ಆಸ್ಕರ್ ಫೆರ್ನಾಂಡಿಸ್ ನನಗೆ ರಾಜಕೀಯ ಬದುಕು ಕೊಟ್ಟವರು: ರಾಜ್ಯಸಭಾ ಸದಸ್ಯ ಡಾ. ನಾಸಿರ್ ಹುಸೇನ್
ಮಂಗಳೂರು: ನನ್ನನ್ನು ರಾಜಕೀಯಕ್ಕೆ ಕರೆತಂದು ರಾಜಕೀಯ ಬದುಕನ್ನು ನೀಡಿದವರು ಮಾಜಿ ಕೇಂದ್ರ ಸಚಿವ ದಿವಂಗತ ಆಸ್ಕರ್ ಫೆರ್ನಾಂಡಿಸ್ ಎಂದು ರಾಜ್ಯಸಭಾ ಸದಸ್ಯರು-ವಿಪಕ್ಷ ಸಚೇತಕರು, ಎಐಸಿಸಿ ಕಾರ್ಯಕಾರಿಣಿ ಸದಸ್ಯ ಡಾ. ನಾಸಿರ್ ಹುಸೇನ್ ತಿಳಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದ.ಕ ಮತ್ತು ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಮಾವೇಶ ಮತ್ತು ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಬಳ್ಳಾರಿಯಲ್ಲಿ ವಿಧಾನ ಸಭೆ ಚುನಾವಣೆಯ ನಿಂತು ವಿಧಾನ ಸಭೆ ಪ್ರವೇಶಿಸಲು ಬಯಸಿದ್ದೆ. ಆದರೆ ಆಸ್ಕರ್ ಫೆರ್ನಾಂಡಿಸ್ ಅವರು ನನಗೆ ರಾಷ್ಟ್ರರಾಜಕಾರಣದಲ್ಲಿ ಬೆಳೆಯಲು ನೆರವು ನೀಡಿದರು ಎಂದರು.
ಇವತ್ತು ಕರಾವಳಿಯಲ್ಲಿ ಸ್ಪರ್ಧಾತ್ಮಕ ಕೋಮುವಾದ ನಡೆಯುತ್ತಿದೆ. ರಾಮಸೇನೆ, ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಮತ್ತಿತರ ಸಂಘಪರ ಸಂಘಟನೆಗಳು ಜನರನ್ನು ಪ್ರಚೋದನಾಕಾರಿ ಭಾಷಣ, ತಾರತಮ್ಯದಿಂದ ನೋಡುತ್ತಿರುವುದು ಒಂದಡೆಯಾದರೆ ಇನ್ನೊಂದು ಕಡೆ ಎಸ್‌ಡಿಪಿಐ ಸಂಘಟನೆ ಅಂತದ್ದೇ ಪ್ರಯತ್ನ ನಡೆಸುತ್ತಿದೆ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿದೆ. ಹೂಡಿಕೆ ಹರಿದು ಬರುತ್ತಿಲ್ಲ ಎಂದು ಹೇಳಿದರು.
ಕರಾವಳಿಯಲ್ಲಿ ಕೋಮು ಸಾಮರಸ್ಯ , ಸೌಹಾರ್ದತೆಯಿಂದ ಎಲ್ಲರೂ ಒಗ್ಗಟ್ಟಿನಿಂದ ಇದ್ದಾಗ ಇಲ್ಲಿ ಅಭಿವೃದ್ಧಿಯಾಗಿತ್ತು. ದೇಶಕ್ಕೆ ದ.ಕ. ಜಿಲ್ಲೆ ಅಭಿವೃದ್ಧಿಯಲ್ಲಿ ಮಾದರಿಯಾಗಿತ್ತು. ಈಗ ಮತ್ತೆ ಅದೇ ವಾತಾವರಣವನ್ನು ಕಲ್ಪಿಸಲು ನಾವು ಶ್ರಮಿಸಬೇಕಾಗಿದೆ ಎಂದು ನಾಸಿರ್ ಹುಸೇನ್ ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಅವರು ಸನ್ಮಾನಿಸುವ ಮೂಲಕ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದೀರಿ. ತಾವು ಕೊಟ್ಟ ಶಕ್ತಿಯ ದುರುಪಯೋಗ ಮಾಡುವುದಿಲ್ಲ ಎಂದು ನುಡಿದರು.
ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಮತ್ತು ವಿಧಾನ ಸಭಾ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ನಾಸಿರ್ ಹುಸೇನ್ ತಳಮಟ್ಟದಿಂದ ಹೋರಾಡಿ ಈ ಹಂತಕ್ಕೆ ಬಂದಿದ್ದಾರೆ. ಕೆಲಮಟ್ಟದಲ್ಲಿ ಸತತ ಮತ್ತು ಪ್ರಾಮಾಣಿಕ ಪ್ರಯತ್ನದ ಮೂಲಕ ಮೇಲೆ ಬಂದವರು ತಮ್ಮ ಸ್ಥಾನಕ್ಕೆ ನ್ಯಾಯ ಒದಗಿಸುತ್ತಾರೆ. ಹೀಗಾಗಿ ನಾಸೀರ್ ಹುಸೇನ್ ತಮ್ಮ ನೂತನ ಹುದ್ದೆಯಲ್ಲಿ ಯಶಸ್ವಿಯಾಗುತ್ತಾರೆ. ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಾರೆ ಎಂಬ ಭರವಸೆ ನನಗಿದೆ ಎಂದು ಹೇಳಿದರು.
ಕಾರ್ಯಾಧ್ಯಕ್ಷರಲ್ಲಿ ಅತ್ಯಂತ ಕ್ರೀಯಾಶೀಲವಾಗಿ ಪ್ರಾಮಾಣಿಕ ಕೆಲಸ ಮಾಡಿದವರು ಸಲೀಮ್ ಅಹ್ಮದ್. ಅವರು ಪ್ರಧಾನ ಮಂತ್ರಿ, ರಾಷ್ಟ್ರೀಯ ಅಧ್ಯಕ್ಷರು ಎಲ್ಲರ ಜೊತೆ ಕೆಲಸ ಮಾಡಿದ ಅನುಭವ ಅವರಲ್ಲಿದೆ. ಚುನಾವಣಾ ಪೂರ್ವದಲ್ಲಿ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗುವ ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಇಬ್ಬರೂ ಕೂಡಾ ನಿಜವಾಗಿಯೂ ಅಭಿನಂದನೆಗೆ ಅರ್ಹರು ಎಂದರು.
ಕರ್ನಾಟಕದಲ್ಲಿ ಬಹಳ ಹೋರಾಟ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇನ್ನೂ ನಮಗೆ ನಾನಾ ಸವಾಲು ಇದೆ. ನಾವು ಜನರ ಪರವಾಗಿ ಕೆಲಸ ಮಾಡುವುದರ ಮೂಲಕ ಅವರ ಮನಸ್ಸನ್ನು ಗೆಲ್ಲಬೇಕು. ನಮಗೆ ಶಾಂತಿ ಬೇಕು, ಸೌಹಾರ್ದತೆ ಬೇಕು, ಪ್ರೀತಿ, ವಿಶ್ವಾಸ ಎಲ್ಲವೂ ಬೇಕು. ಆದರೆ ನಮ್ಮ ಎದುರಾಳಿಗಳಿಗೆ ಅಭಿವೃದ್ಧಿ ಬೇಡ . ಭಾವನಾತ್ಮಕ ಮತ್ತು ಪ್ರಚೋಚನದಕಾರಿ ವಿಚಾರಗಳನ್ನು ಹಿಡಿದುಕೊಂಡು ಅವರು ರಾಜಕಾರಣ ಮಾಡುತ್ತಾರೆ ಎಂದರು.
ರಾಜಕೀಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್‌ನ ಶುಕ್ರದೆಸೆ ಕಂಡು ಬಂದಿದೆ. ಹಿಮಾಚಲ ಪ್ರದೇಶ, ಕರ್ನಾಟಕದಲ್ಲಿ ಜಯ ಗಳಿಸಿದೆ. ಮುಂದೆ ಪಂಚ ರಾಜ್ಯಗಳಲ್ಲೂ ಜಯ ಗಳಿಸಲಿದೆ ಎಂದು ನುಡಿದರು.
ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ನಾಸಿರ್ ಹುಸೇನ್ ಅವರು ವಿದ್ಯಾರ್ಥಿ ದೆಸೆಯಲ್ಲಿ ಎಡಪಂಥೀಯ ನಾಯಕರಾಗಿದ್ದರು. ಅವರು ಆಸ್ಕರ್ ಫೆರ್ನಾಂಡಿಸ್ ಪ್ರಭಾವಕ್ಕೆ ಒಳಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬಂದವರು. ಸಿಡಬ್ಲ್ಯುಸಿ ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಸ್ಥಾನ. ಅದನ್ನು ನಾಸಿರ್ ಹುಸೇನ್ ಪಡೆದಿದ್ದಾರೆ ಎಂದರು. ಸಲೀಮ್ ಅಹ್ಮದ್ ಅವರು ದಿನದ 24 ಗಂಟೆಯೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವರು ಎಂದು ಹೇಳಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ ನಾಸಿರ್ ಹುಸೇನ್ ಅವರಿಗೆ ರಾಜಕೀಯ ಬದುಕನ್ನು ಕಲ್ಪಿಸಿದ ವರು ಆಸ್ಕರ್ ಫೆರ್ನಾಂಡಿಸ್, ನಾಸೀರ್ ಪಕ್ಷದಲ್ಲಿ ಆನೇಕ ಸ್ಥಾನಮಾನಗಳನ್ನು ಪಡೆದು ರಾಜ್ಯಸಭಾ ಸದಸ್ಯರಾಗಿದ್ದಾರೆ. ಜಿಲ್ಲೆಯ ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸಲು ಸಹಾಯ ನೀಡುವಂತೆ ನಾಸಿರ್ ಹುಸೈನ್‌ನರಲ್ಲಿ ರೈ ಮನವಿ ಮಾಡಿದರು.
ಸಲೀಮ್ ಅಹ್ಮದ್ ಮುಖಂಡರು ಎನ್ನುವುದು ನಮಗೆ ಅನಿಸುವುದಿಲ್ಲ. ಅವರು ನಮಗೆ ಸ್ನೇಹಿತರಾಗಿ ಇದ್ದಾರೆ. ಅವರಿಗೆ ಮಂಗಳೂರು ಮೇಲಿನ ಪ್ರೀತಿ ಅಪಾರ ಎಂದರು. ನಾವು ಸೋತಿದ್ದೇವೆ. ಸತ್ತಿಲ್ಲ. ನಾವು ಜೀವಂತ ಇದ್ದೇವೆ, ಬಿಜೆಪಿಗೆ ಪೈಪೋಟಿ ಕೊಡುತ್ತೇವೆ. ನಮಗೆ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ನಿಮ್ಮಲ್ಲರ ಸಹಕಾರ ಬೇಕು ಎಂದು ಹೇಳಿದರು.
ಮಾಜಿ ಸಚಿವರಾದ ಅಭಯಚಂದ್ರ ಜೈನ್ ಹಾಗೂ ವಿನಯ ಕುಮಾರ್ ಸೊರಕೆ, ರಾಜ್ಯ ಸಭಾ ಮಾಜಿ ಸದಸ್ಯ ಬಿ. ಇಬ್ರಾಹೀಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ ಸೋಜ, ಮಾಜಿ ಶಾಸಕ ಜೆ.ಆರ್.ಲೋಬೊ, ಪಕ್ಷದ ಧುರೀಣರಾದ ಅಶೋಕ್ ಕುಮಾರ್ ಕೊಡವೂರು, ಜಿ.ಎ. ಬಾವಾ, ಯು.ಕೆ.ಮೋನು, ಇಬ್ರಾಹೀಂ ಕೋಡಿಜಾಲ್, ಇನಾಯತ್ ಅಲಿ , ಎಂ.ಎ.ಗಫೂರ್, ಕೃಪಾ ಆಳ್ವ, ವೆರೊನಿಕಾ ಕರ್ನೊಲಿಯಾ, ಸುಹಾನ ಆಳ್ವ, ಮಿಥುನ್ ರೈ, ಕೃಷ್ಣಪ್ಪ ಜಿ, ಶಾಲೆಟ್ ಪಿಂಟೊ, ಸುರೇಶ್ ಬಳ್ಳಾಲ್, ಬಿ.ಎಚ್.ಖಾದರ್, ಮಮತಾ ಗಟ್ಟಿ, ಕೃಪಾ ಆಳ್ವ, ಪದ್ಮರಾಜ್ ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷ ಶಾಹುಲ್ ಹಮೀದ್ ಸ್ವಾಗತಿಸಿದರು, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷ ಇಸ್ಮಾಯೀಲ್ ಅತ್ರಾಡಿ ವಂದಿಸಿದರು. ಬಿ.ಎ.ಮುಹಮ್ಮದ್ ಅಲಿ ಕಮ್ಮರಡಿ ಕಾರ್ಯಕ್ರಮ ನಿರೂಪಿಸಿದರು.