ಮಕ್ಕಳಿಗೆ ದೋಣಿ ಸ್ಪರ್ಧೆ ಏರ್ಪಡಿಸುವ ಮೂಲಕ ರಸ್ತೆ ದುರವಸ್ಥೆ ವಿರುದ್ಧ ಪ್ರತಿಭಟನೆ
ಮುರಿಯಾಳ - ಇಳಂತಿಲ ಸಂಪರ್ಕ ರಸ್ತೆ ದುರಸ್ತಿಯಾಗಿ ಅರ್ಧ ದಶಕವೇ ಕಳೆದಿದೆ!
ಉಪ್ಪಿನಂಗಡಿ : ಬೆಳ್ತಂಗಡಿ ತಾಲೂಕಿನ ಕರಾಯದ ಮುರಿಯಾಳ - ಇಳಂತಿಲ ಸಂಪರ್ಕ ರಸ್ತೆಯನ್ನು ಸರಿಪಡಿಸಲು ಗ್ರಾಮಸ್ಥರು ಶುಕ್ರವಾರ ಮಕ್ಕಳಿಗೆ ದೋಣಿ ಸ್ಪರ್ಧೆ ಏರ್ಪಡಿಸುವ ಮೂಲಕ ಪ್ರತಿಭಟನೆ ನಡೆಸಿದರು.
ರಸ್ತೆಯ ಗುಂಡಿಗಳಲ್ಲಿ ನಿಂತಿದ್ದ ನೀರಿನಲ್ಲಿ ಮಕ್ಕಳು ಕಾಗದದ ದೋಣಿ ಬಿಡುವ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮುರಿಯಾಳ - ಇಳಂತಿಲ ರಸ್ತೆಯ ಒಂದೂವರೆ ಕಿಲೋ ಮೀಟರ್ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ. ಈ ರಸ್ತೆ ದುರಸ್ತಿ ಮಾಡದೇ ಹಲವು ವರ್ಷಗಳೇ ಕಳೆದಿದೆ. ಈ ಬಗ್ಗೆ ಪಂಚಾಯತ್ ಗೆ, ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ನಾನು ಈ ರಸ್ತೆಯಲ್ಲಿ ತುಂಬಾ ಸಮಯದಿಂದ ಓಡಾಡುತ್ತಿದ್ದೇನೆ. ರಸ್ತೆಯಲ್ಲಿ ಗುಂಡಿಗಳು ತುಂಬಿವೆ. ರೈತರು ಡಿಪೋ ಗಳಿಗೆ ಹಾಲು ತುಂಬಲು ಇದೇ ರಸ್ತೆ ಬಳಸುತ್ತಿದ್ದಾರೆ. ಹಲವು ಬಾರಿ ಹಾಲಿನ ಕ್ಯಾನ್ ಗಳು ರಸ್ತೆಯಲ್ಲಿ ಬಿದ್ದು ಹಾಲಿನ ಅಭಿಷೇಕವಾಗಿದೆ. ಈ ರಸ್ತೆಯನ್ನು ಬೇಗ ಸರಿಪಡಿಸಿದರೆ ಜನರಿಗೆ ಅನುಕೂಲವಾಗಲಿದೆ ಎಂದು ಪಶುವೈದ್ಯಕೀಯ ಸಿಬ್ಬಂದಿ ಸಂತೋಷ್ ಹೇಳಿದರು.
ಮದರಸಾ ಅಧ್ಯಾಪಕ ಸಿದ್ದೀಕ್ ಫೈಝಿ ಮಾತನಾಡಿ, ಈ ರಸ್ತೆಯಲ್ಲಿ ಶಾಲಾ ಕಾಲೇಜಿಗೆ ಹೋಗುವ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಸ್ಥಳೀಯ ನಿವಾಸಿಗಳಿಗೆ ಇದೇ ರಸ್ತೆ ಸಂಪರ್ಕ ಕೊಂಡಿಯಾಗಿದೆ. ಇಲ್ಲಿ ವಾಹನದಲ್ಲಿ ಹೋಗುವುದು ಬಿಡಿ, ನಡೆದಾಡಲೂ ಸಾಧ್ಯವಿಲ್ಲ. ಆದಷ್ಟು ಬೇಗ ಈ ರಸ್ತೆಯನ್ನು ಸರಿಪಡಿಸಿ ಎಂದು ಮನವಿ ಮಾಡಿದರು.
ರಸ್ತೆ ತುಂಬಾ ಹದಗೆಟ್ಟಿರುವುದರಿಂದ ಹತ್ತು ನಿಮಿಷದ ದಾರಿಗೆ ಮುಕ್ಕಾಲು ಗಂಟೆ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಟೋ ರಿಕ್ಷಾದಲ್ಲಿ ಪ್ರಯಾಣಿಸಲು ಬಹಳ ಕಷ್ಟದ ಸ್ಥಿತಿ ಇದೆ. ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಕರೆದೊಯ್ಯುಲು ತುಂಬಾ ಕಷ್ಟ. ನಿತ್ಯ ವಾಹನಗಳು ಸಂಚರಿಸುವ ಈ ರಸ್ತೆಯನ್ನು ಬೇಗ ಸರಿಪಡಿಸಿ ಎಂದು ರಿಕ್ಷಾ ಚಾಲಕ ಟೋನಿ ಲೋಬೋ ಹೇಳಿದರು.
ಐದು ವರ್ಷಗಳ ಹಿಂದೆ ಈ ರಸ್ತೆ ರಿಪೇರಿ ಮಾಡಿದ್ದರು. ಆ ಬಳಿಕ ಇದರತ್ತ ಯಾರೂ ತಿರುಗಿ ನೋಡಿಲ್ಲ. ಪಂಚಾಯತ್ ಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ರಸ್ತೆಯಲ್ಲಿ ಮಕ್ಕಳೂ ನಡೆದಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ಅಝೀಝ್ ಫೈಝಿ ಹೇಳಿದರು.