ಮಂಗಳೂರು| ಬಂದರ್ನಲ್ಲಿ ರಸ್ತೆ ಅಪಘಾತ: ಮೃತ ಕಸಬಾ ಬೆಂಗ್ರೆಯ ಖಾಸಗಿ ಶಾಲೆಯ ಶಿಕ್ಷಕಿಯ ಅಂತ್ಯಕ್ರಿಯೆ
ಶಾಹಿದಾ
ಮಂಗಳೂರು: ನಗರದ ಬಂದರ್ನಲ್ಲಿ ಶುಕ್ರವಾರ ಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಸಬಾ ಬೆಂಗರೆಯ ಖಾಸಗಿ ಶಾಲೆಯ ಶಿಕ್ಷಕಿ ಶಾಹಿದಾ ಕೆ.ಪಿ (47) ಅವರ ಅಂತ್ಯಕ್ರಿಯೆಯನ್ನು ಕಸಬಾ ಬೆಂಗರೆಯ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಬಳಿ ದಫನ ಭೂಮಿಯಲ್ಲಿ ರಾತ್ರಿ ಅಂತ್ಯಕ್ರಿಯೆ ನಡೆಸಲಾಯಿತು.
ಕಸಬಾ ಬೆಂಗರೆಯ ಎಆರ್ಕೆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶಾಹಿದಾ ಅವರು ಶುಕ್ರವಾರ ಬೆಳಗ್ಗೆ ಶಾಲೆಗೆ ತನ್ನ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಕಾರು ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದರು. ಈ ಬಗ್ಗೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯ ಎಎಸ್ಸೈ ಮುಹಮ್ಮದ್ ಅವರ ಪತ್ನಿಯಾಗಿರುವ ಶಾಹಿದಾ ಒಬ್ಬ ಪುತ್ರ ಮತ್ತು ಇಬ್ಬರು ಹೆಣ್ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮುಹಮ್ಮದ್ ಅವರು ಪಾವೂರು ಗ್ರಾಮದ ಇನೋಳಿಯವರಾಗಿದ್ದು, ಶಾಹಿದಾ ಕಸಬಾ ಬೆಂಗರೆಯ ನಿವಾಸಿಯಾಗಿದ್ದರು. ಮುಹಮ್ಮದ್ ಮತ್ತು ಶಾಹಿದಾ ದಂಪತಿಯು ಪಿಲಾರು ಸಮೀಪದ ದಾರಂದಬಾಗಿಲು ಎಂಬಲ್ಲಿ ವಾಸವಾಗಿದ್ದರು.
ಕಳೆದ 8 ವರ್ಷದಿಂದ ಕಸಬಾ ಬೆಂಗರೆಯ ಎಆರ್ಕೆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶಾಹಿದಾ ಶುಕ್ರವಾರ ಬೆಳಗ್ಗೆ ತನ್ನ ಮನೆಯಿಂದ ಶಾಲೆಗೆ ತೆರಳುವಾಗ ಬಂದರ್ನಲ್ಲಿ ಈ ಅಪಘಾತ ಸಂಭವಿಸಿತು.
ಜಮಾಅತೆ ಇಸ್ಲಾಮೀ ಹಿಂದ್ನ ಮಹಿಳಾ ಸಂಘಟನೆಯಲ್ಲಿದ್ದ ಇವರು ಸಮಾಜ ಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶಾಲೆಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವುದು, ಕಲಿಕೆಯಲ್ಲಿ ತೀರಾ ಹಿಂದುಳಿದಿದ್ದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿ ನೀಡುವುದು, ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು, ವಿದ್ಯಾರ್ಥಿವೇತನ ದೊರಕಿಸಿಕೊಡುವುದು ಇತ್ಯಾದಿಯಾಗಿ ಸಮಾಜ ಸೇವೆಯಲ್ಲಿ ನಿರತರಾಗಿದ್ದರು.
ಮಂಗಳೂರು ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲೂ ಇವರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಸ್ಪರ್ಧಿಸಿದ್ದರು.
*ಬೆಂಗರೆ ಕಾರ್ಪೊರೆಟರ್ ಮುನೀಬ್ ಬೆಂಗರೆ ಮತ್ತು ಕಸಬಾ ಬೆಂಗರೆಯ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ನ ಅಧ್ಯಕ್ಷ ಬಿಲಾಲ್ ಮೊಯ್ದಿನ್ ಸಂತಾಪ ಸೂಚಿಸಿದ್ದಾರೆ.