ಪುತ್ತೂರು| ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಆರೋಪ; ದೂರು, ಪ್ರತಿದೂರು ದಾಖಲು
ಪುತ್ತೂರು: ಸಾಲ ಮರುಪಾವತಿ ಮಾಡುವಂತೆ ಸೂಚನೆ ನೀಡಲು ಮನೆಯೊಂದಕ್ಕೆ ಹೋದ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಒಡ್ಡಿದ್ದಾರೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿ ಇಬ್ಬರ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿನಲ್ಲಿ ಬಂದ ಅಪರಿಚಿತರು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಮಾನಭಂಗಕ್ಕೆ ಯತ್ನಿಸಿ, ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆಂದು ಮನೆಯಲ್ಲಿದ್ದ ಮಹಿಳೆ ಪ್ರತಿದೂರು ನೀಡಿದ್ದಾರೆ.
ಮನೆಯಲ್ಲಿದ್ದ ಮಹಿಳೆಯ ದೂರು:-
ಘಟನೆಗೆ ಸಂಬಂಧಿಸಿ ಬಲ್ನಾಡು ಉಜುರಪಾದೆ ನಿವಾಸಿ ಕೀರ್ತಿ ಅವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಬ್ಯಾಂಕ್‌ನ ಮೂವರು ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ.
ಸೆ.25ರ ಮಧ್ಯಾಹ್ನ 3 ಗಂಟೆಗೆ ಗಂಡಸರು ಇಲ್ಲದ ಸಮಯದಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಮನೆಯಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿದಲ್ಲದೆ ವಿಚಾರಿಸಿದಾಗ ತಮ್ಮ ಗುರುತು ಪರಿಚಯ ನೀಡದೆ ನಮಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ನಿಮ್ಮ ಮನೆಯನ್ನು ಜಪ್ತಿ ಮಾಡಿ ನಿಮ್ಮನ್ನು ಬೀದಿಗೆ ಎಳೆಯುತ್ತೇವೆ ಎಂದು ಹೆದರಿಸಿದ್ದಾರೆ. ಆರೋಪಿಗಳ ಪೈಕಿ ಚೈತನ್ಯ ಮತ್ತು ಆಕಾಶ್ ಎಂಬವರು ನಿಮ್ಮ ಲೋನ್ ತೀರಿಸುವ ಬದಲು ನಮ್ಮೊಂದಿಗೆ ಬಂದರೆ ಸಾಕು ಎಂದು ಹೇಳಿ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾರೆ. ಈ ವೇಳೆ ಇನ್ನೋರ್ವ ಆರೋಪಿ ದಿವ್ಯಾಶ್ರೀ ಎಂಬವರು ಇಬ್ಬರು ಆರೋಪಿಗಳಿಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.