ಪುತ್ತೂರು: ಯುವಕನ ಹತ್ಯೆಗೆ ಯತ್ನ ಆರೋಪ; ಇಬ್ಬರು ಬಾಲಕರು ಸೇರಿ 9 ಮಂದಿ ಪೊಲೀಸರ ವಶಕ್ಕೆ
ಪುತ್ತೂರು: ಹಿಂದುತ್ವ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಮುಕ್ರಂಪಾಡಿಯಲ್ಲಿರುವ ಕಚೇರಿಯ ಮುಂಭಾಗದಲ್ಲಿ ಯುವಕನೋರ್ವ ತಂಡದೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿ ಬೊಬ್ಬೆ ಹೊಡೆದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಘಟನೆಗೆ ಸಂಬಂಧಿಸಿ ಪುತ್ತೂರು ಶಾಂತಿಗೋಡು ಗ್ರಾಮದ ದಿನೇಶ ಪಂಜಿಗ (38), ನರಿಮೊಗರು ಗ್ರಾಮದ ಭವಿತ್ (19), ಬೊಳ್ವಾರು ನಿವಾಸಿ ಮನ್ವಿತ್ (19), ಆರ್ಯಾಪು ಗ್ರಾಮದ ಜಯಪ್ರಕಾಶ (18), ಚಿಕ್ಕಮುಡ್ನೂರು ಗ್ರಾಮದ ಚರಣ್ (23), ಪುತ್ತೂರು ಬನ್ನೂರು ಗ್ರಾಮದ ಮನೀಶ (23), ಪುತ್ತೂರು ಕಸಬಾ ಗ್ರಾಮದ ವಿನೀತ್ (19) ಹಾಗೂ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಅವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ದಿನೇಶ್ ಪಂಜಿಗ ಎಂಬಾತ ತಂಡದೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿದ್ದು, ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿಗ ಮನೀಶ್ ಕುಲಾಲ್ ಬನ್ನೂರು ಎಂಬವರನ್ನು ಗುರಿಯಾಗಿಟ್ಟುಗೊಂಡು ಬಂದಿದ್ದರು ಎಂದು ಆರೋಪಿಸಲಾಗಿದೆ. ಈ ವೇಳೆ ಪುತ್ತಿಲ ಕಚೇರಿಯಲ್ಲಿ ಕೃಷ್ಣಪ್ರಸಾದ್ ಶೆಟ್ಟಿ ಮತ್ತಿತರರು ಇದ್ದರು. ಮನೀಶ್ ಕುಲಾಲ್ ಕಚೇರಿಯಲ್ಲಿ ಇರಲಿಲ್ಲ. ಮಾಹಿತಿ ತಿಳಿದ ಮನೀಶ್ ಕುಲಾಲ್ ಪೊಲೀಸರಿಗೆ ದೂರು ನೀಡಿದ್ದರು.
ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಇಬ್ಬರು ಬಾಲಕರ ಸಹಿತ 9 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.