ಮಂಗಳೂರು ಪೊಲೀಸ್ ಕಮಿಷನರ್ ಮೇಲಿನ ಆರೋಪಗಳ ಕುರಿತು ಸಿಎಂ ಗೆ ಬಹಿರಂಗ ಪತ್ರ
ಮಂಗಳೂರು: ನಗರ ಪೊಲೀಸ್ ಕಮಿಷನರ್ ಮೇಲಿನ ಆರೋಪಗಳ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳಾದ ತಾವು ಇದೇ 17 ನೇ ( ಜನವರಿ 2025) ತಾರೀಖಿನಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿ ಇರುತ್ತೀರಿ ಎಂದು ತಿಳಿಯಿತು. ಕೇವಲ ಐದು ದಿನಗಳ ಹಿಂದೆಯಷ್ಟೆ ಮಂಗಳೂರಿಗೆ ಬಂದಿದ್ದೀರಿ. ಸದ್ಯ ಬಲಾಢ್ಯರ, ಸಿರಿವಂತರ ಪ್ರತಿಷ್ಟೆ ಮೆರೆಯುವ ವೇದಿಕೆಯಾಗಿ ಮಾರ್ಪಟ್ಟಿರುವ ಖಾಸಗಿ ಕಂಬಳದ ಕಾರ್ಯಕ್ರಮದಲ್ಲಿ ಭಾಗಿಯಾದಿರಿ. ನೀವು ಮಂಗಳೂರಿಗೆ ಆಗಮಿಸುವ ಸಂದರ್ಭ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕಾರ್ಯಕರ್ತರು ನಿಮ್ಮ ಮುಂದೆ ಭಿತ್ತಿಪತ್ರ ಪ್ರದರ್ಶಿಸಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ರ ಕುರಿತು ಗಮನ ಸೆಳೆಯುವ ಪ್ರಯತ್ನ ಮಾಡಿದ ವಿಚಾರ ನಿಮ್ಮ ಗಮನಕ್ಕೆ ಬಂದಿರಬಹುದು ಎಂದು ಭಾವಿಸುತ್ತೇವೆ.
ಈಗ, ಅಧಿಕೃತ ಜಿಲ್ಲಾ ಪ್ರವಾಸದ ಸಂದರ್ಭ ಕೆಲವು ಮುಖ್ಯ ವಿಚಾರಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇವೆ.( ಜಿಲ್ಲೆಯ ರಾಜಕಾರಣ, ಇಲ್ಲಿನ ಕಾಂಗ್ರೆಸ್ ಪಕ್ಷದ ನಾಯಕತ್ವವು ಬಿಜೆಪಿಯೊಂದಿಗೆ ನಡೆಸುತ್ತಿರುವ ಹೊಂದಾಣಿಕೆಯ ಆಟ, ಕರಾವಳಿಯಲ್ಲಿ ಸರಕಾರದ ವೈಫಲ್ಯಗಳ ಕುರಿತು ಹೇಳಲು ಬಹಳಷ್ಟು ವಿಚಾರಗಳಿವೆ. ಅವೆಲ್ಲವನ್ನು ಅವಕಾಶ ಸಿಕ್ಕಾಗ ನಿಮ್ಮ ಮುಂದೆ ತರುತ್ತೇವೆ, ಸದ್ಯ ಪೊಲೀಸ್ ಕಮಿಷನರ್ ವಿಷಯಕ್ಕೆ ಮಾತ್ರ ಈ ಪತ್ರವನ್ನು ಸೀಮಿತಗೊಳಿಸಲು ತೀರ್ಮಾನಿಸಿದ್ದೇವೆ) ಮುಖ್ಯಮಂತ್ರಿಯಾದ ತಮ್ಮನ್ನು ಉದ್ದೇಶಿಸಿ ಈ ಪತ್ರ ಬರೆಯುವ ಎಲ್ಲಾ ನೈತಿಕತೆ ನಮಗೆ ಇದೆ ಎಂದು ಭಾವಿಸುತ್ತೇವೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂಬ ಉದ್ದೇಶದಿಂದ ನಿಮ್ಮ ಪರವಾಗಿ ದೃಢವಾಗಿ ನಿಂತವರು ನಾವು. ಕೋಮುವಾದಿ ಬಿಜೆಪಿಯನ್ನು ಅದರ ಭದ್ರ ನೆಲೆಯಲ್ಲಿ ಹಿಮ್ಮಟ್ಟಿಸಬೇಕು, ಜಾತ್ಯಾತೀತ ಪಕ್ಷಗಳಿಗೆ ಬಲತುಂಬ ಬೇಕು ಎಂಬ ಏಕೈಕ ಉದ್ದೇಶ ನಮ್ಮದಾಗಿತ್ತು. ಲೋಕಸಭಾ ಚುನಾವಣೆಯಲ್ಲೂ ನಮ್ಮ ನಿಲುವನ್ನು ಪುನರಾವರ್ತಿಸಿದೆವು. ಆ ಸಂದರ್ಭದಲ್ಲಿ ಜಾತ್ಯತೀತತೆಗೆ, ಪುರೋಗಾಮಿ ಚಿಂತನೆಗಳಿಗೆ ಹೆಚ್ಚು ನಿಕಟರಾದ ತಾವು (ಸಿದ್ದರಾಮಯ್ಯ) ನಾಯಕತ್ವವನ್ನು ವಹಿಸಿದ್ದು ನಮ್ಮ ನಂಬಿಕೆಗೆ ಬಲ ತುಂಬಿತ್ತು. ನಿಮ್ಮ ಮೇಲೆ ನಮ್ಮ ಬಳಗಕ್ಕೆ ಒಂದಿಷ್ಟು ಹೆಚ್ಚು ನಂಬಿಕೆ ಇತ್ತು.
ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ನಮಗೆಲ್ಲಾ ಬಹಳಷ್ಟು ನಿರಾಸೆಯಾಗಿದೆ. ಹಲವರಿಗೆ ಭ್ರಮ ನಿರಸನವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದೆ ಎಂಬ ಭಾವ ಮೂಡುವ ಯಾವ ಬೆಳವಣಿಗೆಗಳೂ ಘಟಿಸುತ್ತಿಲ್ಲ. ಬಿಜೆಪಿ ಆಡಳಿತವೇ ಮುಂದುವರಿದಿರುವ ಅನುಭವ ಇಲ್ಲಿನ ಜನಸಾಮಾನ್ಯರದ್ದು, ಅದು ನಮ್ಮದೂ ಹೌದು, ಕಾಂಗ್ರೆಸ್ ಪಕ್ಷದ ಬಹುತೇಕ ಕಾರ್ಯಕರ್ತರ ಅಭಿಪ್ರಾಯವೂ ಹೌದು. ಈ ಕುರಿತು ಬೇಕಾದಷ್ಟು ಘಟನೆಗಳನ್ನು ಉದಾಹರಣೆಯಾಗಿ ಕೊಡಬಹುದು, ನೀವು ಕೇಳಿದಲ್ಲಿ ಆಧಾರ ಸಹಿತವಾಗಿ ಖಂಡಿತಾ ವಿವರವಾಗಿ ನೀಡುತ್ತೇವೆ.
ಈಗ ವಿಷಯಕ್ಕೆ ಬರುತ್ತೇವೆ. ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲೆಯ ಜನಪರ, ಜಾತ್ಯಾತೀತ ಪಕ್ಷಗಳು, ಸಂಘಟನೆಗಳು ಜಂಟಿಯಾಗಿ ತಿಂಗಳಿನಿಂದ ಹಲವು ಹಂತಗಳಲ್ಲಿ ಹೋರಾಟಗಳನ್ನು ನಡೆಸುತ್ತಿವೆ. ಗೃಹ ಸಚಿವರನ್ನು, ಉಸ್ತುವಾರಿ ಸಚಿವರನ್ನು ಖುದ್ದಾಗಿ ಕಂಡು ದೂರು ನೀಡಿದ್ದೇವೆ. ಇದು ನಿಮ್ಮ ಗಮನಕ್ಕೂ ಬಂದಿರುತ್ತದೆ. ಆದರೆ, ಇಲ್ಲಿನ ಪಟ್ಟಭದ್ರ ಶಕ್ತಿಗಳು ನಿಮಗೆ ಈ ಕುರಿತು ತಪ್ಪು ಮಾಹಿತಿ ನೀಡಿರಬಹದು.
ಒಂದು ಸರಕಾರ ಜನರಿಗೆ ತಲುಪುವುದು ಅಧಿಕಾರಿಗಳ ಮೂಲಕ. ಅದರಲ್ಲೂ ಒಂದು ಜಿಲ್ಲೆಯ ಜಿಲ್ಲಾಧಿಕಾರಿ, ಪೊಲೀಸ್ ದಳದ ಮುಖ್ಯಸ್ಥ ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ಸಾಮಾನ್ಯವಾಗಿ ಸರಕಾರದ ಕುರಿತು ಜನ ಸಾಮಾನ್ಯರಲ್ಲಿ ಅಭಿಪ್ರಾಯಕ ರೂಪುಗೊಳ್ಳುತ್ತದೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಜನತೆಗೆ ರಾಜ್ಯ ಸರಕಾರದ ಕುರಿತು ದೊಡ್ಡ ರೀತಿಯ ನಿರಾಸೆ ಉಂಟಾಗಿದೆ. ಆ ರೀತಿಯ ಭಾವನೆ ಮೂಡುವುದರಲ್ಲಿ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಪಾತ್ರ ದೊಡ್ಡದು. ಕೆಳಹಂತದ ಅಧಿಕಾರಿಗಳು ಜನರೊಂದಿಗೆ ಕೆಟ್ಟದಾಗಿ ನಡೆದುಕೊಂಡಾಗ ಉನ್ನತ ಅಧಿಕಾರಿಯಾದ ಪೊಲೀಸ್ ಕಮಿಷನರ್ ಬಳಿಗೆ ದೂರು ನೀಡುವುದು ಕ್ರಮ, ಇಲ್ಲಿ ಮಾತ್ರ ಅದು ಸಾಧ್ಯವೇ ಇಲ್ಲ. ಕಮಿಷನರ್ ಅಗ್ರವಾಲ್ ತನ್ನನ್ನು ಭೇಟಿಯಾಗುವ ಜನಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ಜನಸಾಮಾನ್ಯರೊಂದಿಗೆ ನಗುಮುಖದೊಂದಿಗೆ ಮಾತಾಡುವ ಅಭ್ಯಾಸವನ್ನೆ ಹೊಂದಿಲ್ಲ. ಇವರಿಗೆ ಜನಚಳವಳಿಗಳು, ಜನ ಸಾಮಾನ್ಯರ ಪ್ರತಿಭಟನೆ ಹೋರಾಟಗಳ ಕುರಿತು ತೀರಾ ಅನಾದಾರ ಇದೆ. ಹಲವು ಸಲ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊಂದಿರುವ ಡಿಸಿಪಿ ಅಭಿಷೇಕ್ ಗೋಯಲ್ ಅವರ ನಡೆಯು ಇವರಿಗಿಂತ ಭಿನ್ನ ಏನಲ್ಲ. ಅದೇ ಸಂದರ್ಭ ದಂಧೆಕೋರರು, ಅವರ ಪರವಾಗಿ ದಲ್ಲಾಳಿತನ ಮಾಡುವವರೊಂದಿಗೆ ನಗುಮುಖದ ಸಂಬಂಧ ಹೊಂದಿದ್ದಾರೆ. ಕೋಮುವಾದಿ ಸಂಘಟನೆಗಳಿಗೂ ಕಮಿಷನರ್ ಕುರಿತು ದೂರುಗಳಿಲ್ಲ ಎಂಬುದು ಗಮನಾರ್ಹ. ಪಕ್ಕದ ಉಡುಪಿ ಜಿಲ್ಲೆಯಲ್ಲಿ ಕೋಮುವಾದಿ ಶಕ್ತಿಗಳು, ದಂಧೆಕೋರರು, ಕಾನೂನು ಭಂಜಕರು ಅಲ್ಲಿನ ಪೊಲೀಸ್ ವರಿಷ್ಟಾಧಿಕಾರಿಗಳ ಕುರಿತು ತೀರಾ ಅತೃಪ್ತರಾಗಿದ್ದಾರೆ, ಜನ ಸಾಮಾನ್ಯರು ಮೆಚ್ಚುಗೆ ನುಡಿಗಳನ್ನು ಆಡುತ್ತಾರೆ ಎಂಬುದು ಉಲ್ಲೇಖನೀಯ. ಮಂಗಳೂರಲ್ಲಿ ಮಾತ್ರ ಇದು ತದ್ವಿರುದ್ಧ.
ಕಮಿಷನರ್ ಅಗ್ರವಾಲ್ ಜಾತ್ಯಾತೀತ ಮೂಮೆಂಟ್ ಗಳು, ಜನಪರ ಹೋರಾಟಗಳು, ದುರ್ಬಲ ವಿಭಾಗಗಳ ಕುರಿತು ಹೊಂದಿರುವ ಅಸಹನೆಗಳಿಗೆ ಸಂಬಂಧಿಸಿ ಒಂದಿಷ್ಟು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ. ನಿಮ್ಮ ಸರಕಾರ ಅಧಿಕಾರ ಹಿಡಿದ ಪ್ರಥಮದಲ್ಲಿ ದಸರಾ ಹಬ್ಬದ ಸಂದರ್ಭ ಸಾರ್ವಜನಿಕ ಜಾತ್ರೆ ವ್ಯಾಪಾರದಲ್ಲಿ ಮುಸ್ಲಿಂ ವ್ಯಾಪಾರಿಗಳು ಮಳಿಗೆ ಇಡಬಾರದು ಎಂದು ಸಂಘಪರಿವಾರ ದಾಂಧಲೆ ಎಬ್ಬಿಸಿತು. ಹಿಂದು ವ್ಯಾಪಾರಿಗಳ ಅಂಗಡಿಗಳ ಮೇಲೆ ಬಲವಂತದಿಂದ ಕೇಸರಿ ಬಾವುಟ ಹಾರಿಸಿ, ಆ ಮಳಿಗೆಗಳಲ್ಲಿ ಮಾತ್ರ ವ್ಯಾಪಾರ ಮಾಡಬೇಕು ಎಂದು ಸಂವಿಧಾನ, ಕಾನೂನು ವಿರುದ್ದವಾದ ಕಾರ್ಯಾಚರಣೆ ನಡೆಸಿದವು. ಈ ಸಂದರ್ಭ ಪೊಲೀಸ್ ಕಮಿಷನರ್ ಮತೀಯ ಸಂಘಟನೆಗಳ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ, ಬದಲಿಗೆ, ಈ ಕುರಿತು ವಿರೋಧ ದಾಖಲಿಸಲು, ದೂರು ನೀಡಲು ತೆರಳಿದ ಮುಸ್ಲಿಂ ವ್ಯಾಪಾರಸ್ಥರು ಹಾಗೂ ಅವರ ಪ್ರತಿನಿಧಿಗಳೊಂದಿಗೆ ಕೆಟ್ಟದಾಗಿ ವರ್ತಿಸಿದರು. ಅದರ ತರುವಾಯ, ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲಿಂ ಮಹಿಳೆಯರ ಕುರಿತು ಅಶ್ಲೀಲ ಪದಗಳಿಂದ ನಿಂದಿಸಿ ಭಾಷಣ ಮಾಡಿದ ಸಂದರ್ಭ ಎಡ ಸಂಘಟನೆಗಳ ಕಾರ್ಯಕರ್ತರು ಅವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಸಾಂಕೇತಿಕ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಸಣ್ಣ ಪ್ರಮಾಣದ, ತೀರಾ ಸಾಂಕೇತಿಕವಾದ ಈ ಪ್ರತಿಭಟನೆಗೆ ಕಮಿಷನರ್ ಅಗ್ರವಾಲ್ ಅನುಮತಿ ನಿರಾಕರಿಸಿ, ಪ್ರತಿಭಟನೆಯಲ್ಲಿ ಭಾಗಿಯಾದ ಪ್ರತಿಯೊಬ್ಬ ಕಾರ್ಯಕರ್ತರ ಮೇಲೂ ಎಫ್ಐಆರ್ ದಾಖಲಿಸಿದರು. ಕ್ರೈಸ್ತ ಸಮುದಾಯಕ್ಕೆ ಸೇರಿದ ಸಂತ ಜರೋಜಾ ಸ್ಕೂಲ್ ನ ಮೇಲೆ ಸುಳ್ಳು ಆರೋಪ ಹೊರಿಸಿ ಮತೀಯ ದುರುದ್ದೇಶದ ಭಾಗವಾಗಿ ಬಿಜೆಪಿ ಶಾಸಕರುಗಳ ನೇತೃತ್ವದಲ್ಲಿ ಗೇಟ್ ಮುಂಭಾಗ ಸಂಘ ಪರಿವಾರದ ಕಾರ್ಯಕರ್ತರು ಇಡೀ ದಿನ ಪ್ರತಿಭಟನೆ ಹೆಸರಿನಲ್ಲಿ ದಬ್ಬಾಳಿಕೆ ನಡೆಸಿದಾಗಲೂ ಪೊಲೀಸ್ ಕಮಿಷನರ್ ಕನಿಷ್ಟ ಕ್ರಮಗಳನ್ನೂ ಜರುಗಿಸದೆ ಮೌನ ಪ್ರೇಕ್ಷಕರಾಗಿದ್ದರು.
ಕಳೆದ ಆರು ತಿಂಗಳಲ್ಲಂತೂ ಎಡಪಕ್ಷಗಳು, ಜನಪರ ಸಂಘಟನೆಗಳ ವಿರುದ್ದ ತೀರಾ ಹಗೆತನವನ್ನು ಸಾಧಿಸುತ್ತಾ ಬಂದಿದ್ದಾರೆ, ವಿನಾ ಕಾರಣ ಧರಣಿ, ಪ್ರತಿಭಟನೆಗಳಿಗೆ ಸತತವಾಗಿ ಅನುಮತಿ ನಿರಾಕರಿಸಿದ್ದಾರೆ. ಪ್ಯಾಲೆಸ್ತೀನ್ ನಲ್ಲಿ ಕದನ ವಿರಾಮ ಘೋಷಿಸಬೇಕು ಎಂಬ ಆಗ್ರಹದ ಮೇಲೆ ಎಡಪಕ್ಷಗಳು ಹಮ್ಮಿಕೊಂಡಿದ್ದ ಧರಣಿಗೆ ಕೊನೆಯ ಕ್ಷಣದಲ್ಲಿ ಕಾರಣವೇ ಇಲ್ಲದೆ ಅನುಮತಿ ನಿರಾಕರಿಸಿದ್ದಾರೆ, ಧ್ವನಿ ವರ್ಧಕ ಬಳಸದೆ, ಎಪ್ಪತ್ತರಷ್ಟು ಕಾರ್ಯಕರ್ತರು ಸೇರಿ ಸಾಂಕೇತಿಕವಾಗಿ ಸಭೆ ನಡೆಸಿದ್ದಕ್ಕೆ ಎಡಪಕ್ಷಗಳ 11 ಜನ ಪ್ರಮುಖ ನಾಯಕರ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ, ಆದರೆ, ಅದಾಗಿ ಹದಿನೈದು ದಿನಗಳಲ್ಲಿ ಅದೇ ಸ್ಥಳದಲ್ಲಿ ಸಂಘಪರಿವಾರಕ್ಕೆ ಬಾಂಗ್ಲಾ ದೇಶದ ಪ್ರಶ್ನೆಯ ಮೇಲೆ ರಸ್ತೆ ಪೂರ್ತಿ ಮುಚ್ಚಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದಾರೆ. ಕೋಮು ಉದ್ವಿಗ್ನತೆ ಕೆರಳಿಸುವ ಭಾಷಣಕ್ಕೂ ಅವಕಾಶ ಒದಗಿಸಿದ್ದಾರೆ. ಹಾಗೆಯೆ, ಕಾಂಗ್ರೆಸ್ ಪದಾಧಿಕಾರಿಗಳು ಒಳಗೊಂಡು ಸಮಾನ ಮನಸ್ಕರು ರಚಿಸಿಕೊಂಡಿರುವ "ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್" ರಾಷ್ಟ್ರೀಯ ಹೆದ್ದಾರಿಯ ಗಂಭೀರ ಸಮಸ್ಯೆಗಳು, ಬಿಜೆಪಿ ಸಂಸದ, ಶಾಸಕರ ವೈಫಲ್ಯವನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಸಾಮೂಹಿಕ ಧರಣಿಗೂ ಕೊನೆಯ ಕ್ಷಣದಲ್ಲಿ ವಿನಾ ಕಾರಣ ಅನುಮತಿ ನಿರಾಕರಿಸಿದರು, ಸಮಿತಿಯ ಸಂಚಾಲಕರ ಮನೆಗೆ ಪೊಲೀಸರನ್ನು ಕಳುಹಿಸಿ ಬೆದರಿಸಿದರು, ಕೊನೆಗೆ, ಧ್ವನಿವರ್ಧಕ ಬಳಸದೆ, ಟೆಂಟ್ ಹಾಕದೆ ಸಾಂಕೇತಿಕವಾಗಿ ನಡೆದ ಶಾಂತಿಯುತ ಧರಣಿಯ ಮೇಲೆ ಎಫ್ಐಆರ್ ಹಾಕಿದರು. ಈ ಎಫ್ಐಆರ್ ಗಳ ಮೇಲೆ ಬಹಳ ತರಾತುರಿಯಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನೂ ಸಲ್ಲಿಸಿದ್ದಾರೆ. ಈ ಆರೋಪ ಪಟ್ಟಿಯಲ್ಲಿ ಎಡಪಕ್ಷಗಳ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರ ಹೆಸರುಗಳನ್ನೂ ಸೇರಿಸಿದ್ದಾರೆ. ಹೀಗೆ ಹಲವು ಎಫ್ಐಆರ್ ಗಳನ್ನು ಹಾಕಿ ಜನಪರ, ಜಾತ್ಯಾತೀತ ಸಂಘಟನೆಗಳನ್ನು ಪೂರ್ತಿಯಾಗಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ, ಬಿಜೆಪಿ ಹಾಗೂ ಅದರ ಶಾಸಕರುಗಳಿಗೆ ಇಷ್ಟವಾಗದ್ದನ್ನು ಮಂಗಳೂರಿನಲ್ಲಿ ನಡೆಸಲು ಬಿಡುವುದಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ಆದರೆ, ಈ ಸರ್ವಾಧಿಕಾರಿ ನಡೆ, ದಬ್ಬಾಳಿಕೆ, ನಿರ್ಬಂಧಗಳು ಜಾತ್ಯಾತೀತ ಮೂಮೆಂಟ್ ಗಳಿಗೆ ಮಾತ್ರ ಸೀಮಿತವಾಗಿದೆ. ಸಂಘಪರಿವಾರ, ಬಿಜೆಪಿ ಪರಿವಾರಕ್ಕೆ ಮುಕ್ತ ಅವಕಾಶ ಒದಗಿಸಲಾಗಿದೆ. ಮೇಲಿನ ಘಟನೆಗಳ ಆಸುಪಾಸಿನಲ್ಲಿ ಎಬಿವಿಪಿ ಗೆ ಮಂಗಳೂರು ವಿ ವಿ ಗೆ ಮೆರವಣಿಗೆ ನಡೆಸಲು, ಅಲ್ಲಿ ದಾಂಧಲೆ ನಡೆಸಲು ಅನುಮತಿ ನೀಡಿದ್ದಾರೆ. ಸುರತ್ಕಲ್ ಮುಖ್ಯರಸ್ತೆಯನ್ನು ಬಂದ್ ಮಾಡಿ, ಯಾವ ಅನುಮತಿಯನ್ನೂ ಪಡೆಯದೆ ಬಿಜೆಪಿ ಶಾಸಕ ಭರತ್ ಶೆಟ್ಟಿ ಎರಡು ದಿನಗಳ ಕಾಲ ಆಹಾರಮೇಳ ನಡೆಸಲು ಪೂರ್ಣ ಪೊಲೀಸ್ ಭದ್ರತೆಯೊಂದಿಗೆ ಅವಕಾಶ ಒದಗಿಸಿದ್ದಾರೆ. ಈ ವಾರಾಂತ್ಯದಲ್ಲಿ ಮಂಗಳೂರು ನಗರದಲ್ಲಿ ನಿಯಮಗಳನ್ನು ಪೂರ್ತಿ ಉಲ್ಲಂಘಿಸಿ ನಗರದ ಮುಖ್ಯ ರಸ್ತೆಗಳನ್ನು, ಫುಟ್ ಪಾತ್ ಗಳನ್ನು ಅತಿಕ್ರಮಿಸಿ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ವ್ಯಾಪಾರಿ ಉದ್ದೇಶದ ಆಹಾರ ಮೇಳ ನಡೆಯಲಿದೆ. ಈ ಖಾಸಗಿ ಮೇಳಕ್ಕೂ ನಿಯಮಗಳನ್ನು ಗಾಳಿಗೆ ತೂರಿ ಈಗಾಗಲೆ ಅನುಮತಿ ಮಂಜೂರು ಮಾಡಿದ್ದಾರೆ, ಕಳೆದ ವರ್ಷವು ಅಪಾರ ಜನ ವಿರೋಧದ ಮಧ್ಯೆ ಅನುಮತಿ ಒದಗಿಸಿದ್ದಾರೆ. ಇದಲ್ಲದೆ ಹಲವು ದ್ವೇಷ ಭಾಷಣಗಳು, ಕೋಮುವಾದಿ ಗೂಂಡಾಗಿರಿಗಳಿಗೂ ಈ ಅವಧಿಯಲ್ಲಿ ಅವಕಾಶ ಒದಗಿಸಲಾಗಿದೆ. ಪುನೀತ್ ಕೆರೆಹಳ್ಳಿ ಎಂಬ ಅಪಾಯಕಾರಿ ಕೋಮು ಕ್ರಿಮಿನಲ್ ನನ್ನು ಮಂಗಳೂರಿಗೆ ಕರೆಸಿ ಸನ್ಮಾನ ನಡೆಸಿದಾಗಲೂ ಈ ಪೊಲೀಸ್ ಕಮಿಷನರ್ ಮೌನಕ್ಕೆ ಜಾರಿದ್ದರು.
ಇಷ್ಟು ಮಾತ್ರ ಅಲ್ಲದೆ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯನ್ನು ಕಮಿಷನರ್ ಸಾಹೇಬರು ಗ್ಯಾಂಬ್ಲಿಂಗ್ ಸಿಟಿ ಮಾಡಿ ಬಿಟ್ಟಿದ್ದಾರೆ. ಯಾವತ್ತೂ ಇಲ್ಲದಷ್ಟು ದಂಧೆಗಳು ಮಂಗಳೂರು ನಗರದಲ್ಲಿ ಹಾಡು ಹಗಲೇ ವಿಜೃಂಭಿಸುತ್ತಿದೆ. ಅಕ್ರಮ ಮರಳು ದಂಧೆಯ ಟಿಪ್ಪರ್ ಗಳು ನೂರಾರು ಸಂಖ್ಯೆಯಲ್ಲಿ ಓಡಾಡುತ್ತಿವೆ. ನಂಬರ್ ಪ್ಲೇಟ್ ಇಲ್ಲದೆಯೂ ಪೊಲೀಸರ ಸಮ್ಮುಖ ಈ ಟಿಪ್ಪರ್ ಗಳು ಅಕ್ರಮ ಮರಳು ಸಾಗಾಟ ನಡೆಸುತ್ತಿವೆ. ಜೀವನದಿಗಳನ್ನು ನಾಶ ಮಾಡುತ್ತಿವೆ. ಅನೈತಿಕ ಚಟುವಟಿಕೆಗಳ ಮಸಾಜ್ ಪಾರ್ಲರ್, ವೇಶ್ಯಾವಾಟಿಕೆ, ಜುಗಾರಿ, ಬೆಟ್ಟಿಂಗ್ ಮಾಫಿಯಾಗಳಿಗೆ ಈಗ ಮಂಗಳೂರು ಸ್ವರ್ಗ ಆಗಿಬಿಟ್ಟಿದೆ. ದಿನಕ್ಕೊಂದು ದಂಧೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಆಗುತ್ತಲೇ ಇದೆ. ಸರಕಾರದ ಗೌರವಕ್ಕೆ ಕುಂದುಂಟಾಗುತ್ತಲೆ ಇದೆ. ಈ ಕುರಿತು ಹಲವು ಹೋರಾಟಗಳು ನಡೆದರೂ ಕಮಿಷನರ್ ಅನುಪಮ್ ಅಗ್ರವಾಲ್ "ನಾನಿರೋದೆ ಹೀಗೆ" ಎಂದು ನಿರ್ಲಜ್ಜತೆ ಪ್ರದರ್ಶಿಸುತ್ತಿದ್ದಾರೆ.
ಕಮಿಷನರ್ ಅಗ್ರವಾಲ್ ನಡೆಗಳು ಮಂಗಳೂರಿನ ಪ್ರತಿಷ್ಟೆಗೆ ಅಪಾರ ಹಾನಿ ಉಂಟು ಮಾಡಿದೆ. ನಿಮ್ಮ ಸರಕಾರದ ಘೋಷಿತ ನೀತಿಗೆ ತದ್ವಿರುದ್ದವಾಗಿ ಪೊಲೀಸ್ ಇಲಾಖೆಯನ್ನು ಇವರು ಮುನ್ನಡೆಸುತ್ತಿದ್ದಾರೆ. ನಿಮ್ಮ ಮೇಲೆ ಅಪಾರ ನಂಬಿಕೆ, ಗೌರವ ಇಟ್ಟುಕೊಂಡಿದ್ದ, ಬಿಜೆಪಿ ಹಾಗೂ ಕೋಮುವಾದಿ ಪರಿವಾರದ ವಿರುದ್ದದ ಹೋರಾಟದಲ್ಲಿ ಜೊತೆಗಿದ್ದ ಚಳವಳಿಗಳು, ಜನಪರರು ಈ ಸರಕಾರದ ಕುರಿತು ಭ್ರಮನಿರಸನ ಹೊಂದುವಂತೆ ಮಾಡಿದ್ದಾರೆ. ಇದೆಲ್ಲದರಿಂದ ಜನ ಸಾಮಾನ್ಯರಲ್ಲೂ ಸರಕಾರದ ವಿರುದ್ಧ ಅಭಿಪ್ರಾಯ ರೂಪಣೆ ದಟ್ಟಗೊಳ್ಳುತ್ತಿದೆ. ನಿಮ್ಮದೇ ಪಕ್ಷದ ತಳಮಟ್ಟದ ಕಾರ್ಯಕರ್ತರಲ್ಲೂ ಅಸಮಾಧಾನ ಹೆಚ್ಚುತ್ತಿದೆ ಎಂಬುದನ್ನೂ ತಾವು ಗಮನಿಸಬೇಕು.
ಸರ್ವಾಧಿಕಾರಿ, ಕೋಮುವಾದಿ ಮನಸ್ಥಿತಿಯ, ಭ್ರಷ್ಟ ಆಡಳಿತದಿಂದ ಕುಖ್ಯಾತ ಆಗಿರುವ ಈ ಪೊಲೀಸ್ ಕಮಿಷನರ್ ರನ್ನು ವರ್ಗಾಯಿಸಬೇಕು, ಆರೋಪಗಳ ಕುರಿತು ತನಿಖೆ ನಡೆಸಬೇಕು ಎಂದು ನಾವೆಲ್ಲ ಜೊತೆಗೂಡಿ ಕಳೆದ ಎರಡು ತಿಂಗಳಿನಿಂದ "ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ" ಯಿಂದ ಸತತ ಹೋರಾಟ ನಡೆಸುತ್ತಿದ್ದೇವೆ. ಇದೆಲ್ಲಾ ಖಂಡಿತಾ ನಿಮಗೆ ತಿಳಿದಿರುತ್ತದೆ. ಆದರೆ, ಯಾವುದೆ ಕ್ರಮಗಳು ಜರುಗದಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಸರಕಾರಕ್ಕೆ ತೀರಾ ಕೆಟ್ಟ ಹೆಸರು ತರುತ್ತಿರುವ ಅಧಿಕಾರಿಯನ್ನು ರಕ್ಷಿಸಿ, ಬೆಂಬಲಿಸಿ ನಿಮ್ಮ ಸರಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜವಾಬ್ದಾರಿ ಹೊಂದಿದ ನಾಯಕರು ಏನನ್ನು ಸಾಧಿಸಲು ಹೊರಟಿದ್ದಾರೆ ಎಂಬುದು ನಮಗೆ ಅರ್ಥ ಆಗುತ್ತಿಲ್ಲ. ಈ ಎಲ್ಲಾ ಹಿನ್ನಲೆಯಲ್ಲಿ ಬಹಿರಂಗ ಪತ್ರವನ್ನು ಜಂಟಿ ವೇದಿಕೆಯ ಮೂಲಕ ತಮಗೆ ಬರೆಯುತ್ತಿದ್ದೇವೆ. ಒಂದು ವಾರದ ಅವಧಿಯಲ್ಲಿ ಎರಡನೆ ಭಾರಿಗೆ ಮಂಗಳೂರಿಗೆ ಆಗಮಿಸುತ್ತಿರುವ ತಾವು ಮೇಲಿನ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಜನವಿರೋಧಿ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ವಿರುದ್ಧ ಕ್ರಮಗಳನ್ನು ಜರುಗಿಸುತ್ತೀರಿ, ಕಮಿಷನರ್ ಮೇಲಿನ ಕ್ರಮಕ್ಕೆ ಒತ್ತಾಯಿಸಿ ಮತ್ತಷ್ಟು ಹೋರಾಟಗಳನ್ನು ನಡೆಸುವ ಅನಿವಾರ್ಯತೆ ಸೃಷ್ಟಿಸಲಾರಿರಿ ಎಂದು ನಂಬುತ್ತೇವೆ.