ಶೋಷಣಾರಹಿತ ಸಮಾಜ ನಿರ್ಮಾಣ ಸಾಹಿತ್ಯದ ಉದ್ದೇಶ: ಡಾ.ಬಿ.ಪ್ರಭಾಕರ ಶಿಶಿಲ
ದ.ಕ. ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನ

ಮಂಗಳೂರು,ಫೆ.21 ,(ಬಿಎಂ.ಇದಿನಬ್ಬ ವೇದಿಕೆ): ಸರ್ವ ಸಮಾನತೆಯ ಶೋಷಣಾರಹಿತ ಸಮಾಜ ನಿರ್ಮಾಣ ಸಾಹಿತ್ಯದ ಉದ್ದೇಶವಾಗಿದೆ ಎಂದು ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲ ತಿಳಿಸಿದ್ದಾರೆ.
ಅವರು ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿರುವ 2 ದಿನಗಳ ದ.ಕ. ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಾಹಿತ್ಯ ಅಸಮಾನತೆ ಮತ್ತು ಅಜ್ಞಾನದ ವಿರುದ್ಧ ಹೋರಾಡುತ್ತದೆ. ಮಾನವನ ಇತಿಹಾಸದುದ್ದಕ್ಕೂ ಎದ್ದು ಕಾಣುವುದು ಸಮಾಜದ ಶೋಷಣಾ ಪ್ರವೃತ್ತಿ ಮತ್ತು ಅದರಿಂದುಂಟಾದ ಅಸಮಾನತೆ. ಇದಕ್ಕೆ ಹಲವಾರು ಸ್ವರೂಪಗಳಿವೆ. ಲಿಂಗ ತಾರತಮ್ಯ. ಭಾಷಾ ತಾರತಮ್ಮ, ಸಾಮಾಜಿಕ ತಾರತಮ್ಯ, ಧಾರ್ಮಿಕ ತಾರತಮ್ಯ, ಆರ್ಥಿಕ ಆಸಮಾನತೆ, ಪ್ರಾದೇಶಿಕ ಅಸಮತೋಲನ, ಸಂಬಂಧಗಳ ತಾರತಮ್ಯ ಇತ್ಯಾದಿಯಾಗಿ ಶೋಷಣೆಗೆ ಹಲವು ಮುಖಗಳಿವೆ. ಸಮಾಜದ ಶೋಷಣಾ ಪ್ರವೃತ್ತಿಯನ್ನು ಗುರುತಿಸಿ. ಅದರ ನಿವಾರಣೆಗೆ ಯತ್ನಿಸುವುದು ಸಾಹಿತ್ಯ ನಿರ್ಮಾಣದ ಉದ್ದೇಶವಾಗಿರುತ್ತದೆಂದು ಕನ್ನಡ ಸಾಹಿತ್ಯ ಚರಿತ್ರೆಯ ಅವಲೋಕನದಿಂದ ತಿಳಿದು ಬರುತ್ತದೆ ಎಂದವರು ಹೇಳಿದರು.
ಕೋಮುವಾದ ಸೃಷ್ಟಿಸಿದ ಸವಾಲುಗಳು
1990ರ ದಶಕದ ಆರಂಭದಿಂದ ನಮ್ಮ ದೇಶ ಐದು ಆತಂಕಕಾರಿ ಬೆಳವಣಿಗೆಗೆ ಸಾಕ್ಷಿಯಾಗಿದೆ. ಸಾಮಾಜಿಕವಾಗಿ ಸಮಸ್ತ ಭಾರತ ದೇಶ ಪ್ರತಿಗಾಮೀ ಮೌಲ್ಯಗಳ ತೆಕ್ಕೆಗೆ ಜಾರಿದೆ. ಇದು ಕಲೆ ಮತ್ತು ಸಾಹಿತ್ಯಗಳನ್ನು ಹಿಂದಕ್ಕೆ ಸರಿಸಿ, ಜಾತಿಯನ್ನು ಮುನ್ನೆಲೆಗೆ ತಂದು ನಿಲ್ಲಿಸಿದೆ.ಜಾಗತೀಕರಣ ಎಂಬ ಹೆಸರಲ್ಲಿ ಕತ್ತು ಕೊಯ್ಯುವ ಸ್ವಾರ್ಥವು ಆರ್ಥಿಕ ಮೌಲ್ಯವಾಗಿ ಬಿಟ್ಟಿದೆ ಎಂದು ಡಾ.ಬಿ.ಪ್ರಭಾಕರ ಶಿಶಿಲ ಹೇಳಿದರು.
ರಾಜಕೀಯವು ಕೋಮು ದ್ವೇಷವನ್ನು ಅವಲಂಬಿಸಿದೆ. ರಾಜ್ಯದ ಬಹುತೇಕ ರಾಜಕಾರಣಿಗಳು ಪುರೋಹಿತರ, ಜ್ಯೋತಿಷಿಗಳ ಮತ್ತು ಮಂತ್ರವಾದಿಗಳ ಕೈಗೊಂಬೆಗಳಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುತ್ತಿದ್ದಾರೆ.
ಧರ್ಮವು ರಾಜಕೀಯ ಸ್ವರೂಪವನ್ನು ಪಡೆದು ಪರಧರ್ಮ ಸಹಿಷ್ಣುತೆಯನ್ನು ನಾಶ ಮಾಡಿದೆ. ಧರ್ಮ ಪುನರುತ್ಥಾನದ ಹೆಸರಲ್ಲಿ ಕೋಮುವಾದ ತಲೆ ಎತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಹುಟ್ಟಿದ್ದಾಗಲೀ, ಕಟ್ಟಿದ್ದಾಗಲೀ ಸಾಹಿತ್ಯಕ್ಕೊಂದು ನಿರ್ದಿಷ್ಟ ಉದ್ದೇಶ ಇದ್ದೇ ಇರುತ್ತದೆ. ಆದಿಕವಿ ಪಂಪ, ವಿಕ್ರಮಾರ್ಜುನ ವಿಜಯ ಮತ್ತು ಆದಿ ಪುರಾಣವೆಂಬ ಕೃತಿಗಳನ್ನು ರಚಿಸಿದ್ದಾರೆ. ಬೆಳಗುವೆ ನಿಲ್ಲಿ ಲೌಕಿಕಮಂ ಅಲ್ಲಿ ಜಿನಾಗಮಮಂ ಎಂದು ಬಹಿರಂಗವಾಗಿ ತನ್ನ ಉದ್ದೇಶವನ್ನು ಹೇಳಿಕೊಂಡ, ಶುದ್ಧ ಸಾಹಿತ್ಯವೆಂದು ಮಾತಾಡುವವರು ಕೂಡಾ ಒಂದು ಬದ್ಧತೆಯಿಂದಲೇ ಬರೆಯುತ್ತಾರೆ ಎಂದವರು ನುಡಿದರು.
ಕನ್ನಡ ಸಾಹಿತ್ಯಕ್ಕೆ ಸುಮಾರು ಎರಡು ಸಹಸ್ರಮಾನಗಳ ಇತಿಹಾಸ ಇದೆ. ಭಾಷೆಗೆ ಅಕ್ಷರದ ರೂಪ ನೀಡಿದರೆ ಅದು ಸಾಹಿತ್ಯವಾಗುತ್ತದೆ, ಸಾಹಿತ್ಯದಲ್ಲಿ ಸ್ಕೂಲವಾಗಿ ಕಟ್ಟುವ ಸಾಹಿತ್ಯ ಮತ್ತು ಹುಟ್ಟುವ ಸಾಹಿತ್ಯ ಎಂದು ಎರಡು ವಿಧ. ಕಟ್ಟುವ ಸಾಹಿತ್ಯ ಕಷ್ಟಪಟ್ಟು ಸೃಷ್ಟಿಸುವ ಸಾಹಿತ್ಯವಾಗಿರುತ್ತದೆ ಎಂದವರು ತಿಳಿಸಿದ್ದಾರೆ.
ಕೆಲವು ವರ್ಷಗಳಿಂದ ದೇಶದಲ್ಲಿ ಸಂವಿಧಾನ ಬದಲಾವಣೆಯ ಕೂಗು ಹೆಚ್ಚಿವೆ. ಹಾಗೇ ಕೂಗು ಹಾಕುವುದಕ್ಕೂ ಸಂಸ್ಕೃತಿಯ ಏಕೀಕರಣಕ್ಕೂ ಸಂಬಂಧವಿದೆ. ಸಂವಿಧಾನದ ಪ್ರಸ್ತಾವನೆಯ ಸಮಾಜವಾದಿ ಮತ್ತು ಜಾತ್ಯತೀತ ಎಂದರೆ ಎಲ್ಲಾ ಧರ್ಮಗಳಿಗೆ ಸಮಾನ ಸ್ಥಾನ ಸಂವಿಧಾನ ಬದಲಾ ಯಿಸಬೇಕೆಂದು ಹೊರಟವರು ಅದನ್ನೊಂದು ರಾಜಕೀಯ ಪಕ್ಷದ ಗುಪ್ತ ಕಾರ್ಯ ಸೂಚಿಯನ್ನಾಗಿಸಿಕೊಂಡಿದ್ದಾರೆ. ಜಾತ್ಯತೀತ ಎಂಬ ಪದಗಳು ಕೋಮುವಾದಿಗಳಿಗೆ ಅಜೀರ್ಣವಾಗಿದೆ. ಸಮಾಜವಾದವೆಂದರೆ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಇದನ್ನು ಒಪ್ಪದವರಿಂದ ಸಂವಿಧಾನದ ಬದಲಾವಣೆಯ ಕೂಗು ಕೇಳಿಬರುತ್ತಿದೆ ಇದರಿಂದ ದೇಶದ ಬಹುತ್ವಕ್ಕೆ ಅಪಾಯವಿದೆ ಎಂದವರು ವಿಷಾದ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಚರಿತ್ರೆಯು ವ್ಯವಸ್ಥೆಯ ವಿರುದ್ಧದ ಸತತ ಪ್ರತಿಭಟನೆ ಎಂದು ಪೂರ್ಣಚಂದ್ರ ತೇಜಸ್ವಿಯವರು ಹೇಳಿದ್ದಾರೆ. ಇದಕ್ಕೆ ಉದಾಹರಣೆ ಪಂಪನಲ್ಲಿ ಸಿಗುತ್ತದೆ.
ಕುಲಂ ಕುಲಮಲ್ತು ಛಲಂ ಕುಲಂ ಅಣ್ಣುಕುಲಂ ಅಭಿಮಾನ ಕುಲಂ ಎಂದು ಪಂಪ ಕುಲಕ್ಕೆ ತನ್ನದೇ ಆದ ವ್ಯಾಖ್ಯಾನವನ್ನು ನೀಡಿದ್ದಾನೆ. ಅವನು ನಿಜವಾದ ಮನುಷ್ಯರು ಯಾರು ಎಂಬ ಪ್ರಶ್ನೆಗೆ ಉತ್ತರಿಸುತ್ತಾನೆ. ಮನುಜಕುಲಂ ತಾನೊಂದೆ ವಲಂ ಎಂದು ಪ್ರಶ್ನಿಸಿದ್ದಾನೆ. ಇಪ್ಪತ್ತೊಂದನೆಯ ಈ ಶತಮಾನದಲ್ಲೂ ಈ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.
ವಚನ ಚಳವಳಿ ಕನ್ನಡ ಸಾಹಿತ್ಯದ ಇತಿಹಾಸದಲ್ಲೊಂದು ವಿಸ್ಮಯದ ಮೈಲಿಗಲ್ಲು. ಕನ್ನಡದಲ್ಲೆಂದೇಕೆ? ವಿಶ್ವದ ಯಾವುದೇ ಸಾಹಿತ್ಯ ಪ್ರಕಾರದಲ್ಲೂ ಇಂಥದೊಂದು ಚಳುವಳಿ ನಡೆದಿಲ್ಲ. ಬಸವಣ್ಣ ಅನುಭವ ಮಂಟಪವನ್ನು ಕಟ್ಟಿ ಜಾತಿ ವಿನಾಶ ಕಾರ್ಯಕ್ರಮದಲ್ಲಿ ತಳ ಸಮುದಾಯಗಳ ಪಾಲ್ಗೊಳ್ಳುವಿಕೆಯಾಗುವಂತೆ ನೋಡಿಕೊಂಡರು.ಸಮಾಜದ ತಳ ಸಮುದಾಯಗಳ ನೋವಿಗೆ ಅಭಿವ್ಯಕ್ತಿ ನೀಡುವ ಪ್ರಯತ್ನವನ್ನು ಅವನು ಮಾಡಿದಬಸವಣ್ಣ ಮಾಡಿಸಿದ ಬ್ರಾಹ್ಮಣ-ದಲಿತ ಅಂತರ್ಜಾತಿ ವಿವಾಹ, ಆ ಕಾಲದ ಬಹುದೊಡ್ಡ ಕ್ರಾಂತಿ. ಬಸವಣ್ಣನ ಹಾಗೆ ವ್ಯವಸ್ಥೆಯನ್ನು ಧಿಕ್ಕರಿಸಿದವರು ಕನ್ನಡ ಸಾಹಿತ್ಯದಲ್ಲಿ ಬೇರೊಬ್ಬರಿಲ್ಲ.ಇವೆಲ್ಲಾ ಸಾಮಾಜಿಕ ಅಸಮಾನತೆಯ ವಿರುದ್ಧದ ಹೋರಾಟವಾಯಿತು. ತಳ ಸಮುದಾಯದವರು ಆರ್ಥಿಕವಾಗಿ ಕೆಳವರ್ಗಕ್ಕೆ ಸೇರಿದವರೆಂದು ಬಸವಣ್ಣ ಕಂಡುಕೊಂಡಿದ್ದ. ಅದುದರಿಂದ ಅವನು ಎಲ್ಲಾ ಶ್ರಮಗಳಿಗೆ ಸಮಾನ ಗೌರವವುಳ್ಳ ಕಾಯಕ ತತ್ವವನ್ನು ಪ್ರತಿಪಾದಿಸಿದ. ದುಡಿದೇ ಬದುಕು ಎಂದ. ಸಂಪತ್ತನ್ನು ಕೂಡಿಡುವುದು ತಪ್ಪು ಎಂದು ಸಾರಿದ ಬಸವಣ್ಣನಿಂದ ಸ್ಫೂರ್ತಿ ಪಡೆದು ಅಕ್ಕಮಹಾದೇವಿ ಪುರುಷ ಪ್ರಧಾನ ವ್ಯವಸ್ಥೆಯನ್ನೇ ಧಿಕ್ಕರಿಸುತ್ತಾಳೆ.ಇಡೀ ಶರಣ ಸಾಹಿತ್ಯ ಸಮಷ್ಟಿಯಾಗಿ ವ್ಯವಸ್ಥೆಯನ್ನು ತಿರಸ್ಕರಿಸಿದ್ದು, ಆ ಬಳಿಕದ ಕವಿಗಳಿಗೆ ಪ್ರೇರಣೆಯಾಯಿತು.
ಕುಲ ಕುಲಕುಲವೆನ್ನುವವರ ಬಗ್ಗೆ ಕನಕದಾಸರು ಕುಲ ಪ್ರತಿಷ್ಠೆಯ ಹಮ್ಮನ್ನು ಧಿಕ್ಕರಿಸುತ್ತಾರೆ. ದೇವರು ಎಂಬ ಪರಿಕಲ್ಪನೆ ಜಾತಿ, ಕುಲ, ವರ್ಣ ವ್ಯತ್ಯಾಸಗಳಿಗೆ ಮತ್ತು ಪುರೋಹಿತಶಾಹಿ ಶೋಷಣೆಗೆ ಕಾರಣವಾಗಿದೆ ಎಂದು ಭಾವಿಸಿದ ಸಾಹಿತಿಗಳೂ ಇದ್ದಾರೆ.
ನೂರು ದೇವರನ್ನೆಲ್ಲಾ ನೂಕಾಚೆ ದೂರ ಎಂದು ಕುವೆಂಪು ಹೇಳಿದರೆ ಬಾಳ್ವೆಯೇ ಬೆಳಕು ಬೇರೆ ದೇವರಿಲ್ಲ ಎಂದು ಕಾರಂತರು ಹೇಳಿದ್ದಾರೆ. ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಎಂದು ಜಿ.ಎಸ್. ಶಿವರುದ್ರಪ್ಪ, ಕಲ್ಲದೇವರ' ಎಲ್ಲಿ ಕೂರಿಸಿದರೇನು ಎಂದು ಗೋಪಾಲಕೃಷ್ಣ ಅಡಿಗ ಬರೆಯುತ್ತಾರೆ. ನಿರಂಜನರ ಮೃತ್ಯುಂಜಯ, ಚಿರಸ್ಮರಣೆ ಕಾದಂಬರಿಗಳು ಮತ್ತು ಕೊನೆಯ ಗಿರಾಕಿ ಎಂಬ ಸಣ್ಣ ಕತೆ ವಿಶ್ವ ಸಾಹಿತ್ಯದಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕಾಗಿರುವ ರಚನೆಗಳು.
ವ್ಯವಸ್ಥೆಯ ವಿರುದ್ಧ ಅತೀ ಹೆಚ್ಚಿನ ಪ್ರತಿಭಟನೆ ಬಂದದ್ದು ಬಂಡಾಯ ಮತ್ತು ದಲಿತ ಸಾಹಿತಿಗಳಿಂದ ದೇವನೂರು ಮಹಾದೇವ, ಕುಂ. ವೀರಭದ್ರಪ್ಪ, ಕವಿ ಸಿದ್ದಲಿಂಗಯ್ಯ ಆದಿಯಾಗಿ ಅನೇಕರು ಅಸಮಾನತೆಯನ್ನು ಪ್ರಶ್ನಿಸಿ ಬದಲಾವಣೆಗೆ ಕರೆಕೊಟ್ಟಿದ್ದನ್ನು ಗಮನಿಸಬಹುದು. ಬಂಡಾಯ ಮತ್ತು ದಲಿತ ಸಾಹಿತಿಗಳಿಗೆ ಬಸವಣ್ಣ ಮತ್ತು ಕಾರ್ಲ್ ಮಾರ್ಕ್ಸ್ ಪ್ರೇರಕರು. ಮತಗಳು ಹತವಾಗುತ್ತಿವೆ ಜನ ಪಥಗಳು ಮೂಡುತ್ತಿವೆ ಎಂಬ ಸಾಲು ಮನುಜ ಮತ ವಿಶ್ವ ಪಥ ಎಂಬ ಕುವೆಂಪು ವಾಣಿಯಿಂದ ಪ್ರೇರಿತವಾಗಿದೆ. ಈಗ ಎರಡೂ ಚಳವಳಿ ಸ್ತಬ್ಧವಾಗಿರುವುದು ಕನ್ನಡ ಸಾಹಿತ್ಯ ಚರಿತ್ರೆಯ ಒಂದು ವಿಷಾದನೀಯ ದುರಂತ ಎಂದರು.