸೈನ್ ಕಾಟಿಪಳ್ಳ, ದುರ್ಗಾಪ್ರಸಾದ್, ಹೊನ್ನಯ್ಯ ಉಪಸ್ಥಿತರಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಸೇವ್ಲೈಫ್ ಚಾರಿಟೇಬಲ್ ಟ್ರಸ್ಟ್ನ ಅರ್ಜುನ್ ಭಂಡಾರ್ಕರ್, ವಾಯ್ಸ್ ಆಫ್ ಬ್ಲಡ್ ಡೊನೆರ್ಸ್ನ ಅಬ್ದುಲ್ ರವೂಫ್ ಬಂದರ್ ಮತ್ತು ಝಹೀರ್ ಅಬ್ಬಾಸ್ , ಚಿಕ್ಕಮಗಳೂರು ಲೋಕಸಭಾ ಚುನಾವಣೆ ವೇಳೆ ಇಂದಿರಾ ಗಾಂಧಿ ಚಾಲಕರಾಗಿದ್ದ ಕಸ್ತೂರಿ ಬಾಲಕೃಷ್ಣ ಪೈ ಅವರನ್ನು ಸನ್ಮಾನಿಸಲಾಯಿತು
ಇಂದಿರಾಗಾಂಧಿ ಜನ್ಮದಿನಾಚರಣೆ ಸಮಿತಿಯ ಸಂಚಾಲಕರಾದ ಮಂಜುಳಾ ನಾಯಕ್ ಸ್ವಾಗತಿಸಿದರು. ರಾಜೇಶ್ ದೇವಾಡಿಗ ವಂದಿಸಿದರು. ರಹ್ಮಾನ್ ಕುಂಜತ್ಬೈಲ್ ಕಾರ್ಯಕ್ರಮ ನಿರೂಪಿಸಿದರು.