ಬೆಂಗ್ರೆಯ ಸರಕಾರಿ ಶಾಲೆಗೆ ಅಗತ್ಯ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಎಸ್‌ಐಒ ಧರಣಿ
ಬೆಂಗ್ರೆ: ಬೆಂಗ್ರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಎಸ್‌ಐಒ ಶುಕ್ರವಾರ ಬೆಂಗ್ರೆಯ ಶಾಲೆಯ ಮುಂದೆ ಧರಣಿ ನಡೆಸಿ, ಒತ್ತಾಯಿಸಿದೆ.
ಸ್ಥಳೀಯರು ಮತ್ತು ಆ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರು ಭಾಗವಹಿಸಿ ಶಾಲೆಗೆ ಇನ್ನೂ ಮೂಲಭೂತ ಸೌಲಭ್ಯವನ್ನು ಒದಗಿಸದಿರುವ ಬಗ್ಗೆ ಪ್ರತಿಭಟನೆ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಆಸಿಫ್ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ, ಅನೇಕ ಬಾರಿ ಇಲ್ಲಿನ ಸಮಸ್ಯೆಗಳ ಕುರಿತು ಶಿಕ್ಷಣ ಇಲಾಖೆಯ ಗಮನಕ್ಕೆ ತರುವುದರ ಜೊತೆಗೆ ಮನವಿ ಪತ್ರವನ್ನು ಸಲ್ಲಿಸಿದರೂ ಇದುವರೆಗೂ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಸರಕಾರವು ನೀಡುವ ಸವಲತ್ತು ಅದು ಔದಾರ್ಯವಲ್ಲ ಬದಲಾಗಿ ಮಕ್ಕಳ ಹಕ್ಕು ಮತ್ತು ಅದನ್ನು ಖಾತರಿಪಡಿಸುವುದು ಸರ್ಕಾರದ ಹೊಣೆಗಾರಿಕೆ ಎಂದರು. ಈ ಶಾಲೆಯಲ್ಲಿ ಮಧ್ಯಮ ವರ್ಗದ ಬಡ ಕುಟುಂಬದ ಹಿನ್ನೆಲೆಯುಳ್ಳ ಮಕ್ಕಳು ಅಭ್ಯಸುತ್ತಿದ್ದು, ಅವರಿಗೂ ಸಹ ಶಿಕ್ಷಣ ಹಕ್ಕು ಕಾಯ್ದೆ ಒದಗಿಸುವ ಗುಣಮಟ್ಟ ಶಿಕ್ಷಣ ದೊರಕಿಸಬೇಕು ಎಂದು ಆಗ್ರಹಿಸಿದರು.
ಇದೆ ಸಂದರ್ಭ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪೋಷಕರು ಮತ್ತು ಶಿಕ್ಷಣದ ಮೂಲ ಭಾಗಿದಾರರು ತಮ್ಮ ಆಗ್ರಹವನ್ನು ಸಹ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ನ ಜಿಲ್ಲಾಧ್ಯಕ್ಷ ಗಪೂರ್ ಕುಳಾಯಿ ಅವರು ಮಾತನಾಡಿ ಶಾಲೆಯ ಅವಸ್ಥೆ ಮತ್ತು ಅದಕ್ಕಾಗಿ ಜನರು ಬೀದಿಗಿಳಿದು ಪ್ರತಿಭಟಿಸುವ ಮೂಲಕ ಸರ್ಕಾರಕ್ಕೆ ಆಗ್ರಹ ಪಡಿಸುವುದು ಖೇದಕರ ಸಂಗತಿ, ಇಲಾಖೆಯೇ ಖುದ್ದಾಗಿ ಶಾಲೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವ ಬದಲಾಗಿ ಸುಮ್ಮನೆ ಕುಳಿತಿರುವುದು ಸರಿಯಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಐಒ ಬೆಂಗ್ರೆಯ ಸಂಚಾಲಕರಾದ ಅಸ್ಮಿನಾ ಅವರು ಮಾತನಾಡಿ ಸರಕಾರಿ ಶಿಕ್ಷಣ ವ್ಯವಸ್ಥೆ ಬಲಪಡಿಸಲು ನಾವೆಲ್ಲರೂ ಸೇರಿ ಹೋರಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಸ್‌ಐಒ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಆಸಿಫ್, ಜಿಲ್ಲಾ ಕಾರ್ಯದರ್ಶಿ ಅಯಾನ್ ಮತ್ತು ಬೆಂಗ್ರೆ ಘಟಕದ ಅಧ್ಯಕ್ಷ ಅಬ್ದುಲ್ ರಫಿ ಹಾಗೂ ಮತ್ತಿತರ ಕಾರ್ಯಕರ್ತರು ಮತ್ತು ಊರಿನ ಜನರು ಉಪಸ್ಥಿತರಿದ್ದರು.