ರಾಜ್ಯ ಹೈಕೋರ್ಟ್ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿದೆ: ಸುರೇಶ್ ಕುಲಾಲ್
ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ವಿರುದ್ಧ ಸೆನ್ ಠಾಣೆಯಲ್ಲಿ ದೂರು
ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಆಡಳಿತ ಮಂಡಳಿಯ ತೇಜೋವಧೆ ಮಾಡುವ ದುರುದ್ದೇಶದಿಂದ ಸುಳ್ಳು ಆರೋಪಗಳನ್ನು ಹೊರಿಸಿ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರು ಕಾನೂನು ಬಾಹಿರ ಎಂದು ಪ್ರಾಥಮಿಕ ಹಂತದಲ್ಲಿ ಮನಗಂಡಿರುವ ರಾಜ್ಯ ಹೈಕೋಟ್೯ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ತಿಳಿಸಿದ್ದಾರೆ.
ಗುರುವಾರ ಬಂಟ್ವಾಳದ ಸಂಘದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಾಜಿ ನಿರ್ದೇಶಕ ಲೋಕನಾಥ ಎಂಬವರು ನಮ್ಮ ಆಡಳಿತ ಮಂಡಳಿ ಮೇಲೆ ವೈಯಕ್ತಿಕ ದ್ವೇಷ ಮತ್ತು ಫೆ.9 ರಂದು ಸಂಘದ ನೂತನ ಆಡಳಿತ ಮಂಡಳಿಗೆ ನಡೆಯುವ ಚುನಾವಣೆಯನ್ನು ದೃಷ್ಟಿಯನ್ನಿರಿಸಿಕೊಂಡು ಗ್ರಾಹಕರ ಹಾಗೂ ಸದಸ್ಯರಲ್ಲಿ ಗೊಂದಲ ಸೃಷ್ಠಿಸಿ ಲಾಭದಲ್ಲಿ ಮುನ್ನಡೆಯುತ್ತಿರುವ ಬ್ಯಾಂಕಿಗೆ ನಷ್ಟ ಉಂಟುಮಾಡಲು ಸುಳ್ಳು ಅಪಾದನೆಗಳನ್ನು ಹೊರಿಸಿ ಸೆನ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು ಎಂದು ಎಂದರು.
ಈ ದೂರಿನ ವಿಚಾರಣೆ ನಡೆಸಿದ ಹೈಕೋಟ್೯ ಈ ದೂರು ಕಾನೂನು ಬಾಹಿರ ಎಂದು ಪರಿಗಣಿಸಿ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿದೆ ಎಂದ ಸುರೇಶ್ ಕುಲಾಲ್, ಬ್ಯಾಂಕಿನ ಆಡಳಿತ ಮಂಡಳಿಯ ವಿರುದ್ಧ ಚುನಾವಣಾ ಸಂದರ್ಭಗಳೆಲ್ಲಾ ಸಂಚು ನಡೆಸುತ್ತಿರುವ ಬ್ಯಾಂಕಿನ ಮೇಲೆ ಮಾಡಲಾದ ಅಪಾದನೆಯೇ ತನಿಖೆಯಲ್ಲಿ ಇತ್ಯರ್ಥಗೊಂಡ ಬಳಿಕವು ಸಾರ್ವಜನಿಕ ವಲಯ, ಸದಸ್ಯರು, ಗ್ರಾಹಕರಿಗೆ ಬ್ಯಾಂಕ್ ನ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿರುವ ಲೋಕನಾಥ್ ಮತ್ತು ಇತರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಈ ಸಂಬಂಧ ಪ್ರಕ್ರಿಯೇ ಆರಂಭಗೊಳಿಸಲಾಗಿದೆ ಎಂದರು.
ಪುತ್ತೂರು ತಾಲೂಕಿನ ಈಶ್ವರ ಮಂಗಿಲ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಎಂಬವರು ಸಂಘದ ಪಡೀಲ್ ಶಾಖೆಯಲ್ಲಿ ಚಿನ್ನದ ಬಳೆಗಳನ್ನು ಅಡವಿಟ್ಟು 2.11 ಕೋ.ರೂ.ಸಾಲ ಪಡೆದುಕೊಂಡಿದ್ದರು. ಬ್ಯಾಂಕಿನ ನಿಯಮಾವಳಿ ಪ್ರಕಾರ ಇದನ್ನು ಚಿನ್ನಾಭರಣ ಈಡಿನ ಮೇಲೆ ನೀಡುವಂತಹ ತ್ವರಿತ ಸಾಲ ಎಂದು ಪರಿಗಣಿಸಲ್ಪಡುತ್ತದೆ. ಈ ಸಾಲವನ್ನು ಶಾಖಾ ಪ್ರಬಂಧಕರು ಚಿನ್ನಾಭರಣಗಳನ್ನು ಪರೀಕ್ಷಿಸುವ ಅಧಿಕೃತ ಅಪ್ರೈಸರ್ ಅವರ ವರದಿಯಂತೆ ಬಿಡುಗಡೆಗೊಳಿಸುತ್ತಾರೆ. ಈ ಪ್ರಕ್ರಿಯೆಯು ನಿಯಮಾನುಸಾರ ನಡೆಸಲಾಗಿರುತ್ತದೆ. ಅದರ ಜವಾಬ್ದಾರಿ ಬ್ಯಾಂಕಿನ ಆಪ್ರೈಸರ್ ಮತ್ತು ಶಾಖಾಧಿಕಾರಿ ಯವರ ಮೇಲಿರುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಬೂಬಕ್ಕರ್ ಸಿದ್ದಿಕ್ ಗೆ ಸಂಘದಿಂದ ಸೂಕ್ತ ನೋಟೀಸ್‌ಗಳನ್ನು ಜಾರಿಗೊಳಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯೆಸದೇ ಇದ್ದಾಗ, ಅಡವಿರಿಸಿದ ಚಿನ್ನಾಭರಣಗಳನ್ನು ಬ್ಯಾಂಕಿನ ನಿಯಮಾನುಸಾರ ಏಲಂ ನಡೆಸಿ, ಆಭರಣ ಸಾಲವು ಬ್ಯಾಂಕ್ ಗೆ ಚುಕ್ತಾ ಆಗಿರುತ್ತದೆ. ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಿದಂತಹ ಆಪ್ರೈಸರ್ ವಿವೇಕ ಆಚಾರ್ಯರವರು ಏಲಂನಲ್ಲಿ ಚಿನ್ನಾಭರಣವನ್ನು ಪಡೆದಿದ್ದು, ಈ ದೂರನ್ನು ತನಿಖೆ ನಡೆಸಿದ್ದ ಸಂಬಂಧ ಪಟ್ಟ ಅಧಿಕಾರಿಗಳು ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘಕ್ಕೆ ಯಾವುದೇ ರೀತಿಯಲ್ಲಿ ಮೋಸ, ವಂಚನೆ ಆಗಿಲ್ಲ ಎಂಬ ನಿಲುವಿಗೆ ಬಂದು ದೂರನ್ನೇ ವಜಾಗೊಳಿಸಿ ಕ್ಲೀನ್ ಚೀಟ್ ನೀಡಿದ್ದರು ಎಂದು ಅವರು ವಿವರಿಸಿದರು.
ಆಭರಣ ಈಡಿನ ಸಾಲಗಳಲ್ಲಿ ಮಿತಿಗಿಂತ ಹೆಚ್ಚು ಸಾಲ ಮಂಜೂರಾತಿ ಮಾಡಿದ ಮತ್ತು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಪಡೀಲ್ ಶಾಖಾ ವ್ಯವಸ್ಥಾಪಕರನ್ನು ದೀರ್ಘಾವಧಿ ರಜೆಯ ಮೇಲೆ ಕಳುಹಿಸಲಾಗಿದೆ. ಈ ವಿಚಾರಕ್ಜೆ ಸಂಬಂಧಿಸಿ ಅವರು ತನಿಖೆ ಎದುರಿಸುತ್ತಿದ್ದಾರೆ ಎಂದರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಬ್ಯಾಂಕ್ ನ ಆಡಳಿತ ಮಂಡಳಿ ಬ್ಯಾಂಕ್ ವ್ಯವಹಾರದಲ್ಲಾಗಲೀ, ಬ್ಯಾಂಕ್ ಗಾಗಲೀ ಅಥವಾ ಗ್ರಾಹಕರಿಗಾಗಲೀ ತೊಂದರೆ ಉಂಟಾಗದಂತೆ ಮುನ್ನಚೆರಿಕೆ ವಹಿಸಿ ಬ್ಯಾಂಕ್ ನ ಸಂಪೂರ್ಣ ಹಿತರಕ್ಷಣೆ ಯನ್ನು ಕಾಯ್ದುಕೊಳ್ಳಲಾಗಿದೆ ಎಂದ ಅವರು ಈ ಪ್ರಕರಣದಿಂದಾಗಿ ಬ್ಯಾಂಕ್ ಗೂ ಯಾವುದೇ ರೀತಿಯಲ್ಲು ನಷ್ಟವುಂಟಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಮೇಲೆ ದ. ಕ. ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡಂತೆ ಸಂಘವು 16 ಶಾಖೆಗಳನ್ನು ಹೊಂದಿದೆ. ವರ್ಷದಿಂದ ವರ್ಷಕ್ಕೆ ಬ್ಯಾಂಕ್ ನ ವ್ಯವಹಾರವು ಅಭಿವೃದ್ಧಿಪಥದಲ್ಲಿ ಸಾಗುತ್ತಿದ್ದು ಪ್ರಸಕ್ತ ವರ್ಷದಲ್ಲಿ 982.54 ಕೋ.ರೂ. ವ್ಯವಹಾರ ನಡೆಸಿ, 5.71ಕೋ. ರೂ. ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.17 ರಷ್ಟು ಡಿವಿಡೆಂಟ್ ವಿತರಿಸಲಾಗಿದೆ. ಸಂಘದ ವತಿಯಿಂದ ನಿರಂತರವಾಗಿ ಸೇವಾ ಕಾರ್ಯಗಳನ್ನು ನಡೆಸಲಾ ಗುತ್ತಿದೆ. ಸಂಘದ ಸದಸ್ಯರು,ಗ್ರಾಹಕರು ನಮ್ಮ ಆಡಳಿತ ಮಂಡಳಿಯ ಮೇಲೆ ವಿಶ್ವಾಸ, ನಂಬಿಕೆಯನ್ನಿರಿಸಿದ್ದಾರೆ ಎಂದು ಸಂಘದ ಉಪಾಧ್ಯಕ್ಷ ಪದ್ಮನಾಭ ವಿ. ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಅರುಣ್ ಕುಮಾರ್, ಜನಾರ್ದನ ಬೊಂಡಾಲ, ಶ್ರೀಮತಿ ಜಯಂತಿ, ರಮೇಶ್ ಸಾಲಿಯಾನ್, ರಮೇಶ್ ಬಿ.ಸಾಲಿಯಾನ್, ಮಚ್ಚೇಂದ್ರ ಸಾಲ್ಯಾನ್ ಉಪಸ್ಥಿತರಿದ್ದರು.