ಬಜೆಟ್ ನಲ್ಲಿ ಕರಾವಳಿಯ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ: ಯು.ಟಿ.ಖಾದರ್
"ಕಡಲ್ಕೊರೆತ ತಡೆಗೆ ₹200 ಕೋಟಿ, ವೈದ್ಯಕೀಯ ಕಾಲೇಜು, ಉದ್ಯಮಶೀಲತೆ ಒತ್ತು, ಅಡಿಕೆ ಬೆಳೆ ಸಂರಕ್ಷಣೆ"

ಮಂಗಳೂರು,ಮಾ.15: ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾರ್ಚ್ 7ರಂದು ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹಲವಾರು ಯೋಜನೆಗಳು ಮಂಜೂರಾಗಿದೆ. ಈ ಪೈಕಿ ಕರಾವಳಿಯ ಪ್ರಮುಖ ಸಮಸ್ಯೆಯಾದ ಕಡಲ್ಕೊರೆತ ತಡೆಗೆ ಶಾಶ್ವತ ಯೋಜನೆ ರೂಪಿಸಲು ರೂ. 200 ಕೋಟಿ ಮೀಸಲಾಗಿಡಲಾಗಿದೆ ಎಂದು ವಿಧಾನ ಸಭಾಧ್ಯಕ್ಷ ಹಾಗೂ ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಬಜೆಟ್ ನಲ್ಲಿ ನಮೂದಿಸಲಾದ ಪ್ರಮುಖ ಯೋಜನೆಗಳು :-
1. ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಎರಡು ಹೊಸ ಸೇತುವೆಗಳನ್ನು ನಿರ್ಮಿಸಲಾಗುವುದು.
2. ಮಂಗಳೂರಿನ ವೆಸ್ಲಾಕ್ ಆಸ್ಪತ್ರೆ ಸೇರಿದಂತೆ ಪ್ರಮುಖ ಆಸ್ಪತ್ರೆಗಳನ್ನು ಒಟ್ಟು 650 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗುವುದು.
3. ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಈಗಿರುವ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಯನ್ನು ಉನ್ನತೀಕರಿಸಲು ಪ್ರಸಕ್ತ ವರ್ಷದಲ್ಲಿ ಕ್ರಮ ವಹಿಸಲಾಗುವುದು.
4. ಕರ್ನಾಟಕ ರಾಜ್ಯದಲ್ಲಿ ಜಲಸಾರಿಗೆ ಕ್ಷೇತ್ರದಲ್ಲಿ ಕರಾವಳಿಯಲ್ಲಿ ವ್ಯವಸ್ಥಿತ ಮೂಲಸೌಲಭ್ಯ ಒದಗಿಸಲು ಹಾಗೂ ನೌಕಾ ಚಟುವಟಿಕೆಗಳ ನಿರ್ವಹಣೆಯಲ್ಲಿ ದಕ್ಷತೆ ತರಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಕ್ರೂಸ್. ವಾಟರ್ ಮೆಟ್ರೋ. ಕೋಸ್ಟಲ್ ಬರ್ತ್ಯೋಜನೆಗಳಿಗೆ ವಿಸ್ತ್ರತ ಯೋಜನೆ ಸಿದ್ಧಪಡಿಸಲಾಗುವುದು.
5. ಪ್ರತಿ ವರ್ಷವೂ ಮುಂಗಾರು ಮಳೆಯ ಸಮಯದಲ್ಲಿ ಕರಾವಳಿ ತೀರದಲ್ಲಿ ಕಡಲು ಕೊರೆತ ಸಂಭವಿಸುವುದನ್ನು ತಡೆಗಟ್ಟಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗುವುದು:
► ಕಡಲು ಕೊರೆತದ ಪರಿಣಾಮಗಳನ್ನು ಸಮಗ್ರವಾಗಿ ಎದುರಿಸಲು ಶೋರ್ಲೈನ್ ಮ್ಯಾನೇಜ್ಮೆಂಟ್ ಪ್ಲಾನ್ ಅನ್ನು ಚೆನ್ನೈ ಐ.ಐ.ಟಿ ವತಿಯಿಂದ ತಯಾರಿಸಲಾಗಿದೆ.
► ಶೋರ್ಲೈನ್ ಮ್ಯಾನೇಜ್ಮೆಂಟ್ ಪ್ಲಾನ್ ಜಾರಿಗೊಳಿಸಲು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಪ್ರತ್ಯೇಕವಾಗಿ ವಿಸ್ತತ ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗುವುದು.
6. ಬೆಂಗಳೂರು ಹೊರತುಪಡಿಸಿ ಇತರ ನಗರಗಳಲ್ಲಿಯೂ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು. 1,000 ಕೋಟಿ ರೂ. ವೆಚ್ಚದಲ್ಲಿ ಸ್ಥಳೀಯ ಆರ್ಥಿಕ ಆಕ್ಸಿಲರೇಟರ್ ಕಾರ್ಯಕ್ರಮ -(LEAP )ಅನ್ನು ಪ್ರಾರಂಭಿಸಲಾಗುವುದು. ಇದಕ್ಕೆ ಪ್ರಸಕ್ತ ಸಾಲಿನಲ್ಲಿ 200 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ಇದರಿಂದ ರಾಜ್ಯಾದ್ಯಂತ 5 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ. ಈ ಕಾರ್ಯಕ್ರಮದಡಿಯಲ್ಲಿ
ಅ) ಮಂಗಳೂರು-ಉಡುಪಿ-ಮಣಿಪಾಲ್ ನಲ್ಲಿ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು.
ಆ) ಕಿಯೋನಿಕ್ಸ್ ವತಿಯಿಂದ ಮಂಗಳೂರಿನಲ್ಲಿ ಪ್ಲಗ್-ಅಂಡ್-ಪ್ಲೇ ಸೌಲಭ್ಯ ಒಳಗೊಂಡ ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರ (GTC) ಸ್ಥಾಪಿಸಲಾಗುವುದು.
7. ಉಳ್ಳಾಲದಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರಿಗಾಗಿ ವಸತಿ ಸಹಿತ ಪಿ.ಯು. ಕಾಲೇಜನ್ನು ಸ್ಥಾಪಿಸಲಾಗುವುದು.
8. ಕೌಶಲ್ಯಾಭಿವೃದ್ಧಿಗೆ ಮಂಗಳೂರು ಕೆಜಿಟಿಟಿಐ ಕೇಂದ್ರದಲ್ಲಿ 'Industry-4.0' ಗೆ ಅನುಗುಣವಾಗಿ ತಂತ್ರಜ್ಞಾನ ಆಧಾರಿತ ಪಠ್ಯಕ್ರಮದೊಂದಿಗೆ ಹೊಸ ಪ್ರಯೋಗಾಲಯ ಸ್ಥಾಪಿಸಲಾಗುವುದು.
9. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಅಭಿವೃದ್ಧಿ ಹಾಗೂ ರಸ್ತೆಬದಿ ಸೌಲಭ್ಯಗಳನ್ನು (Highway Hubs) ಉನ್ನತೀಕರಿಸುವ ಮೂಲಕ ಶೈಕ್ಷಣಿಕ. ಆರೋಗ್ಯ, ಸಾಹಸ, ಪರಿಸರ, ಜಲಸಾರಿಗೆ ಹಾಗೂ ಕಡಲ ತೀರದ ಪ್ರವಾಸೋದ್ಯಮಗಳಿಗೆ ಲಭ್ಯವಿರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಲಾಗುವುದು.
10. ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ 3 ಕೋಟಿ ರೂ. ಒದಗಿಸಲಾಗುವುದು.
11. ಕಂಬಳ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುವುದು.
12. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಉಳ್ಳಾಲದಲ್ಲಿ ಕುಡಿಯುವ ನೀರು ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
13. ರಾಜ್ಯ ವಿಪತ್ತು ಉಪಶಮನ ನಿಧಿ ಹಾಗೂ ರಾಷ್ಟ್ರೀಯ ವಿಪತ್ತು ಉಪಶಮನ ನಿಧಿ ಅನುದಾನದಡಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ. ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಭೂ ಕುಸಿತ ತಡೆಯುವ ಕಾಮಗಾರಿ ನಡೆಯಲಿದೆ.
14. ಕರಾವಳಿ ಜಿಲ್ಲೆಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಸಮುದ್ರ ಕೊರೆತ ಅಪಾಯ ತಡೆಗೆ ಯೋಜನೆ.
15. ರಾಜ್ಯದಲ್ಲಿ ವಾಹನ ಸಂಚಾರವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ ನಿಯಂತ್ರಿಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ Al ಆಧಾರಿತ ವಿದ್ಯುನ್ಮಾನ ಕ್ಯಾಮರಾಗಳನ್ನು ಅಳವಡಿಸಲಾಗುವುದು.
16. ಮಂಗಳೂರಿನಲ್ಲಿರುವ ಮೀನುಗಾರಿಕೆ ಕಾಲೇಜಿಗೆ ಪ್ರಸ್ತುತ ನಿಗದಿಪಡಿಸಿರುವ ವಿದ್ಯಾರ್ಥಿಗಳ ಸಂಖ್ಯಾಬಲವನ್ನು ದ್ವಿಗುಣಗೊಳಿಸಲಾಗುವುದು.
17. ಕರಾವಳಿ ಜಿಲ್ಲೆಗಳಲ್ಲಿನ ಮೀನುಗಾರಿಕೆ ಸಂಪರ್ಕ ರಸ್ತೆಗಳನ್ನು ನಬಾರ್ಡ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲು 30 ಕೋಟಿ ರೂ. ಒದಗಿಸಲಾಗುವುದು.
18. ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ಭಾರತ್ ಸೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಯುವಕರ ತರಬೇತಿ ಕೇಂದ್ರದ ಅಭಿವೃದ್ಧಿಗಾಗಿ ಎರಡು ಕೋಟಿ ರೂ. ಒದಗಿಸಲಾಗುವುದು.
19. ಎಲೆ ಚುಕ್ಕೆ ರೋಗದ ಬಾಧೆಯಿಂದ ಅಡಿಕೆ ತೋಟಗಳನ್ನು ರಕ್ಷಿಸಲು ಸಸ್ಯ ಸಂರಕ್ಷಣಾ ಕ್ರಮಗಳಿಗಾಗಿ 62 ಕೋಟಿ ರೂ. ಒದಗಿಸಲಾಗಿದೆ.
ಇದರಿಂದ ಜಿಲ್ಲೆಯ ಸಾಕಷ್ಟು ಅಭಿವೃದ್ಧಿ ಗೆ ಸಹಕಾರಿಯಾಗಲಿದೆ ಜಿಲ್ಲೆಯ ಸೌಹಾರ್ದ ಪರಂಪರೆಯ ರಕ್ಷಣೆ ಮುಖ್ಯ ಇದಕ್ಕೆ ಪೂರಕವಾಗಿ ಸಂವಿಧಾನದ ಮೌಲ್ಯಗಳ ರಕ್ಷಣೆಯೂ ಮುಖ್ಯ ವಕ್ಫ್ ತಿದ್ದು ಪಡಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದಲ್ಲಿ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.