ಚಿಕಿತ್ಸೆ ವೇಳೆ ಬಾಲಕನ ಸಾವು ಪ್ರಕರಣ: ಶಸ್ತ್ರ ಚಿಕಿತ್ಸಾ ಕೊಠಡಿಗೆ ಬೀಗ; ಆಸ್ಪತ್ರೆಯ ದಾಖಲೆ, ಬಾಲಕನ ವೈದ್ಯಕೀಯ ವರದಿ ವಶಕ್ಕೆ
ಸುರತ್ಕಲ್: ಅಪಘಾತ ಸಂಬಂಧ ಇಲ್ಲಿನ ಅಥರ್ವ ಆರ್ಥೊ ಕೇರ್ ನಲ್ಲಿ ದಾಖಲಾಗಿದ್ದ ಬಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗ ಮತ್ತು ಕೊಠಡಿಗೆ ಬೀಗ ಮುದ್ರೆ ಹಾಕಿದ್ದಾರೆ.
ಗುರುವಾರ ಬೆಳಗ್ಗಿನಿಂದ ಕಾರ್ಯಪ್ರತ್ತರಾಗಿರುವ ಸುರತ್ಕಲ್ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದ ತಂಡ ಆಸ್ಪತ್ರೆಯ ಕೆಲವು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಬಾಲಕ ಮೊಯ್ದಿನ್ ಫರ್ಹಾನ್ ಚಿಕಿತ್ಸೆಗೆ ದಾಖಲಾದ ಬಳಿಕ ಆತನ ಸಂಪೂರ್ಣ ವೈದ್ಯಕೀಯ ವರದಿಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸ್ ಮೂಲ ಮಾಹಿತಿ ನೀಡಿದೆ.
ಬುಧವಾರ ತಡರಾತ್ರಿ 1 ಗಂಟೆಯ ಸುಮಾರಿಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ 3-4 ತಜ್ಞ ವೈದ್ಯರ ತಂಡದಿಂದ ಬಾಲಕನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಾಲಕನ ಕುಟುಂಬಸ್ಥರ ದೂರು ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಎಲ್ಲಾ ದೃಷ್ಟಿಕೋನಗಳಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆಸ್ಪತ್ರೆಗೆ ಈಗಾಗಲೇ ಕೆಲವು ಸೂಚನೆಗಳನ್ನೂ ನೀಡಲಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿ ಹಾಲೂರು ತಿಮ್ಮಯ್ಯ ಮಾಹಿತಿ ನೀಡಿದ್ದಾರೆ.
8 ಮಂದಿ ತಜ್ಞ ವೈದ್ಯರ ತನಿಖಾ ತಂಡ ರಚನೆ
ಅಥರ್ವ ಆರ್ಥೊ ಕೇರ್ ನಲ್ಲಿ ಬಾಲಕನ ಮೃತ್ಯುಗೆ ಸಂಬಂಧಿಸಿದಂತೆ ಕುಟುಂಬಸ್ಥರು ಮತ್ತು ಮುಖಂಡರ ಆಗ್ರಹದಂತೆ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯಲ್ಲಿ 8 ಮಂದಿ ಇದ್ದು, ದ.ಕ. ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿ ಹಾಲೂರು ತಿಮ್ಮಯ್ಯ ಮುಖ್ಯಸ್ಥರಾಗಿದ್ದಾರೆ. ಇವರೊಂದಿಗೆ ನಗರದ ಖಾಸಗಿ ಆಸ್ಪತ್ರೆಗಳಾದ ಕೆಎಂಸಿ, ಎ.ಜೆ., ಫಾದರ್ ಮುಲ್ಲರ್, ಯೆನೆಪೋಯ ಆಸ್ಪತ್ರೆಗಳ ತಲಾ ಒಬ್ಬರು ತಜ್ಞ ವೈದ್ಯರು ಹಾಗೂ ವೆನ್ಲಾಕ್ ಆಸ್ಪತ್ರೆಯ ಇಬ್ಬರು, ಓರ್ವ ನೋಡಲ್ ಅಧಿಕಾರಿಯನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ತಿಮ್ಮಯ್ಯ ಅವರು ಮಾಹಿತಿ ನೀಡಿದ್ದಾರೆ.
ಕುಳಾಯಿಗಡ್ಡೆ ಖಬರ್‌ಸ್ತಾನದಲ್ಲಿ ದಫನ
ಬುಧವಾರ ತಡರಾತ್ರಿ 1ಗಂಟೆಗೆ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಗುರುವಾರ ಮೃತದೇಹವನ್ನು ಬೆಳಗ್ಗಿನ ಜಾವ 3.50ರ ಸುಮಾರಿಗೆ ಅವರ ನಿವಾಸಕ್ಕೆ ತರಲಾಯಿತು. ಬೆಳಗ್ಗೆ 6ಗಂಟೆಯ ಸುಮಾರಿಗೆ ಫರ್ಹಾನ್ ಅವರ ತಂದೆ ಹಸನ್ ಬಾವ ಅವರು ವಿದೇಶದಿಂದ ಮನೆ ಮುಟ್ಟಿದರು. ಬೆಳಗ್ಗೆ ಅವರ ನಿವಾಸದಲ್ಲೇ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಬಳಿಕ ಕುಳಾಯಿ ಜುಮಾ ಮಸೀದಿಯಲ್ಲಿ ಮಯ್ಯತ್ ನಮಾಝ್ ನೆರವೇರಿಸಿ ಕುಳಾಯಿಗುಡ್ಡೆಯ ಖಬರ್‌ಸ್ತಾನದಲ್ಲಿ ದಫನ ಕಾರ್ಯ ನಡೆಯಿತು.
ಅಥರ್ವ ಆಸ್ಪತ್ರೆಯ ವೈದ್ಯರುಗಳ ತಪ್ಪಾದ ಚಿಕಿತ್ಸಾ ಕ್ರಮ, ಅರಿವಳಿಕೆ ನೀಡುವಲ್ಲಿನ ಎಡವಟ್ಟಿನಿಂದಾಗಿ ಸಣ್ಣ ಪ್ರಾಯದ ಅಮಾಯಕ ಬಾಲಕ ತನ್ನ ಪ್ರಾಣವನ್ನೇ ಕಳೆದುಕೊಳ್ಳಲು ಕಾರಣವಾಗಿದೆ. ಮೆಡಿಕಲ್ ಹಬ್ ಎಂದು ಕರೆಯಲಾಗುವ ಮಂಗಳೂರಿನಲ್ಲಿ ಇಂತಹ ಪ್ರಕರಣಗಳು ದಿನನಿತ್ಯ ಒಂದಲ್ಲ ಒಂದು ಖಾಸಗಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು ಈ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆಯ ಮೌನ ಖಾಸಗಿ ಆಸ್ಪತ್ರೆಗಳಿಗೆ ಲೂಟಿ ನಡೆಸಲು ಅವಕಾಶ ಮಾಡಿಕೊಟ್ಟಂತಾಗಿದೆ. ತಪ್ಪಾದ ಚಿಕಿತ್ಸಾ ಕ್ರಮದಿಂದ ಪ್ರಾಣವನ್ನೇ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಲು ಜಿಲ್ಲಾಡಳಿತವೇ ನೇರ ಹೊಣೆಯಾಗಲಿದೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಆಪಾದಿಸಿದೆ.
ಕರ್ತವ್ಯ ಲೋಪ ಎಸಗಿದ ವೈದ್ಯರು ಮತ್ತು ಆಸ್ಪತ್ರೆಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಮಾತ್ರವಲ್ಲ ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಒಂದು ಕೋಟಿ ಆರ್ಥಿಕ ಪರಿಹಾರ ನೀಡಬೇಕು ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಹಾಗೂ ಬಾಲಕ ಫರ್ಹಾನ್ ಸಾವಿಗೆ ಕಾರಣರಾದ ಅಥರ್ವ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಿ ಅನಾಹುತಕ್ಕೆ ಕಾರಣರಾದ ವೈದ್ಯರನ್ನು ವೈದ್ಯಕೀಯ ಸೇವೆಯಿಂದ ಅಮಾನತಿನಲ್ಲಿಟ್ಟು ತನಿಖೆ ನಡೆಸಬೇಕು. ತಪ್ಪಿತಸ್ಥ ವೈದ್ಯರು ಮತ್ತು ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ವಿಫಲರಾದರೆ ಸಂತ್ರಸ್ತ ಕುಟುಂಬ ಮತ್ತು ಸಾರ್ವಜನಿಕರನ್ನು ಸಂಘಟಿಸಿ ಹೋರಾಟ ಹಮ್ಮಿಕೊಳ್ಳಲಿದ್ದೇವೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮತ್ತು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.