ಮಂಗಳೂರು: ಭೂಗತ ಪಾತಕಿ ಕಲಿ ಯೋಗೀಶನ ಸಹಚರನ ಸೆರೆ; ಮಾದಕ ವಸ್ತು ಎಂಡಿಎಂಎ ವಶಕ್ಕೆ

ಮಂಗಳೂರು, ಮಾ.17: ನಾನಾ ಪ್ರಕರಣಗಳಲ್ಲಿ ಭಾಗಿಯಾಗಿ ಸುಮಾರು 9 ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ಆರೋಪಿ ಭೂಗತ ಪಾತಕಿ ಕಲಿ ಯೋಗೀಶನ ಸಹಚರ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ನಿವಾಸಿ ಅಬ್ದುಲ್ ಅಶೀರ್ ಯಾನೆ ಸದ್ದು ಯಾನೆ ಸಾದು ಯಾನೆ ಮಾಯ (32) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡಿನಿಂದ ಮಾದಕ ವಸ್ತುಗಳನ್ನು ತಂದು ನಗರದ ನಂತೂರು ಪರಿಸರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ 5 ಲಕ್ಷ ರೂ.ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.
ಆರೋಪಿಯು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಕಲಿ ಯೋಗೀಶನ ಸಹಚರನಾಗಿದ್ದು, ಈ ಹಿಂದೆ ಪುತ್ತೂರು ನಗರದಲ್ಲಿನ ರಾಜಧಾನಿ ಜ್ಯುವೆಲರ್ಸ್ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರಿಂದ ಸೆರೆಯಾಗಿದ್ದ. ನ್ಯಾಯಾಲಯದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡು ಬಳಿಕ ವಿದೇಶದಲ್ಲಿ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ಈ ಹಿಂದೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಶಫೀಕ್ ಕೊಲೆ ಪ್ರಕರಣ, ಪೊಕ್ಸೊ ಪ್ರಕರಣ, ಕಳ್ಳತನ ಪ್ರಕರಣ ಹಾಗೂ ಕಾಸರಗೋಡು ನಗರ ಪೊಲೀಸ್ ಠಾಣೆಯಲ್ಲಿ ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣ ದಾಖಲಾಗಿತ್ತು.
ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ., ಎಸ್ಸೈಗಳಾದ ಶರಣಪ್ಪ ಭಂಡಾರಿ, ಸುದೀಪ್ ಎಂ.ವಿ, ನರೇಂದ್ರ ಹಾಗೂ ಎಸ್ಸೈಗಳಾದ ಮೋಹನ್ ಕೆ.ವಿ., ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.