ಸುರತ್ಕಲ್: ಖಾಸಗಿ ಬಸ್ ಢಿಕ್ಕಿ; ರಸ್ತೆ ದಾಟಲು ನಿಂತಿದ್ದ ಇಬ್ಬರು ಯುವಕರಿಗೆ ಗಂಭೀರ ಗಾಯ
ಅರಾಫತ್, ಮುಹಮ್ಮದ್ ಶಾಹಿಲ್
ಸುರತ್ಕಲ್: ಖಾಸಗಿ ಎಕ್ಸ್ ಪ್ರೆಸ್ ಬಸ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಗಂಭೀರ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೊಸಬೆಟ್ಟು ಎಂಬಲ್ಲಿ ವರದಿಯಾಗಿದೆ.
ಗಾಯಗೊಂಡವರನ್ನು ಹಳೆಯಂಗಡಿ ಇಂದಿರಾ ನಗರ ನಿವಾಸಿ ಪುತ್ತುಮೋನು ಎಂಬವರ ಪುತ್ರ ಮುಹಮ್ಮದ್ ಶಾಹಿಲ್ (20) ಮತ್ತು ಪಕ್ಷಿಕೆರೆ ಹೊಸಕಾಡು ನಿವಾಸಿ ಇಮ್ತಿಯಾಝ್ ಎಂಬವರ ಪುತ್ರ ಅರಾಫತ್ (19) ಎಂದು ತಿಳಿದು ಬಂದಿದೆ.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಎಂಬಲ್ಲಿ ರಸ್ತೆ ದಾಟಲು ನಿಂತಿದ್ದ ವೇಳೆ ಮಂಗಳೂರು ನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ಬಸ್ ಚಾಲಕನ ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯ ಚಾಲನೆಯಿಂದಾಗಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ರಸ್ತೆದಾಟಲು ನಿಂತಿದ್ದ ಯುವಕರಿಗೆ ಢಿಕ್ಕಿ ಹಿಡೆದಿದೆ.
ಘಟನೆಯಿಂದ ಅರಾಫತ್ ಅವರಿಗೆ ಕೈ, ಕಾಲು, ತಲೆಗೆ ಗಂಭೀರ ಗಾಯಗಳಾಗಿದೆ. ಸಾಹಿಲ್ ಅವರೂ ಗಂಭೀರ ಗಾಯಗೊಂಡಿದ್ದು, ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿ ಮಂಗಳೂರು ಉತ್ತರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.