ಮಂಗಳೂರು| ಕಮಿಷನರ್ ಅನುಪಮ್ ಅಗರ್ವಾಲ್ ವರ್ಗಾವಣೆಗೆ ಒತ್ತಾಯಿಸಿ ಸರಣಿ ಹೋರಾಟ, ಗೃಹ ಸಚಿವ, ಸಿಎಂ ಭೇಟಿಗೆ ನಿರ್ಧಾರ: ಮುನೀರ್ ಕಾಟಿಪಳ್ಳ
ಮುನೀರ್ ಕಾಟಿಪಳ್ಳ
ಮಂಗಳೂರು: ಪ್ರತಿಭಟನೆ, ಧರಣಿಗಳಿಗೆ ಅವಕಾಶ ನಿರಾಕರಿಸುವ, ಪ್ರತಿಭಟನಾಕಾರರ ಮೇಲೆ ಸರಣಿ ಮೊಕದ್ದಮೆ ಹೂಡುತ್ತಿರುವ, ಸರ್ವಾಧಿಕಾರಿ ಧೋರಣೆಯ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ವಿರುದ್ಧ ಶಿಸ್ತು ಕ್ರಮ ಜರುಗಿಸಲು, ಮಂಗಳೂರು ನಗರ ಕಮಿಷನರೇಟ್ ನಿಂದ ವರ್ಗಾಯಿಸಲು ಒತ್ತಾಯಿಸಿ ಹೋರಾಟ ತೀವ್ರಗೊಳಿಸಲು, ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀರ್ಮಾನಿಸಿದೆ ಎಂದು ಎಂದು ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಕಮಿಷನರ್ ಅಗರ್ವಾಲ್ ಹಾಗೂ ಡಿಸಿಪಿ ಗೋಯಲ್ ನಡೆ ಪೊಲೀಸ್ ಇಲಾಖೆಯ ಗೌರವಕ್ಕೆ ತಕ್ಕುದಾಗಿಲ್ಲ. ಜನ ಸಾಮಾನ್ಯರು, ದುರ್ಬಲ ವಿಭಾಗಗಳು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಲಾಗದ ಸ್ಥಿತಿ ಮಂಗಳೂರಿನಲ್ಲಿ ನಿರ್ಮಾಣ ಗೊಂಡಿದೆ. ಕಾಂಗ್ರೆಸ್ ಆಡಳಿತದಲ್ಲಿ ಬಿಜೆಪಿ ನೀತಿಗಳನ್ನು ಜಾರಿಗೊಳಿಸುವ ಯತ್ನ ಬಹಿರಂಗವಾಗಿಯೇ ಕಮಿಷನರ್ ಅಗರ್ವಾಲ್ ನಡೆಸುತ್ತಿದ್ದಾರೆ. ಫೆಲೆಸ್ತೀನ್ ಹಿಂಸಾಚಾರ ಖಂಡಿಸಿ, ರಾಷ್ಟ್ರೀಯ ಹೆದ್ದಾರಿ ದುರಸ್ಥಿಗೆ ಆಗ್ರಹಿಸಿ ನಡೆಸಿದ ಧರಣಿಗಳ ಸಂದರ್ಭ ಕಮಿಷನರ್ ನಡೆದುಕೊಂಡ ರೀತಿಯಿಂದ ಇದು ಬಹಿರಂಗಗೊಂಡಿದೆ. ಜನ ಸಾಮಾನ್ಯರ ದುಡಿಮೆ, ಸಂಪಾದನೆಯನ್ನು ಕಸಿದುಕೊಳ್ಳುತ್ತಿರುವ ಜೂಜು, ಮಟ್ಕಾ ಹಾವಳಿಯಿಂದ ಮಂಗಳೂರು ನಗರ ತತ್ತರಿಸಿದೆ. ಕಮಿಷನರ್ ಅಗರ್ವಾಲ್ ಮಂಗಳೂರಿನಿಂದ ನಿರ್ಗಮಿಸದೆ ಇಲ್ಲಿ ನೆಮ್ಮದಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಸಿಪಿಎಂ ಘಟಕಗಳಿಗೆ ಕರೆ ನೀಡಿದೆ. ಜಿಲ್ಲೆಗೆ ಆಗಮಿಸುತ್ತಿರುವ ಗೃಹ ಸಚಿವರು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅಗರ್ವಾಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಲು ನಿಧರ್ರಿಸಲಾಗಿದೆ. ಜಿಲ್ಲೆಯ ಜನಪರ, ಸಮಾನ ಮನಸ್ಕ ಸಂಘಟನೆಗಳು, ಎಡಪಕ್ಷಗಳ ಜಂಟಿ ಸಭೆಯನ್ನು ಆಯೋಜಿಸುವುದು, ಕಮೀಷನರ್ ವರ್ಗಾವಣೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಸಭಾಪತಿ ಹೇಳಿಕೆ ವಿಷಾದಕರ: ಪ್ರತಿಭಟನೆಗಳಿಗೆ ಅವಕಾಶ ನಿರಾಕರಿಸುವ, ಸುಳ್ಳು ಮೊಕದ್ದಮೆ ಹೂಡುವ ಪೊಲೀಸ್ ಕಮಿಷನರ್ ಅವರ ಅಪ್ರಜಾಸತ್ತಾತ್ಮಕ ಕ್ರಮಗಳನ್ನು ಸಭಾಪತಿ ಯುಟಿ ಖಾದರ್ ಸಮರ್ಥಿಸಿರುವುದು ವಿಷಾದನೀಯ ಎಂದು ಸಿಪಿಎಂ ಹೇಳಿದೆ.
ಸ್ಪೀಕರ್ ಹುದ್ದೆ ಸಾಂವಿಧಾನಿಕವಾದದ್ದು, ಅದು ಸರಕಾರದ ಭಾಗ ಅಲ್ಲ. ಸ್ಪೀಕರ್ ಆದವರು ನಿಷ್ಪಕ್ಷಪಾತವಾಗಿರಬೇಕು. ರಾಜಕಾರಣ, ಆಡಳಿತಾತ್ಮಕ ವಿಷಯಗಳು ಅವರ ವ್ಯಾಪ್ತಿಗೆ ಬರುವುದಿಲ್ಲ. ವ್ಯಾಪ್ತಿ ಮೀರಿ ಮಾತಾಡುವುದು, ಪೊಲೀಸ್ ಅತಿರೇಕಗಳನ್ನು ಸಮರ್ಥಿಸುವುದು ಸ್ಪೀಕರ್ ಸ್ಥಾನದಲ್ಲಿ ಕೂತವರಿಗೆ ಶೋಭೆ ತರುವುದಿಲ್ಲ ಎಂದು ಸಿಪಿಎಂ ಜಿಲ್ಲಾ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.