ಸುಳ್ಯ| ಎನ್‍ಐಎ ಅಧಿಕಾರಿಗಳ ತಂಡ ದಾಳಿ; ಬಿಜು ಅಬ್ರಹಾಂ ಬಂಧನ
ʼಉಗ್ರ ಕೃತ್ಯಕ್ಕೆ ಸಹಕಾರ ನೀಡಿದ ಆರೋಪʼ
ಸುಳ್ಯ: ಎನ್‍ಐಎ ಅಧಿಕಾರಿಗಳ ತಂಡವೊಂದು ಬೆಳ್ಳಾರೆ ಠಾಣೆ ವ್ಯಾಪ್ತಿಯ ಎಣ್ಣೂರು ಸಮೀಪದ ಕಲ್ಲೇರಿಯ ಮನೆಯೊಂದಕ್ಕೆ ದಾಳಿ ನಡೆಸಿ ಉಗ್ರಕೃತ್ಯಕ್ಕೆ ಸಹಕಾರ ನೀಡಿದ ಆರೋಪದಲ್ಲಿ ಕೇರಳ ಮೂಲದ ಎಣ್ಮೂರಿನ ವ್ಯಕ್ತಿಯನ್ನು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.
ಕೇರಳ ಮೂಲದ ಬಿಜು ಅಬ್ರಹಾಂ ಎಂಬಾತನನ್ನು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರಿನ ಸುಲ್ತಾನ್ ಪಾಳ್ಯ ಎಂಬಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಸಂಬಂಧಿಸಿದ ಆರೋಪಿಗಳಿಗೆ ಸಹಕರಿಸಿದ ಆರೋಪದಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಬಿಜು ಅಬ್ರಹಾಂ ನನ್ನು ಬಂಧಿಸಿದ್ದಾರೆ.
ಬಿಜು ಅಬ್ರಹಾಂ ಎಣ್ಮೂರಿನ ಚಿದಾನಂದ ಎಂಬವರ ಮನೆಯಲ್ಲಿ ಕಳೆದ 2 ದಿನಗಳಿಂದ ಬಾಡಿಗೆಗೆ ಪಡೆದು ವಾಸಿಸುತ್ತಿದ್ದ. ಈ ಹಿನ್ನಲೆಯಲ್ಲಿ ಎನ್‍ಐಎ ತಂಡ ಮಂಗಳವಾರ ಬೆಳಗ್ಗೆ ಸುಳ್ಯದ ಎಣ್ಮೂರು ಸಮೀಪದ ಕಲ್ಲೇರಿಯ ಚಿದಾನಂದ ಅವರ ಮನೆಗೆ ದಾಳಿ ನಡೆಸಿ ಆರೋಪಿ ತನಿಖೆಗೆ ಹಾಜರಾಗಲು ಸಮನ್ಸ್ ನೀಡಿದರು.
ಎನ್‍ಐಎ ತಂಡ ದಾಳಿ ವೇಳೆ ಬಾಡಿಗೆ ಮನೆಯಲ್ಲೇ ಇದ್ದ ಆರೋಪಿ ಬಿಜು ಅಬ್ರಹಾಂನಿಗೆ ಸ್ಥಳದಲ್ಲಿಯೇ ಸಮನ್ಸ್ ನೀಡಿದ ಎನ್‍ಐಎ ತಂಡ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡು ಎನ್‍ಐಎ ಕೋರ್ಟಿಗೆ ಹಾಜರು ಪಡಿಸಿದೆ.
ಬಿಜು ಅಬ್ರಹಾಂ ಕಳೆದ ಕೆಲವು ವರ್ಷಗಳಿಂದ ಎಡಮಂಗಲದ ಕರಿಂಬಿಲದಲ್ಲಿ ರಬ್ಬರ್ ತೋಟವೊಂದನ್ನು ಲೀಸಿಗೆ ಪಡೆದು ಟ್ಯಾಪರ್ ಆಗಿ ಕೆಲಸ ಮಾಡುತ್ತಿದ್ದ. ಆ ತೋಟದ ಲೀಸ್ ಅವಧಿ ಮುಗಿದ ಹಿನ್ನಲೆಯಲ್ಲಿ ಅಲ್ಲಿಂದ ಬಂದು ಎಣ್ಮೂರಿನ ಕಲ್ಲೇರಿಯ ಚಿದಾನಂದ ಎಂಬವರ ಬಾಡಿಗೆ ಮನೆಯಲ್ಲಿ ಇತರ ಎರಡು ಮಂದಿಯ ಜೊತೆಗೆ 2 ದಿನಗಳಿಂದ ವಾಸ ಮಾಡಿಕೊಂಡಿದ್ದ. ಎನ್‍ಐಎ ದಾಳಿ ಸಂದರ್ಭ ಮನೆಯಲ್ಲೇ ಇದ್ದ ಕಾರಣ ಆರೋಪಿಯನ್ನು ವಶಕ್ಕೆ ಪಡೆದು ಕೋರ್ಟಿಗೆ ಹಾಜರು ಪಡಿಸಿದ್ದಾರೆ.