ಅಕ್ರಮ ಬಂಧನಗಳ ವಿರುದ್ಧ ಸಾರ್ವಜನಿಕ ಧ್ವನಿ ಮೊಳಗಬೇಕು: ಹಿರಿಯ ಸಾಹಿತಿ ಶಿವಸುಂದರ್
ಉಮರ್ ಖಾಲಿದ್ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ
ಮಂಗಳೂರು: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಅನೀತಿ, ಅಕ್ರಮಗಳನ್ನು ಪ್ರಶ್ನಿಸುವವರನ್ನು ಎಗ್ಗಿಲ್ಲದೆ ಅಕ್ರಮ ಬಂಧನದಲ್ಲಿರಿಸುವ ಮೂಲಕ ಪ್ರಜಾಪ್ರಭುತ್ವವನ್ನು ಅಣಕಿಸುತ್ತಿವೆ. ಜಾಮೀನಿಗೆ ಅರ್ಹವಾಗಿದ್ದರೂ ಅವರಿಗೆ ಜಾಮೀನು ಸಿಗದಂತೆ ನೋಡಿಕೊಳ್ಳುತ್ತಿವೆ. ಈ ಅವ್ಯವಸ್ಥೆಯ ವಿರುದ್ಧ ಸಾರ್ವಜನಿಕ ಧ್ವನಿ ಮೊಳಗಬೇಕಾಗಿದೆ ಎಂದು ʼವಾರ್ತಾಭಾರತಿʼಯ ಅಂಕಣಕಾರ, ಸಾಹಿತಿ ಶಿವಸುಂದರ್ ಹೇಳಿದರು.
ಸಿಟಿಝನ್ ಫಾರಂ ಫಾರ್ ಮ್ಯಾಂಗಳೋರ್ ಡೆವಲಪ್ಮೆಂಟ್ ವತಿಯಿಂದ ಉಮರ್ ಖಾಲಿದ್ ಅಕ್ರಮ ಬಂಧನದ ಬಗ್ಗೆ ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯ ಸಹಕಾರಿ ಸದನದ ಶಾಂತಿ ಪ್ರಕಾಶನ ಹಾಲ್‌ನಲ್ಲಿ ಶುಕ್ರವಾರ ನಡೆದ ಉಮರ್ ಖಾಲಿದ್ ಕುರಿತು ಸಾಕ್ಷ್ಯ ಚಿತ್ರ “Prisoner No 626710 is present” ಪ್ರದರ್ಶನದ ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಮರ್ ಖಾಲಿದ್ 23 ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇನ್ನೂ ಆ ಅರ್ಜಿಯ ವಿಚಾರಣೆ ಆಗಿಲ್ಲ. ಸರಕಾರದ ವಿರುದ್ಧ ಧ್ವನಿ ಎತ್ತಿದ ಇನ್ನೂ ಹಲವರನ್ನು ಅಕ್ರಮವಾಗಿ ಜೈಲನಲ್ಲಿರಿಸಲಾಗಿದೆ. ಈ ಪೈಕಿ ಜಾಮೀನು ಪಡೆಯಲು 62 ಬಾರಿ ಅರ್ಜಿ ಸಲ್ಲಿಸಿದವರೂ ಇದ್ದಾರೆ. ಮುಸ್ಲಿಮರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ ವ್ಯಕ್ತಿಗೆ ಎರಡೇ ವಾರದಲ್ಲಿ ಜಾಮೀನು ಲಭಿಸಿದ ಉದಾಹರಣೆಯೂ ಈ ದೇಶದ ನ್ಯಾಯ ವ್ಯವಸ್ಥೆಯಲ್ಲಿದೆ. ಈ ಅನ್ಯಾಯ, ಅಕ್ರಮದ ವಿರುದ್ಧ ನಿರಂತರ ಹೋರಾಟ ಮಾಡಬೇಕು. ದೇಶದ ಜೈಲುಗಳು ತುಂಬಬೇಕು. ಹೀಗೆ ಸಾರ್ವಜನಿಕವಾಗಿ ಧ್ವನಿ ಎತ್ತದಿದ್ದರೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸದೆ ಇದ್ದರೆ ನ್ಯಾಯ ಮರೀಚಿಕೆಯಾದೀತು ಎಂದು ಶಿವಸುಂದರ್ ಅಭಿಪ್ರಾಯಪಟ್ಟರು.
ಈ ಸಂದರ್ಭ ಉಪನ್ಯಾಸಕಿ ಪರಿನಿತ ಶೆಟ್ಟಿ, ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್, ಎಸ್‌ಐಒ ಸಂಘಟನೆಯ ಹಯಾನ್ ಕುದ್ರೋಳಿ, ಸಮೀನಾ ಅಪ್ಸಾನ, ಶೌಕತ್ ಅಲಿ, ಸಂಶೋಧನಾ ವಿದ್ಯಾರ್ಥಿ ಝೈಬುನ್ನಿಸಾ ಮತ್ತಿತರರು ಉಪಸ್ಥಿತರಿದ್ದರು.